ಹಲ್ಲೆಗೊಳಗಾಗಿ ಮೆದುಳು ನಿಷ್ಕ್ರಿಯಗೊಂಡಿದ್ದ ಯುವಕನ ಅಂಗಾಂಗ ದಾನ ಮಾಡಿದ ಕುಟುಂಬ
ಮಂಡ್ಯ, ಅಕ್ಟೋಬರ್ 27 : ಹಳೆಯ ದ್ವೇಷದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಯುವಕನ ಮೆದುಳು ನಿಷ್ಕ್ರಿಯಗೊಂಡಿದ್ದ ಕಾರಣ ಆತನ ಅಂಗಾಂಗಗಳನ್ನು ದಾನ ಮಾಡುವುದರೊಂದಿಗೆ ಕುಟುಂಬಸ್ಥರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ತಾಲೂಕಿನ ಮಲ್ಲನಾಯಕನಹಳ್ಳಿ ಗ್ರಾಮದ ಸಚಿನ್ ಹಲ್ಲೆಗೆ ಒಳಗಾಗಿದ್ದ ಯುವಕ. ಸಂಬಂಧಿಕರಿಂದಲೇ ಹಲ್ಲೆಗೊಳಗಾಗಿದ್ದ ಸಚಿನ್ ಗಂಭೀರವಾಗಿ ಗಾಯಗೊಂಡಿದ್ದನು. 12 ದಿನಗಳ ಬಳಿಕ ಆತನ ಮೆದುಳು ನಿಷ್ಕ್ರಿಯಗೊಂಡಿತ್ತು. ಮಗನ ದೇಹ ಮಣ್ಣಾದರೂ ಆತನ ಅಂಗಾಂಗಗಳು ಮತ್ತಷ್ಟು ಜನರ ಬಾಳಿಗೆ ಬೆಳಕಾಗಲಿ ಎಂಬ ಉದ್ದೇಶದಿಂದ ತಂದೆ ಲಿಂಗರಾಜು ಅಂಗಾಂಗ ಮಾಡುವ ನಿರ್ಧಾರ ತೆಗೆದುಕೊಂಡು ನೋವಲ್ಲು ಸಾರ್ಥಕತೆ ಮೆರೆದರು.
ಘಟನೆ ವಿವರ
ಬೆಂಗಳೂರಿನಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ಸಚಿನ್ ಊರ ಹಬ್ಬಕ್ಕಾಗಿ ಮಲ್ಲನಾಯಕನಹಳ್ಳಿ ಗ್ರಾಮಕ್ಕೆ ಕೆಲ ದಿನಗಳ ಹಿಂದೆ ಹಿಂದಿದ್ದನು. ಅಕ್ಟೋಬರ್ 10 ರಂದು ಸಚಿನ್ ಅಣ್ಣನ ಬಾಮೈದ ರಾಜು ಮತ್ತು ಸ್ನೇಹಿತರು ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಸಚಿನ್ ಹತ್ಯೆಗೆ ಯತ್ನಿಸಿದ್ದಾರೆ. ರಾಜು ಹಾಗೂ ಆತನ ಸ್ನೇಹಿತರಾದ ಆಕಾಶ್, ನಿತಿನ್ ಎಂಬುವರು ರಾತ್ರಿ ವೇಳೆ ದಾಳಿ ಮಾಡಿ ಸಚಿನ್ ಕುತ್ತಿಗೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದರು. ಹಲ್ಲೆಗೆ ಕೌಟುಂಬಿಕ ಕಲಹ ಕಾರಣ ಎಂದು ಶಂಕಿಸಲಾಗಿದೆ.

ಹಲ್ಲೆಗೊಳಗಾದ ಸಚಿನ್‌ನನ್ನು ಸ್ಥಳೀಯರ ನೆರವಿನಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮೂರು ದಿನ ಚಿಕಿತ್ಸೆ ಬಳಿಕ ಸಚಿನ್‌ನನ್ನು ಮಂಡ್ಯ ಮಿಮ್ಸ್‌ಗೆ ರವಾನೆ ಮಾಡಲಾಗಿತ್ತು. 12 ದಿನದ ಬಳಿಕ ಸಚಿನ್ ಮೆದುಳು ನಿಷ್ಕ್ರಿಯವಾಗಿದೆ ಎಂದು ಮಿಮ್ಸ್ ವೈದ್ಯರು ದೃಢಪಡಿಸಿದರು. ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ದೇಹ ಸುಟ್ಟು ಬೂದಿಯಾಗುವ ಬದಲು ನಾಲ್ಕು ಜನಕ್ಕೆ ಅನುಕೂಲವಾಗಲಿ ಎಂದು ಎಂದು ತಂದೆ ಲಿಂಗರಾಜು ಈ ನಿರ್ಧಾರ ಮಾಡಿದರು. ಅಂಗಾಂಗ ದಾನ ಮಾಡಲು ಮಿಮ್ಸ್‌ನಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಗಾಯಾಳು ಸಚಿನ್‌ನ ದೇಹವನ್ನು ರವಾನೆ ಮಾಡಲಾಯಿತು.
ಬೆಂಗಳೂರಿನಲ್ಲಿ ವೈದ್ಯರ ಚಿಕಿತ್ಸೆಗೆ ಸ್ವಲ್ಪ ಮಟ್ಟಿಗೆ ಸಚಿನ್ ಸ್ಪಂದಿಸಿದ್ದ. ಮತ್ತೆ ಕೆಲ ದಿನಗಳ ನಂತರ ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಚಿಕಿತ್ಸೆ ಸ್ಪಂದಿಸುವುದಿಲ್ಲ ಎಂಬ ವೈದ್ಯರ ಘೋಷಣೆಯಿಂದಾಗಿ ಬುಧವಾರ ಅಂಗಾಂಗ ದಾನ ಮಾಡಿ ಸ್ವಗ್ರಾಮ ಮಲ್ಲನಾಯಕನಕಟ್ಟೆಗೆ ತಂದು ಸಂಜೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಇನ್ನು ಘಟನೆ ನಡೆದು 15 ದಿನ ಕಳೆದರೂ ಆರೋಪಿಗಳನ್ನು ಬಂಧಿಸ ಶಿವಳ್ಳಿ ಪೊಲೀಸರ ಕ್ರಮಕ್ಕೆ ಕುಟುಂಬದವರು ಮತ್ತು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಮುಂದಿನ ಕ್ರಮ ಕೈಗೊಂಡಿದ್ದಾರೆ.











Click it and Unblock the Notifications