ಹನಕೆರೆ ಅಂಡರ್‌ಪಾಸ್ ನಿರ್ಮಾಣದ ಒಪ್ಪಿಗೆ ಪತ್ರ ಹರಿದ ರೈತರು: ಪೊಲೀಸರಿಂದ ಲಾಠಿ ಚಾರ್ಜ್
ಮಂಡ್ಯದ ಹನಕೆರೆ ಬಳಿ ಅಂಡರ್‌ಪಾಸ್ ನಿರ್ಮಿಸುವಂತೆ ಒತ್ತಾಯಿಸಿ ರೈತ ಸಂಘಟನೆ ಹಾಗೂ ಸ್ಥಳೀಯರು ನಡೆಸುತ್ತಿದ್ದ ನಡೆಸುತ್ತಿದ್ದ ಪ್ರತಿಭಟನೆ ವಿಕೋಪಕ್ಕೆ ತರುಗಿದ್ದು, ಪ್ರತಿಭಟನಕಾರರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.
ಮಂಡ್ಯ, ಫೆಬ್ರವರಿ 20 : ಅವೈಜ್ಞಾನಿಕ ಅಂಡರ್‌ಪಾಸ್ ನಿರ್ಮಿಸಿರುವುದನ್ನು ವಿರೋಧಿಸಿ ರೈತರು ನಡೆಸುತ್ತಿದ್ದ ಪ್ರತಿಭಟನೆ ವಿಕೋಪಕ್ಕೆ ತಿರುಗಿ ಪೊಲೀಸರು ಲಾಠಿ ಪ್ರಹಾರ ನಡೆಸಿ, ರೈತ ಮುಖಂಡರನ್ನು ಬಂಧಿಸಿರುವ ಘಟನೆ ಮಂಡ್ಯ ತಾಲೂಕಿನ ಹನಕೆರೆ ಬಳಿ ನಡೆದಿದೆ.
ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ಎಸ್.ಸಿ. ಮಧುಚಂದನ್ ಹಾಗೂ ರೈತ ಮುಖಂಡ ಪ್ರಸನ್ನ ಎನ್. ಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹನಕೆರೆ ಬಳಿ ಅಂಡರ್‌ಪಾಸ್ ನಿರ್ಮಿಸದೆ ಸುಮಾರು 600 ಮೀಟರ್ ದೂರದಲ್ಲಿ ನಿರ್ಮಿಸಿರುವುದು ಅವೈಜ್ಞಾನಿಕವಾಗಿದ್ದು, ಹನಕೆರೆ ಬಳಿಯೇ ಅಂಡರ್‌ಪಾಸ್ ನಿರ್ಮಿಸಬೇಕೆಂದು ಒತ್ತಾಯಿಸಿ ರೈತ ಸಂಘದ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಬೆಳಗ್ಗೆ 7 ಗಂಟೆಯಿಂದಲೇ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇಯಲ್ಲಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದರು.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಪೊಲೀಸರು ಪ್ರತಿಭಟನಾ ನಿರತ ರೈತರೊಂದಿಗೆ ಮಾತುಕತೆ ನಡೆಸಿ ಮನವೊಲಿಸಲು ಯತ್ನಿಸಿದರು. ಆದರೆ ರೈತರು ಒಪ್ಪಲಿಲ್ಲ. ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ರೈತರು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಸುದ್ಧಿ ತಿಳಿದು ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ಯತೀಶ್ ಅವರು ರೈತ ಮುಖಂಡರೊಂದಿಗೆ ಚರ್ಚೆ ನಡೆಸಿ ಮನವೊಲಿಸಲು ಯತ್ನಿಸಿದರು.
ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಹ ಅಂಡರ್‌ಪಾಸ್ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದ್ದು, ಇದಕ್ಕಾಗಿ 8 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಇದರ ಪ್ರತಿಯನ್ನು ಸಹ ರೈತ ಮುಖಂಡರಿಗೆ ತೋರಿಸಿದರೆ, ಅದನ್ನು ಪಡೆದ ಮಧುಚಂದನ್ ಇತರರು ಪ್ರತಿಯನ್ನು ಹರಿದುಹಾಕಿದ್ದಲ್ಲದೆ, ಅಧಿಕಾರಿಗಳನ್ನು ಏಕವಚನದಲ್ಲಿ ನಿಂಧಿಸಿದ್ದಾರೆ ಎನ್ನಲಾಗಿದೆ.
ಇದರಿಂದ ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡ ಪೊಲೀಸ್ ಅಧಿಕಾರಿಗಳು ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಕೇಳಿಕೊಂಡಿದ್ದಾರೆ, ಇದಕ್ಕೆ ಪ್ರತಿಭಟನಾನಿರತ ರೈತರು ಒಪ್ಪಲಿಲ್ಲ. ಈ ವೇಳೆ ಕೆಲ ರೈತರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಇದರಿಂದ ಪೊಲೀಸ್ ಅಧಿಕಾರಿಗಳು ಗಾಯಗೊಂಡರು.
ತಕ್ಷಣ ಎಚ್ಚೆತ್ತ ಜಿಲ್ಲಾ ಪೊಲೀಸ್ ಅಧೀಕ್ಷ ಎನ್. ಯತೀಶ್ ಪ್ರತಿಭಟನಿರತ ರೈತರನ್ನು ಎಚ್ಚರಿಸಿದರು. ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಕಾರಣ ಲಾಠಿ ಪ್ರಹಾರಕ್ಕೆ ಆದೇಶಿಸಿದರು. ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನಾನಿರತರ ಮೇಲೆ ಲಘು ಲಾಠಿ ಪ್ರಹಾರ ನಡೆಸಿ ರೈತರನ್ನು ಚದುರಿಸಿದ್ದಾರೆ.

ರೈತ ಮುಖಂಡರಾದ ಎಸ್.ಸಿ. ಮಧುಚಂದನ್, ಪ್ರಸನ್ನ ಎನ್. ಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಬಳಿಕ ಪರಿಸ್ಥಿತಿ ಶಾಂತವಾಗಿತ್ತು. ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದ್ದು, ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತಿದೆ. ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್. ಕೆಂಪೂಗೌಡ, ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಬೊಮ್ಮೇಶ್, ಜಯರಾಂ, ಚಂದ್ರು, ಜಿ.ಎ. ಶಂಕರ್, ಲಿಂಗಪ್ಪಾಜಿ, ನಾಗರೇವಕ್ಕ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.












Click it and Unblock the Notifications