ಸಿಎಂ ಕೆಳಗಿಳಿಸಲು ನಾಗಮಂಗಲ ಗಲಭೆ ಪ್ಲ್ಯಾನ್: ಉದಾಹರಣೆ ಕೊಟ್ಟು ಕುಮಾರಸ್ವಾಮಿ ವಿವರಿಸಿದ್ದೇನು?
ಮಂಡ್ಯ, ಸೆಪ್ಟೆಂಬರ್ 13: 1990ರಲ್ಲಿ ವೀರೇಂದ್ರ ಪಾಟೀಲ್ ಅವರನ್ನು ಕೆಳಗಿಳಿಸಲು ರಾಮನಗರದಲ್ಲಿ ಗಲಭೆ ಸೃಷ್ಠಿಸಿ ರಾಜೀನಾಮೆ ಕೊಡುವಂತೆ ಮಾಡಿದ್ದರು. ಅವತ್ತು ನಡೆದಿದ್ದು ಕೋಮು ಗಲಭೆ ಅಲ್ಲ. ಕಾಂಗ್ರೆಸ್‌ನವರ ಪ್ರಾಯೋಜಿತ ಕಾರ್ಯಕ್ರಮ. ಈಗ ನಾಗಮಂಗಲದಲ್ಲಿ ನಡೆದ ಗಲಾಟೆ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಸೃಷ್ಟಿಯಾಗಿದೆಯಾ ಅಂತಾ ಕಾಂಗ್ರೆಸ್‌ನವರೇ ಹೇಳಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ನಾಗಮಂಗಲಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧ್ಯಮದಲ್ಲಿ ನೋಡಿದಾಗ ಕೆಲವರು ಮುಖ್ಯಮಂತ್ರಿ ಖುರ್ಚಿ ಖಾಲಿ ಇಲ್ಲ ಅಂತಾರೆ. ಹಿಂದಿನಿಂದ ಆ ಸ್ಥಾನ ಬೇಕು ಅಂತಾರೆ. ಕೈ ಜೋಡಿಸಿ ಮನವಿ ಮಾಡುತ್ತೇನೆ ಜನ ಇಂತಹ ವಿಚಾರಗಳಿಗೆ ಬಲಿಯಾಗಬೇಡಿ ಎಂದು ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ಗಣೇಶ ವಿಸರ್ಜನೆಗೆ ಪಿಎಸ್‌ಐ ರವಿಕುಮಾರ್ ಅವರ ಬಳಿ ಅನುಮತಿ ಪಡೆದುಕೊಂಡಿದ್ದಾರೆ. ಮೊದಲೇ ಪೊಲೀಸ್ ಇಲಾಖೆಗೆ ಮಾಹಿತಿ ಕೊಡಲಾಗಿದೆ. ಕಳೆದ ವರ್ಷ ಕೂಡ ಇಂತಹ ಘಟನೆ ನಡೆದಿದೆ ಅಂತ ಮಾಧ್ಯಮ ಹಾಗೂ ಪೊಲೀಸರು ಹೇಳಿದ್ದಾರೆ. ಇಲ್ಲಿ ಅಂತ ಅಲ್ಲಾ, ಎಲ್ಲಾ ಕಡೆಗಳಲ್ಲಿಯೂ ಡಿಜೆ ಹಾಡನ್ನು ಹಾಕುತ್ತಾರೆ. ಮೆರವಣಿಗೆ ನಡೆಯುವಾಗ ಘೋಷಣೆ ಕೂಗುವಂತದ್ದು ನಮ್ಮ ದೇಶದಲ್ಲಿ ನಡೆದುಕೊಂಡು ಬಂದಿದೆ ಎಂದರು.
ಕೆಲ ಪಕ್ಷಗಳು ಒಂದೊಂದು ಸಮಾಜ ಓಲೈಕೆ ಮಾಡಿಕೊಳ್ಳುತ್ತಿರುವುದು ರಾಜ್ಯದಲ್ಲಿ ಕಾಣುತ್ತಿದೆ. ಕೈ ನಾಯಕರು ಒಂದು ಸಮಾಜವನ್ನು ಓಲೈಕೆ ಮಾಡುವ ರಾಜಕಾರಣ ಮಾಡಬಾರದು. ಗೃಹ ಸಚಿವರು ಇದನ್ನು ಸಣ್ಣ ವಿಚಾರ ಎನ್ನುತ್ತಾರೆ. ಪರಮೇಶ್ವರ್ ಅವರೇ ಈ ರೀತಿ ಹೇಳಿಕೆ ಕೊಡುವ ಮೂಲಕ ನೀವು ಯಾವ ಸಂದೇಶ ನೀಡುತ್ತೀರಿ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಇಂತಹ ಸೂಕ್ಷ್ಮ ಮೆರವಣಿಗೆ ಇದ್ದಾಗ ತಕ್ಷಣ ಕ್ರಮ ಕೈಗೊಂಡಿದ್ದರೆ, ಈ ಘಟನೆ ನಡೆಯುತ್ತಿತ್ತಾ? ಸ್ಥಳ ವೀಕ್ಷಣೆ ವೇಳೆ ವ್ಯವಸ್ಥಿತ ಪ್ಲ್ಯಾನ್ ಮಾಡಿರುವುದು ಗೊತ್ತಾಗುತ್ತಿದೆ. ಕಲ್ಲು ತೂರಲು ಎಲ್ಲಿಂದ ಕಲ್ಲು ಬಂತು? ಪೆಟ್ರೋಲ್ ಬಾಂಬ್ ಎಲ್ಲಿಂದ ಬಂತು? 10 ನಿಮಿಷದಲ್ಲಿ ಹೇಗೆ ತರಲು ಸಾಧ್ಯ? ಇದು ವ್ಯವಸ್ಥಿತವಾಗಿ ನಡೆದ ಗಲಭೆ.
ಘಟನೆಯಲ್ಲಿ ಎರಡು ಕೋಮಿನವರ ಅಂಗಡಿಗಳು ನಾಶವಾಗಿವೆ. ಈ ಒಂದು ದೊಡ್ಡ ಘಟನೆಗೆ ಕಾಂಗ್ರೆಸ್ ಸಂಪೂರ್ಣ ಕಾರಣ. ಈಗ ಮಾಡಿದ ತಪ್ಪು ಮುಚ್ಚಿಕೊಳ್ಳಲು ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಿದ್ದಾರೆ. ಇದನ್ನು ಮೊನ್ನೆಯೇ ಮಾಡಿಲ್ಲ ಯಾಕೆ ಎಂದು ಪ್ರಶ್ನಿಸಿರುವ ಕುಮಾರಸ್ವಾಮಿ ರಾಜಕೀಯ ಸಂಘಟನೆಗಾಗಿ ಈ ಭಾಗದ ಜನರ ಬದುಕನ್ನು ಛಿದ್ರ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.












Click it and Unblock the Notifications