ಕನಗನಮರಡಿಗೆ ತಲೆ ಹಾಕದ ರಾಜಕಾರಣಿಗಳು, ಪರದಾಡುತ್ತಿರುವ ಕುಟುಂಬಸ್ಥರು
Recommended Video

ಮೈಸೂರು, ನವೆಂಬರ್. 29:ಮಂಡ್ಯದ ಪಾಂಡವಪುರದ ಬಳಿಯ ಕನಗನಮರಡಿ ಖಾಸಗಿ ಬಸ್ ದುರಂತದಲ್ಲಿ ಕಳೆದ ಶನಿವಾರವಷ್ಟೇ 30 ಜನರು ಜಲಸಮಾಧಿಯಾಗಿದ್ದರು. ದುರಂತದಲ್ಲಿ ಎಂಟು ಹಳ್ಳಿಗಳ ಜನರು ತಮ್ಮ ಕುಟುಂಬದ ಸದಸ್ಯರನ್ನೇ ಕಳೆದುಕೊಂಡಿದ್ದಾರೆ.
ಸದ್ಯ ಈ ಗ್ರಾಮಗಳಲ್ಲಿ ಸ್ಮಶಾನ ಮೌನ ಆವರಿಸಿದೆ. ಘಟನೆಯಾದ ಬಳಿಕ ಸ್ಥಳಕ್ಕೆ ತೆರಳಿ ಸಮಾಧಾನ ಹೇಳಿದ್ದ ಜನಪ್ರತಿನಿಧಿಗಳು ಇದೀಗ ಇತ್ತ ತಲೆಯೂ ಹಾಕಿಲ್ಲ.
ದುರಂತದಲ್ಲಿ ಮಕ್ಕಳನ್ನೇ ಕಳೆದುಕೊಂಡವರಿದ್ದಾರೆ. ಮಕ್ಕಳು ಅಪ್ಪ - ಅಮ್ಮನನ್ನೇ ಕಳೆದುಕೊಂಡಿದ್ದಾರೆ. ಪತಿ, ಪತ್ನಿಯನ್ನು ಕಳೆದುಕೊಂಡವರಿದ್ದಾರೆ. ಆಡುವ ಮೊಮ್ಮಕ್ಕಳನ್ನು ಕಳೆದುಕೊಂಡ ತಾತಂದಿರಿದ್ದಾರೆ. ಇವರೆಲ್ಲರೂ ನೋವಿನಲ್ಲಿ ಮುಳುಗಿದ್ದು ಖಿನ್ನತೆ ಅನುಭವಿಸುತ್ತಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಸಾಂತ್ವನ ಹೇಳುವ ಮನಸ್ಸುಗಳು, ಸಹಾಯ ಮಾಡುವ ಕೈಗಳು ಇಲ್ಲವಾಗಿವೆ. ಅಪಘಾತ ನಡೆದಾಗ ಅಧಿಕಾರಿಗಳು ಘಟನಾ ಸ್ಥಳಕ್ಕೆ ತೆರಳಿದ್ದು ಬಿಟ್ಟರೆ ಯಾವ ಅಧಿಕಾರಿಯೂ ಸಾವಿನ ಮನೆಗೆ ತೆರಳಿ ಸಮಾಧಾನ ಹೇಳಿಲ್ಲ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸದಸ್ಯರೂ ಸಾವಿನ ಮನೆಗೆ ತೆರಳಿ ಸಮಾಧಾನ ಹೇಳಿಲ್ಲ.
ನ. 24ರಂದು ಅಂಬರೀಶ್ ಮೃತಪಟ್ಟ ನಂತರ ಕನಗನಮರಡಿ ಘಟನೆಯ ಮೇಲೆ ಕತ್ತಲು ಕವಿಯಿತು. ಇಡೀ ಜಿಲ್ಲಾಡಳಿತವೇ ಅಂಬರೀಶ್ ಮೃತದೇಹದ ಜೊತೆಗಿತ್ತು. ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿ ಸಚಿವರು, ಶಾಸಕರು ಅಂಬರೀಶ್ ಮೃತದೇಹದ ಜೊತೆಗಿದ್ದರು.
ಅಂಬರೀಶ್ ಅಂತ್ಯಸಂಸ್ಕಾರವಾದ ನಂತರವಾದರೂ ಗ್ರಾಮಗಳಿಗೆ ಭೇಟಿ ನೀಡಿ ಮೃತರ ಸಂಬಂಧಿಕರಿಗೆ ಸಮಾಧಾನ ಹೇಳಬೇಕಾಗಿತ್ತು. ಆದರೆ ಯಾರೂ ಬಂದಿಲ್ಲ. ಬಡವರ ಜೀವಕ್ಕೆ ಬೆಲೆ ಇಲ್ಲದಂತಾಯಿತು ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು. ಮುಂದೆ ಓದಿ...

ಪರಿಹಾರ ಇನ್ನು ಬಂದಿಲ್ಲ
ಇದೀಗ ಘಟನೆಯಲ್ಲಿ ಮೃತಪಟ್ಟವರ ಕುಟುಂಬಸ್ಥರು ಪರದಾಡುತ್ತಿದ್ದಾರೆ. ಮುಂದಿನ 11 ದಿನಗಳ ಕಾರ್ಯಕ್ರಮಕ್ಕೂ ಹಣವಿಲ್ಲದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಘೋಷಣೆ ಮಾಡಿದ 5 ಲಕ್ಷ ಪರಿಹಾರ ಇನ್ನು ಬಂದಿಲ್ಲ. ಘಟನೆ ನಡೆದ ನಂತರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘಟನೆ ವತಿಯಿಂದ ಪ್ರತಿ ಕುಟುಂಬಕ್ಕೆ 10 ಸಾವಿರ ಪರಿಹಾರ ಚೆಕ್ ವಿತರಣೆ ಮಾಡಲಾಗಿದೆ. ಅದನ್ನು ಬಿಟ್ಟರೆ ಇವರಿಗೆ ಮತ್ತಾವ ಸಹಾಯವೂ ಸಿಕ್ಕಿಲ್ಲ.

ಮಾನವೀಯತೆಗಾದರೂ ಬರಬೇಕಿತ್ತು
ಚುನಾವಣೆ ಸಂದರ್ಭದಲ್ಲಿ ರಾಜಕಾರಣಿಗಳು ಬೀದಿ ಬೀದಿಯಲ್ಲಿ ಸುತ್ತಿ ವೋಟ್ ಕೇಳುತ್ತಾರೆ. ಹಳ್ಳಿಗಳ ಕೊಳಚೆ ನೀರು, ಚರಂಡಿಗಳ ಮೇಲೆ ನಡೆದಾಡುತ್ತ ಕೈಮುಗಿಯುತ್ತಾರೆ. ಆದರೆ ಗ್ರಾಮಗಳಲ್ಲಿ ದುರ್ಘಟನೆ ನಡೆದರೂ ಅಲ್ಲಿಗೆ ಭೇಟಿ ನೀಡಿಲ್ಲ. ಮಾನವೀಯತೆ ದೃಷ್ಟಿಯಿಂದಾದರೂ ಮೃತರ ಮನೆಗೆ ಬಂದಿಲ್ಲ ಎನ್ನುತ್ತಾರೆ ಮಡಿದವರ ಕುಟುಂಬದ ಸದಸ್ಯರು.

ಶಾಸಕರಿಗೆ ತಿಳಿಯದಿರುವುದು ವಿಪರ್ಯಾಸ
ಘಟನೆಯಲ್ಲಿ ಮೃತಪಟ್ಟ 30 ಜನರು ಪಾಂಡವಪುರ, ಶ್ರೀರಂಗಪಟ್ಟಣ, ಮಂಡ್ಯ, ಕೆ.ಆರ್.ಪೇಟೆ ತಾಲೂಕಿಗೆ ಸೇರಿದವರಾಗಿದ್ದಾರೆ. ಅದರಲ್ಲೂ ಪಾಂಡವಪುರ ತಾಲೂಕಿನ ಹೆಚ್ಚಿನ ಜನರು ಮಡಿದಿದ್ದಾರೆ. ಇಲ್ಲಿಯವರೆಗೆ ಆಯಾ ಕ್ಷೇತ್ರದ ಶಾಸಕರು ಅವರ ಕಷ್ಟ ಕೇಳಿಲ್ಲ. ಸಿ.ಎಸ್.ಪುಟ್ಟರಾಜು, ರವೀಂದ್ರ ಶ್ರೀಕಂಠಯ್ಯ, ಎಂ.ಶ್ರೀನಿವಾಸ್, ನಾರಾಯಣಗೌಡ ಸಾವಿನ ಮನೆಗೆ ತೆರಳಿ ಸಾಂತ್ವನ ಹೇಳಿಲ್ಲ.
ಶ್ರೀರಂಗಪಟ್ಟಣ ತಾಲೂಕು, ಕೋಡಿಶೆಟ್ಟಿಪುರ ಗ್ರಾಮದಲ್ಲಿ ಒಂದೇ ಮನೆಯ ಮೂವರು ಮೃತಪಟ್ಟಿರುವ ವಿಷಯ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರಿಗೆ ತಿಳಿಯದಿರುವುದು ವಿಪರ್ಯಾಸ.

ರವೀಂದ್ರ ಶ್ರೀಕಂಠಯ್ಯ ಹೇಳಿದ್ದಿಷ್ಟು...
ದೇವರಾಜು-ಪವಿತ್ರಾ ದಂಪತಿಯ ಇಬ್ಬರು ಹೆಣ್ಣುಮಕ್ಕಳು ಹಾಗೂ ಅಜ್ಜಿ ಮೃತಪಟ್ಟಿರುವ ವಿಷಯ ಶಾಸಕರಿಗೆ ತಿಳಿದಿಲ್ಲ. ಹೌದು, "ಒಂದೇ ಮನೆಯಲ್ಲಿ ಮೂವರು ಮೃತಪಟ್ಟಿರುವ ವಿಷಯ ನನಗೆ ಗೊತ್ತಿಲ್ಲ. ನಾನು ಹೊರಗೆ ತೆರಳಿದ್ದ ಕಾರಣ ಗೊತ್ತಾಗಿಲ್ಲ. ಅಪಘಾತ ನಡೆದ ದಿನ ಸ್ಥಳಕ್ಕೆ ಹೋಗಿದ್ದೆ. ಅವರಿಗೆ ಸರ್ಕಾರ 5 ಲಕ್ಷ ಪರಿಹಾರ ಕೊಟ್ಟಿದೆ, ಅಷ್ಟು ಮಾಡಬಹುದಷ್ಟೇ" ಎಂದು ರವೀಂದ್ರ ಶ್ರೀಕಂಠಯ್ಯ ಉಡಾಫೆಯ ಮಾತನ್ನಾಡಿದ್ದಾರೆ.












Click it and Unblock the Notifications