PM Modi Mandya Visit : ಹುಬ್ಬಳ್ಳಿ, ಬೆಳಗಾವಿ ಬಳಿಕ ಮಂಡ್ಯದಲ್ಲಿ ಮೋದಿ ರೋಡ್ ಶೋ
ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 12ರಂದು ಮಂಡ್ಯಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ರೋಡ್ ಶೋ ನಡೆಸಲಿದ್ದಾರೆ.
ಮಂಡ್ಯ, ಮಾರ್ಚ್ 05; ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಕಾವು ಏರುತ್ತಿದೆ. ರಾಷ್ಟ್ರೀಯ ನಾಯಕರ ರಾಜ್ಯ ಭೇಟಿ, ಸಮಾವೇಶ, ರೋಡ್ ಶೋ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 12ರಂದು ಮತ್ತೆ ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಈಗಾಗಲೇ ಹುಬ್ಬಳ್ಳಿ, ಬೆಳಗಾವಿಯಲ್ಲಿ ರೋಡ್ ಶೋ ನಡೆಸಿರುವ ಮೋದಿ ಮಂಡ್ಯದಲ್ಲಿಯೂ ರೋಡ್ ಶೋ ಮಾಡಲಿದ್ದಾರೆ. ಆ ಮೂಲಕ ಹಳೆ ಮೈಸೂರು ಭಾಗದ ಮತಗಳನ್ನು ಪಕ್ಷಕ್ಕೆ ಸೆಳೆಯಲಿದ್ದಾರೆ.
ಮಂಡ್ಯ ಜಿಲ್ಲಾಧಿಕಾರಿ ಡಾ. ಹೆಚ್. ಎನ್. ಗೋಪಾಲಕೃಷ್ಣ ಪ್ರಧಾನಿ ನರೇಂದ್ರ ಮೋದಿ ಮಂಡ್ಯ ಭೇಟಿ ಬಗ್ಗೆ ಮಾಹಿತಿ ನೀಡಿದ್ದಾರೆ. ಮೋದಿ ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾರ್ಯಕ್ರಮವನ್ನು ಯಾವುದೇ ಲೋಪ ಉಂಟಾಗದಂತೆ ಅಚ್ಚುಕಟ್ಟಾಗಿ ನಿರ್ವಹಿಸಲು ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲಾಗುವುದು ಎಂದು ಹೇಳಿದರು.

ಮಂಡ್ಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಈ ಸಭೆಯಲ್ಲಿ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತ ಎಲ್. ಹುಲ್ಮನಿ, ಅಪರ ಜಿಲ್ಲಾಧಿಕಾರಿ ಡಾ. ಹೆಚ್. ಎಲ್ ನಾಗರಾಜು, ಎನ್‌ಹೆಚ್‌ಎಐ ಯೋಜನಾ ನಿರ್ದೇಶಕ ಶ್ರೀಧರ್, ಉಪವಿಭಾಗಾಧಿಕಾರಿ ಕೀರ್ತನಾ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಹೆಚ್. ಎನ್. ಗೋಪಾಲಕೃಷ್ಣ, "ಬೆಂಗಳೂರು- ಮೈಸೂರು ದಶಪಥ ರಸ್ತೆ ಉದ್ಘಾಟನೆಗಾಗಿ ಪ್ರಧಾನಮಂತ್ರಿಗಳು ಮಾರ್ಚ್ 12ರಂದು ಜಿಲ್ಲೆಗೆ ಆಗಮಿಸುತ್ತಿದ್ದು, ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಿ. ಪ್ರಧಾನಮಂತ್ರಿಗಳು ಮಂಡ್ಯ ಜಿಲ್ಲೆಯಲ್ಲಿ ರೋಡ್ ಶೋ, ದಶಪಥ ರಸ್ತೆಯ ಒಂದು ಭಾಗದಲ್ಲಿ ರಸ್ತೆಯ ಸಂಕೇತಿಕ ಉದ್ಘಾಟನೆ ಹಾಗೂ ಗೆಜ್ಹಲಗೆರೆ ಕಾಲೋನಿಯಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ" ಎಂದು ಹೇಳಿದರು.

ವೇದಿಕೆ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ. ವಾಹನ ನಿಲುಗಡೆ, ಕುಡಿಯುವ ನೀರು, ತಾತ್ಕಾಲಿಕ ಶೌಚಾಲಯದ ವ್ಯವಸ್ಥೆಗಳಾಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಈಗಾಗಲೇ ಫೆಬ್ರವರಿ ತಿಂಗಳಿನಲ್ಲಿ ಶಿವಮೊಗ್ಗ, ಬೆಳಗಾವಿಯಲ್ಲಿ ನರೇಂದ್ರ ಮೋದಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ದೇಶಿಸಿ ಮಾತನಾಡಿದ್ದರು. ಈಗ ಜೆಡಿಎಸ್ ಭದ್ರಕೋಟೆಯಾಗಿರುವ ಮಂಡ್ಯಕ್ಕೆ ಮೋದಿ ಭೇಟಿ ನೀಡುತ್ತಿದ್ದಾರೆ.
ಮಂಡ್ಯದಲ್ಲಿ ರೋಡ್ ಶೋ; ಬೆಂಗಳೂರು-ಮೈಸೂರು ಜನರ ಬಹು ನಿರೀಕ್ಷೆಯ ಬೆಂಗಳೂರು- ಮೈಸೂರು ದಶಪಥ ರಸ್ತೆ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಮಾಡಲಿದ್ದಾರೆ. ಎಸ್‌ಪಿಜಿ ಅನುಮತಿ ನೀಡಿದರೆ ಮಂಡ್ಯದಲ್ಲಿ ನರೇಂದ್ರ ಮೋದಿ ರೋಡ್ ಶೋ ನಡೆಸಲಿದ್ದಾರೆ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಕಳೆದ ವಾರ ಹೇಳಿದ್ದರು. ಈಗ ಮಂಡ್ಯದಲ್ಲಿ ಮೋದಿ ರೋಡ್ ಶೋಗೆ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಪ್ರಧಾನಿ ಮೋದಿ ರೋಡ್ ಶೋಗಾಗಿ ಉತ್ತಮವಾಗಿ ಬ್ಯಾರಿಕೇಡಿಂಗ್ ವ್ಯವಸ್ಥೆಯಾಗಬೇಕು, ನಾಡಗೀತೆ, ರಾಷ್ಟ್ರ ಗೀತೆಗಳನ್ನು ಹಾಡಲು ನುರಿತ ಕಲಾವಿದರನ್ನು ಆಯ್ಕೆ ಮಾಡಿ ತರಬೇತಿ ನೀಡಿ. ದಶಪಥ ರಸ್ತೆಯ ಸಂಕೇತಿಕ ಉದ್ಘಾಟನಾ ಸ್ಥಳದಲ್ಲಿ ವಿವಿಧ ಕಲಾತಂಡಗಳ ಪ್ರದರ್ಶನ ಆಯೋಜಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಹೆಚ್. ಎನ್. ಗೋಪಾಲಕೃಷ್ಣ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸುಮಲತಾ ಬಿಜೆಪಿ ಸೇರ್ಪಡೆ; ಮಂಡ್ಯದ ಪಕ್ಷೇತರ ಸಂಸದೆ ಸುಮಲತಾ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. 2019ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಲ್ಲಿ ಬಿಜೆಪಿ ಸುಮಲತಾಗೆ ಬೆಂಬಲ ನೀಡಿತ್ತು. ಅವರು ಈಗ ಬಿಜೆಪಿ ಸೇರಿ ರಾಜ್ಯ ರಾಜಕೀಯಕ್ಕೆ ಬರಲಿದ್ದಾರೆ ಎಂಬ ಸುದ್ದಿಗಳಿವೆ. ನರೇಂದ್ರ ಮೋದಿ ಕಾರ್ಯಕ್ರಮದಲ್ಲಿಯೇ ಸುಮಲತಾ ಬಿಜೆಪಿ ಸೇರಲಿದ್ದಾರೆಯೇ? ಕಾದು ನೋಡಬೇಕಿದೆ. ಶನಿವಾರ ಸುಮಲತಾ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಭೇಟಿಯಾಗಿದ್ದರು. ಬಳಿಕ ಜೆ. ಪಿ. ನಗರದ ನಿವಾಸದಲ್ಲಿ ಬೆಂಬಲಿಗರ ಸಭೆಯನ್ನು ಸಹ ನಡೆಸಿದ್ದರು.











Click it and Unblock the Notifications