ಮಂಡ್ಯದಲ್ಲಿ ಕಾವೇರಿ ನದಿ ತೀರಕ್ಕಿಲ್ಲ ಪ್ರವಾಸಿಗರಿಗೆ ಪ್ರವೇಶ!
ಮಂಡ್ಯ, ಡಿಸೆಂಬರ್ 31: ಹೊಸ ವರ್ಷಾಚರಣೆಯನ್ನು ಅರಣ್ಯದ ಬಳಿ, ನದಿ ತೀರದ ಸಮೀಪ ಆಚರಣೆ ಮಾಡಬೇಕೆಂದು ಬಯಸುವ ಕೆಲವರಿದ್ದಾರೆ. ಅಂಥವರಿಗೆ ಕಡಿವಾಣ ಹಾಕಲೆಂದೇ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕಾವೇರಿ ತೀರದ ಪ್ರದೇಶ ಮತ್ತು ಮುತ್ತತ್ತಿ ನದಿ ತೀರಗಳಲ್ಲಿಯೂ ಪ್ರವೇಶ ನಿರ್ಬಂಧಿಸಲಾಗಿದೆ.
ಇತ್ತ ಚಾಮರಾಜನಗರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿಯೂ ನಿರ್ಬಂಧ ಹೇರಲಾಗಿದೆ. ಜತೆಗೆ ಎಲ್ಲೆಂದರಲ್ಲಿ ಮದ್ಯ ಸೇವಿಸಿ ಹುಚ್ಚಾಟ ಆಡುವುದಕ್ಕೂ ಬ್ರೇಕ್ ಹಾಕಲಾಗಿದೆ. ಸಾಮಾನ್ಯವಾಗಿ ಪಟ್ಟಣದ ಯುವಕರು ಬಲಮುರಿ, ಎಡಮುರಿ, ಕೆ.ಆರ್.ಎಸ್. ಹಿನ್ನೀರು, ಮಂಡ್ಯ ಕೊಪ್ಪಲಿನ ಚೆಕ್ ಡ್ಯಾಂ, ಮಹದೇವಪುರದ ರಾಜರಾಜೇಶ್ವರಿ ಚೆಕ್ ಡ್ಯಾಂ, ರಾಮಸ್ವಾಮಿ ನಾಲೆ, ಕರಿಘಟ್ಟದಲ್ಲಿ ಹೊಸವರ್ಷಾಚರಣೆ ಮಾಡಬೇಕೆಂದು ಆಲೋಚಿಸಿದ್ದರೆ ಅದನ್ನು ಕೈಬಿಡುವುದು ಒಳ್ಳೆಯದು.
ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆ ಬಿಗಿ ಕ್ರಮ ಕೈಗೊಂಡಿದ್ದು ಇದನ್ನು ಮೀರಿದರೆ ಕಾನೂನು ಕ್ರಮ ಜರುಗಿಸಲು ಪೊಲೀಸರು ಮುಂದಾಗಿದ್ದಾರೆ. ವರ್ಷಾಚರಣೆಯ ಮೋಜು ಮಸ್ತಿ ಮಾಡುವ ವೇಳೆ ಎಡವಟ್ಟು ಮಾಡಿಕೊಂಡು ಹಲವರು ಪ್ರಾಣ ಕಳೆದುಕೊಂಡಿರುವ ನಿದರ್ಶನಗಳು ಹಲವಷ್ಟು ಇರುವ ಕಾರಣದಿಂದಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಈ ಸ್ಥಳಗಳಲ್ಲಿ ಅವಘಡಗಳು ಸಂಭವಿಸಿ ಸಾವು ನಡೆದಿರೋ ಹಿನ್ನೆಲೆಯಲ್ಲಿ ಡಿ.೩೧ ರಿಂದ ಜ.೧ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಶ್ರೀರಂಗಪಟ್ಟಣ ತಹಸೀಲ್ದಾರ್ ನಾಗೇಶ್ ಅವರು ಆದೇಶಿಸಿದ್ದಾರೆ.
ಇನ್ನು ಜಿಲ್ಲೆಯ ಮತ್ತೊಂದು ಪ್ರವಾಸಿತಾಣವಾದ ಮಳವಳ್ಳಿ ತಾಲೂಕಿನ ಮುತ್ತತ್ತಿಗೂ ಸಹ ಪ್ರವಾಸಿಗರ ನಿರ್ಬಂಧ ಹೇರಿ ಮಳವಳ್ಳಿ ತಹಸೀಲ್ದಾರ್ ಚಂದ್ರಮೌಳಿ ಅವರು 144 ಸೆಕ್ಷನ್ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ. ಎಲ್ಲ ಪ್ರವಾಸಿಗರು ಇದನ್ನು ಅರಿತು ಇತ್ತ ಹೆಜ್ಜೆ ಹಾಕುವ ಪ್ರಯತ್ನ ಮಾಡದಿರುವುದು ಒಳಿತು.












Click it and Unblock the Notifications