ಐಟಿ, ಇಡಿಗಳನ್ನು ಬಿಟ್ಟು ಕಟ್ಟಿಹಾಕವ ಯತ್ನ ಕೇವಲ ಭ್ರಮೆ ಅಷ್ಟೇ: ಬಿಜೆಪಿಗೆ ಡಿ.ಕೆ.ಶಿ ಟಾಂಗ್
ಇಲ್ಲಿಯವರೆಗೂ ತಮ್ಮ ಮೇಲೆ ಆದ ಐಟಿ, ಇಡಿ ದಾಳಿ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದೇನು ನೀವೆ ನೋಡಿ.
ಮಂಡ್ಯ, ಜನವರಿ, 27: ಡಬಲ್ ಇಂಜಿನ್ ಬಿಜೆಪಿ ಸರ್ಕಾರ ಐಟಿ, ಇಡಿಗಳನ್ನು ಬಿಟ್ಟು ನಮ್ಮನ್ನು ಕಟ್ಟಿಹಾಕುತ್ತೇನೆಂಬ ಅವರ ಪ್ರಯತ್ನ ಭ್ರಮೆಯಷ್ಟೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಂಡ್ಯದಲ್ಲಿ ತಿರುಗೇಟು ನೀಡಿದರು.
ನಗರದ ಮಂಡ್ಯ ವಿಶ್ವ ವಿದ್ಯಾಲಯ ಆವರಣದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ನಮಗೆ ಇನ್ನಿಲ್ಲದ ಕಿರುಕುಳ ನೀಡಿತ್ತು. ಎಲ್ಲವನ್ನೂ ದಿಟ್ಟತನದಿಂದಲೇ ಎದುರಿಸಿ ನಿಂತಿದ್ದೇವೆ. ಮುಂದೆಯೂ ಜನರ ಬೆಂಬಲದಿಂದ ನಿಲ್ಲುತ್ತೇವೆ ಎಂದು ಸವಾಲು ಹಾಕಿದರು. ಜನವರಿ 16ರಂದು ನಾವು ಪ್ರಜಾಧ್ವನಿ ಕಾರ್ಯಕ್ರಮವನ್ನು ಆರಂಭಿಸಿದೆವು. ನಮ್ಮ ಪ್ರಮುಖ ಉದ್ದೇಶ ಈ ರಾಜ್ಯದಲ್ಲಿ ಭ್ರಷ್ಟಾಚಾರ, ಅನೀತಿ, ಅಕ್ರಮಗಳ ಕೊಳೆಯನ್ನು ತೊಳೆಯುವುದಾಗಿದೆ. ಜನರ ಕಷ್ಟ ಅರಿತು ಪರಿಹರಿಸುವುದು ಈ ಯಾತ್ರೆಯ ಉದ್ದೇಶವಾಗಿದೆ. ನನಗೆ ಮಂಡ್ಯ, ರಾಮನಗರ, ಕನಕಪುರ ಕ್ಷೇತ್ರಗಳು ಬೇರೆಯಲ್ಲ. ಹಾಗಾಗಿ ಜಿಲ್ಲೆಯ ಏಳಕ್ಕೆ ಏಳೂ ಕ್ಷೇತ್ರಗಳಲ್ಲಿ ಈ ಬಾರಿ ಕಾಂಗ್ರೆಸ್ ಅನ್ನು ಜನ ಕೈಹಿಡಿಯಲಿದ್ದಾರೆ ಎಂಬ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದರು.
ಮಂಡ್ಯದಲ್ಲಿ ಕಾವೇರಿ ನೀರಿನ ರಕ್ಷಣೆಗಾಗಿ ಜಿ.ಮಾದೇಗೌಡ, ಎಸ್.ಎಂ. ಕೃಷ್ಣ ಅವರು ಸಾಕಷ್ಟು ಹೋರಾಟ ಮಾಡಿದ್ದಾರೆ. ಬೆಂಗಳೂರು, ಮೈಸೂರು ಹೆದ್ದಾರಿಗೆ ಆರಂಭದಿಂದ ಹೋರಾಟ ಮಾಡಿದ್ದು ನಾವು. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಇಲ್ಲಿನ ಸಂಚಾರದ ಸಂಕಷ್ಟಗಳನ್ನು ಅರಿತು ಮನವಿ ಸಲ್ಲಿಸಿದಾಗ 14 ಸಾವಿರ ಕೋಟಿ ರೂ. ಮಂಜೂರು ಮಾಡಿ ಕಾಮಗಾರಿಗೆ ಚಾಲನೆ ನೀಡಿದ್ದು ನಮ್ಮ ಹೆಗ್ಗಳಿಕೆಯಾಗಿದೆ. ಇದು ಬಿಜೆಪಿಯವರ ಸಾಧನೆಯಲ್ಲ ಎಂಬುದನ್ನು ಜನ ತಿಳಿದುಕೊಳ್ಳಬೇಕಿದೆ ಎಂದರು.

JDS ಕ್ಷಣಕ್ಕೊಂದು ಮಾತು ಬದಲಿಸುತ್ತಿದೆ
ಬಿಜೆಪಿ ಭ್ರಷ್ಟಾಚಾರದಲ್ಲಿ ಮುಳುಗಿದ್ದರೆ, ಜೆಡಿಎಸ್‌ನವರು ಮಾತಿನಲ್ಲಿ ಖಚಿತತೆ ಇಲ್ಲದೆ ಕ್ಷಣಕ್ಕೊಂದು ಮಾತು ಬದಲಿಸುತ್ತಾರೆ. ಅವರನ್ನೂ ಬೆಂಬಲಿಸಿದರೆ ನೇರವಾಗಿ ಬಿಜೆಪಿ ಬೆಂಬಲಿಸಿದಂತೆಯೇ ಆಗುತ್ತದೆ. ಆದ್ದರಿಂದ ನಾವು ನುಡಿದಂತೆ ನಡೆಯುವವರು ಎಂಬುದನ್ನು ಅರಿತೆಯೇ ಮೈಸೂರಿನಲ್ಲಿ ಹಿರಿಯರಾದ ಎಚ್. ವಿಶ್ವನಾಥ್ ಕಾಂಗ್ರೆಸ್ ಅನ್ನು ಬೆಂಬಲಿಸಿದ್ದಾರೆ. ಇದೇ ಹಾದಿಯಲ್ಲಿ ಜಾತ್ಯಾತೀತ ದಳದಲ್ಲಿದ್ದ ವೈ.ಎಸ್.ವಿ. ದತ್ತ ಕೂಡ ಯೋಚನೆ ಮಾಡಿ ಪಕ್ಷಕ್ಕೆ ಸೇರಿದರು. ಇದೀಗ ಹಿರಿಯ ಶಾಸಕರಾದ ಶಿವಲಿಂಗೇಗೌಡ, ವಾಸು ಅವರೂ ಪಕ್ಷಕ್ಕೆ ಬರಲು ಆಸಕ್ತಿ ತೋರಿದ್ದಾರೆ ಎಂದು ತಾವೇ ರಚಿಸಿಕೊಂಡಿಕೊಂಡು ಬಂದಿದ್ದ ಕವನವನ್ನು ವಾಚಿಸಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದರು.

ಮೇಕೆದಾಟು ಅಣೆಕಟ್ಟಿನ ಬಗ್ಗೆ ಡಿ.ಕೆ.ಶಿ ಹೇಳಿದ್ದೇನು?
ನಾವು ಮೇಕೆದಾಟು ಪಾದಯಾತ್ರೆ ಮೂಲಕ ಕಾವೇರಿ-ಹೇಮಾವತಿ ನೀರನ್ನು ವ್ಯರ್ಥವಾಗಲು ಬಿಡುವುದಿಲ್ಲ. ಜನರಿಗೆ ಉಪಯುಕ್ತವಾಗಿ ಬಳಕೆಯಾಗುವ ನಿಟ್ಟಿನಲ್ಲಿ ಮೇಕೆದಾಟು ಅಣೆಕಟ್ಟು ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾಗಿದ್ದೇವೆ. ಇದರಿಂದ ಬೆಂಗಳೂರಿಗೆ ಕುಡಿಯುವ ನೀರು, ಜಲ ವಿದ್ಯುತ್ ಉತ್ಪಾದನೆ ಸೇರಿದಂತೆ ಹಲವು ರೀತಿಯ ಉಪಯುಕ್ತತೆ ಆಗಲಿದೆ ಎಂದರು.

ವ್ಯರ್ಥವಾಗಿ ಹರಿಯುತ್ತಿರುವ ನೀರಿನ ಪ್ರಮಾಣ
ವಾಸ್ತವದಲ್ಲಿ 646 ಟಿಎಂಸಿ ನೀರು ಕಳೆದ ವರ್ಷ ಸಂಗ್ರಹವಾಗಿತ್ತು. ಅದರಲ್ಲಿ ತಮಿಳುನಾಡಿಗೆ ಕೊಡಬೇಕಾಗಿದ್ದಿದ್ದು 177 ಟಿ.ಎಂ.ಸಿ. ಮಾತ್ರ, ಹೀಗಿರುವಾಗ 460 ಟಿಎಂಸಿಗೂ ಹೆಚ್ಚಿನ ನೀರು ವ್ಯರ್ಥವಾಗಿ ಹರಿದು ಸಮುದ್ರ ಸೇರಿದೆ. ಅದಾಗಬಾರದು ಎಂಬುದು ನಮ್ಮ ಕಳಕಳಿಯಾಗಿದ್ದು, ಮೇಕೆದಾಟು ಕಟ್ಟಲು ರಾಜ್ಯದ ಜನರ ಪರವಾಗಿ ಕಾಂಗ್ರೆಸ್ ಶ್ರಮಿಸುತ್ತಿದೆ.

ನನ್ನ ವಿರುದ್ಧ 25 ಕೇಸ್‌ಗಳ ದಾಖಲು
170 ಕಿ.ಮೀ. ಪಾದಯಾತ್ರೆ ಮಾಡಿದ ನಮ್ಮ ವಿರುದ್ಧ ರಾಜ್ಯ ಬಿಜೆಪಿ ಸರ್ಕಾರ ಸಾಕಷ್ಟು ಕೇಸ್ ಹಾಕಿತ್ತು. ಈ ಮೂಲಕ ಬಿಜೆಪಿ ಸರ್ಕಾರ ನಮ್ಮನ್ನು ಕಟ್ಟಿಹಾಕುವ ಪ್ರಯತ್ನ ಮಾಡಿದೆ. ನನ್ನ ಮೇಲೆಯೇ ಸುಮಾರು 25 ಕೇಸ್‌ಗಳನ್ನು ಜಡಿದಿದ್ದಾರೆ. ಇಂತಹ ದ್ವೇಷದ ಕ್ರಮಕ್ಕೆ ನಾವು ಹೆದರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ಡಿ.ಕೆ. ಶಿವಕುಮಾರ್ ಅವರಿಗೆ ಗೂಳಿಯೊಂದನ್ನು ಉಡುಗೊರೆಯಾಗಿ ನೀಡಲಾಯಿತು.












Click it and Unblock the Notifications