ಕಬ್ಬು ಅರೆಯಲು ಸಜ್ಜಾದ ಮೈಶುಗರ್; ಜೂನ್ 30ರಂದು ಪೂಜೆ
ಪ್ರಸಕ್ತ ಸಾಲಿನ ಕಬ್ಬುವ ಅರೆಯುವ ಕಾರ್ಯಕ್ಕೆ ಶೀಘ್ರ ಚಾಲನೆ ನೀಡಲಿದ್ದು, ಜೂನ್ 30 ರಂದು ಬಾಯ್ಲರ್‌ಗೆ ಅಗ್ನಿಸ್ಪರ್ಶ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮೈಶುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ್ ತಿಳಿಸಿದರು.
ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಂದು ಬೆಳಗ್ಗೆ 10 ಗಂಟೆಗೆ ನಡೆಯುವ ಪೂಜಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ, ಜಿಲ್ಲೆಯ ಎಲ್ಲಾ ಶಾಸಕರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಜುಲೈ ಮಧ್ಯದಲ್ಲಿ ಕಬ್ಬು ಅರೆಯುವ ಕಾರ್ಯ ಪ್ರಾರಂಭಿಸಲಾಗುವುದು ಎಂದ ಅವರು, ಪ್ರಸಕ್ತ ಸಾಲಿನಲ್ಲಿ 2.50 ಲಕ್ಷ ಟನ್ ಕಬ್ಬು ಅರೆಯುವ ಗುರಿ ಹೊಂದಲಾಗಿದ್ದು, ಈಗಾಗಲೇ 1.90 ಲಕ್ಷ ಟನ್ ಕಬ್ಬು ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಕಳೆದ ಬಾರಿ ಸರಿಯಾಗಿ ಮಳೆ ಬಾರದ ಕಾರಣ ಕಬ್ಬಿನ ಕೊರತೆ ಕಂಡುಬಂದಿದ್ದು, ಆದರೂ ಕಾಖಾನೆ 2,41,305 ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿತ್ತು. ಕಬ್ಬು ಸರಬರಾಜು ಮಾಡಿದ ಎಲ್ಲ ರೈತರಿಗೂ ಸಂಪೂರ್ಣ ಹಣವನ್ನು ಪಾವತಿಸಲಾಗಿದೆ ಎಂದರು.
ಈ ಬಾರಿ ಕಬ್ಬಿನ ಕೊರತೆ ಎದುರಾಗುವ ಸಾಧ್ಯತೆಗಳಿದ್ದು, ಹೊರ ಜಿಲ್ಲೆಯಿಂದ ಕಬ್ಬು ತಂದು ನುರಿಸಲು ಚಿಂತನೆ ನಡೆಸಲಾಗಿದೆ. ಜೊತೆಗೆ ಕಾರ್ಖಾನೆಯ ಸಹ ವಿದ್ಯುತ್ ಘಟಕವನ್ನೂ ಆರಂಭಿಸಿ ಕಾರ್ಖಾನೆಗೆ ಅಗತ್ಯವಿರುವ ವಿದ್ಯುತ್‌ನ್ನು ಇಟ್ಟುಕೊಂಡು ಉಳಿದಿದ್ದನ್ನು ಸೆಸ್ಕ್‌ಗೆ ಮಾರಾಟ ಮಾಡಲಾಗುವುದು. ಕಳೆದ ಬಾರಿ ಅಂತಿಮ ಹಂತದಲ್ಲಿ ಸ್ವಲ್ಪ ಪ್ರಮಾಣದ ವಿದ್ಯುತ್‌ನ್ನು ಮಾರಾಟ ಮಾಡಲಾಗಿದೆ ಎಂದು ವಿವರಿಸಿದರು.
ಪ್ರಸಕ್ತ ಸಾಲಿನಲ್ಲಿ 3150 ರೂ. ಎಫ್ಆರ್ ಪಿ ನಿಗದಿ ಮಾಡಲಾಗಿದ್ದು, ಟನ್ ಕಬ್ಬಿಗೆ ಸರ್ಕಾರ ನಿಗಧಿಪಡಿಸಿರುವ ದರವನ್ನು ನೀಡಲಾಗುತ್ತದೆ. ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ 10 ದಿನಗಳೊಳಗೆ ಪಾವತಿಸಲಾಗುವುದು ಎಂದು ಹೇಳಿದರು.
ಆಲೆಮನೆ ಮಾಲೀಕರೊಂದಿಗೆ ಸಭೆ
ಕಬ್ಬಿನ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಆಲೆಮನೆ ಮಾಲೀಕರ ಸಭೆ ಕರೆಯಲು ನಿರ್ಧರಿಸಲಾಗಿದ್ದು, ಪರವಾನಗಿ ಇರುವ ಆಲೆಮನೆಗಳು ಮಾತ್ರ ಬೆಲ್ಲ ಉತ್ಪಾದನೆ ಮಾಡಬೇಕು. ಉಳಿದವರು ಮಾಡಬಾರದು ಎಂದು ಮನವಿ ಮಾಡಲು ಚಿಂತನೆ ನಡೆಸಲಾಗಿದೆ. ಮೈಷುಗರ್ ಉಳಿವಿಗೆ ಎಲ್ಲರ ಸಹಕಾರ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಶಾಸಕ ಪಿ. ರವಿಕುಮಾರ್ ಮಾತನಾಡಿ, ಮೈಷುಗರ್ ವ್ಯಾಪ್ತಿಯಲ್ಲಿ ಇತರೆ ಖಾಸಗಿ ಕಾರ್ಖಾನೆಗಳವರು ಕಬ್ಬು ಕೊಂಡೊಯ್ಯುವುದನ್ನು ನಿರ್ಬಂಧಿಸಲಾಗಿದೆ. ಇದನ್ನು ತಡೆಯಲು ಈಗಾಗಲೇ ಜಾಗೃತ ದಳವನ್ನೂರಚಿಸಲಾಗಿದೆ. ಒಂದು ವೇಳೆ ಇಂತಹ ಕಾನೂನು ಬಾಹಿರ ಕೃತ್ಯಗಳು ಕಂಡುಬಂದಲ್ಲಿ ಅವರ ಪರವಾನಗಿ ರದ್ದುಪಡಿಸುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.












Click it and Unblock the Notifications