ಕಾಂಗ್ರೆಸ್ ನಾಯಕರಿಗೆ ಜನ ಪಾಠ ಕಲಿಸುತ್ತಾರೆ; ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆ
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಸಚಿವರು, ಶಾಸಕರು ಮನಬಂದಂತೆ ಮಾತನಾಡುತ್ತಿರುವುದನ್ನು ರಾಜ್ಯದ ಜನತೆ ನೋಡುತ್ತಿದ್ದಾರೆ. ಸೂಕ್ತ ಸಮಯದಲ್ಲಿ ಜನತೆಯೇ ತಕ್ಕ ಉತ್ತರ ನೀಡುತ್ತಾರೆ ಎಂದು ನಿಖಿಲ್‌ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಶ್ರೀರಂಗಪಟ್ಟಣದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ನಡೆದ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೆ ಹೃದಯ ಸಮಸ್ಯೆ ಇದೆ. ಯಾರು ಅವರ ಎದೆಯನ್ನು ನೋಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಅವರ ಎದೆ ಮೇಲೆ 5 ಇಂಚು ಗಾಯದ ಗುರುತು ಇದೆ. ಅದು ಇನ್ನೂ ವಾಸಿಯಾಗಿಲ್ಲ. ಇದನ್ನು ತಿಳಿಯದ ಕೆಲವರು ಅವರ ವಿರುದ್ಧ ಲೇವಡಿ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೊಸ ತಂತ್ರಜ್ಞಾನವನ್ನು ಎಲ್ಲರೂ ಗೂಗಲ್‌ನಲ್ಲಿ ಸರ್ಚ್ ಮಾಡಬಹುದು. ಮೂರೇ ದಿನದಲ್ಲಿ ಚೇತರಿಸಿಕೊಳ್ಳುವಷ್ಟರ ಮಟ್ಟಿಗೆ ತಾಂತ್ರಿಕತೆ ಬೆಳೆದಿದೆ. ಆದರೆ ಕ್ಷೇತ್ರದ ಶಾಸಕರಿಗೆ ಈ ಬಗ್ಗೆ ಅರಿವೇ ಇಲ್ಲ. ನಮ್ಮ ಪಕ್ಷದಲ್ಲೇ ಬೆಳೆದು, ಇಡೀ ಕುಟುಂಬವೇ ನಮ್ಮ ಪಕ್ಷದಲ್ಲಿ ಅಧಿಕಾರ ಅನುಭವಿಸಿ ಈಗ ನಮ್ಮ ವಿರುದ್ಧವೇ ಮಾತನಾಡುತ್ತಿದ್ದಾರೆ. ಜನತೆ ಇದನ್ನು ನೋಡುತ್ತಿದ್ದಾರೆ. ಅವರೇ ಎಲ್ಲದ್ದಕ್ಕೂ ಉತ್ತರ ನೀಡುತ್ತಾರೆ ಎಂದರು.
ಸೋಲಿಗೆ ನಾನೇ ಹೊಣೆ
ಬದಲಾದ ಕಾಲಘಟ್ಟದಲ್ಲಿ ನಾನು ಅನಿರೀಕ್ಷಿತವಾಗಿ ರಾಜಕೀಯಕ್ಕೆ ಬರಬೇಕಾಯಿತು. 2019ರಲ್ಲಿ ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದೆ. ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ನಮ್ಮದೇ ಪಕ್ಷದ ಶಾಸಕರು ಇದ್ದರು. ಆದರೂ ನಾನು ಸೋಲನ್ನೂ ಅನುಭವಿಸಬೇಕಾಯಿತು. ಆಗ ನಮ್ಮ ಕಾರ್ಯಕರ್ತರಿಗೆ ನೋವು ಆಕ್ರೋಶ ಉಂಟುಮಾಡಿತ್ತು. ಇದಕ್ಕೆ ಮತದಾರರು, ಕಾರ್ಯಕರ್ತರು ಹೊಣೆಯಲ್ಲ, ನಾವೇ ಹೊಣೆ ಎಂದರು.
ಸಾಲಮನ್ನಾ ಮಾಡಿದ್ದು ಕುಮಾರಸ್ವಾಮಿ
2018ರಲ್ಲಿ ಬರದಿಂದ ರಾಜ್ಯದಲ್ಲಿ ಸಾವಿರಾರು ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅಂದು ರೈತರ ಮನೆಗೆ ತೆರಳಿದ್ದ ಕುಮಾರಸ್ವಾಮಿ ಅವರು ಕುಟುಂಬಕ್ಕೆ ಸಾಂತ್ವನ ಹೇಳಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಒಂದು ಬಾರಿ ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. 2018ರಲ್ಲಿ ಕಾಂಗ್ರೆಸ್-ಜೆಡಿಎಸ್ ಅಧಿಕಾರ ಹಿಡಿಯಿತು. ನಾವು ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬಂದಿಲ್ಲ. ಸಾಲ ಮನ್ನಾ ಮಾಡಲಾಗದು ಎಂದು ಕುಮಾರಸ್ವಾಮಿ ಹೇಳಬಹುದಿತ್ತು. ಆದರೆ ಕುಮಾರಸ್ವಾಮಿ ಹಾಗೆ ಮಾಡಲಿಲ್ಲ. ಕಾಂಗ್ರೆಸ್ಸಿಗರ ವಿರೋಧದ ನಡುವೆಯೂ 25 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದರು. ಇದು ಕುಮಾರಸ್ವಾಮಿಯವರ ಕೊಡುಗೆಯಲ್ಲವೇ ಎಂದು ಪ್ರಶ್ನಿಸಿದರು.
ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಅಣ್ಣ ತಮ್ಮನ ರೀತಿ ಕೆಲಸ ಮಾಡಬೇಕು. ಬೆಂಗಳೂರು ಗ್ರಾಮಾಂತರದಲ್ಲಿ ಡಾ. ಮಂಜುನಾಥ್ ಅವರ ಪರ ಪಕ್ಷಾತೀತವಾಗಿ ಅಲೆ ಎದ್ದಿದೆ. ಯಾರೂ ಮೈಮರೆಯದೆ ಕಾರ್ಯಕರ್ತರು ಕೆಲಸ ಮಾಡಬೇಕು. ಕುಮಾರಸ್ವಾಮಿ ಅವರ ಗೆಲುವು ಮಂಡ್ಯ ಜನರ ಗೆಲುವಾಗಬೇಕು. ಐದು ಗ್ಯಾರಂಟಿಗಳನ್ನು ಇಟ್ಟುಕೊಂಡು ಚುನಾವಣೆ ಮಾಡುತ್ತಿದ್ದಾರೆ. ಫಲಾನುಭವಿಗಳ ಸಭೆ ಮಾಡಿ ಕೋಟ್ಯಾಂತರ ರೂ. ಖರ್ಚು ಮಾಡುವ ಮೂಲಕ ನಾವು ನುಡಿದಂತೆ ನಡೆದಿದ್ದೇವೆ ಎನ್ನುತ್ತಾರೆ ಎಂದು ಟೀಕಿಸಿದರು.












Click it and Unblock the Notifications