ರೈತರ ಹಿತದೃಷ್ಠಿಯಿಂದ ಮೈಶುಗರ್ ನಡೆಸಲಾಗುತ್ತಿದೆ: ಚಲುವರಾಯಸ್ವಾಮಿ
ಮಂಡ್ಯ: ಲಾಭ-ನಷ್ಟ ನೋಡಿ ರೈತರ ಜೀವನಾಡಿ ಮೈಶುಗರ್ ಕಾರ್ಖಾನೆಯನ್ನು ನಡೆಸುತ್ತಿಲ್ಲ, ರೈತರ ಹಿತದೃಷ್ಟಿಯಿಂದ ನಡೆಸಲಾಗುತ್ತಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ಪ್ರಸಕ್ತ ಸಾಲಿನ ಮೈಶುಗರ್ ಕಾರ್ಖಾನೆಯ ಬಾಯ್ಲರ್‌ಗೆ ಅಗ್ನಿ ಸ್ಪರ್ಶ ಸಲ್ಲಿಸಿದ ನಂತರ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಕಾರ್ಖಾನೆಗೆ ಲಾಭ ಬರುತ್ತದೆ ಎಂಬ ನಂಬಿಕೆ ಮೇಲೆ ನಡೆಸಲಾಗುತ್ತಿದೆ. ಸ್ಥಗಿತವಾಗಿದ್ದ ಮೈಶುಗರ್ ಕಾರ್ಖಾನೆಯನ್ನು ಪುನರ್ ಆರಂಭಗೊಳಿಸಲು ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಕಳೆದ ಸಾಲಿನಲ್ಲಿ 50 ಕೋಟಿ ರೂ. ನೀಡಿ ಆರಂಭಿಸಲಾಗಿತ್ತು. ಈ ವರ್ಷ ಯಾವುದೇ ತೊಂದರೆ ಇಲ್ಲವಾಗಿದೆ ಎಂದರು.

ಕಳೆದ ವರ್ಷ ಬರಗಾಲ ಆವರಿಸಿದ್ದರಿಂದ ರೈತರು ಕಬ್ಬನ್ನು ಬೆಳೆದಿಲ್ಲ. ಈ ಹಿನ್ನೆಲೆಯಲ್ಲಿ ಕಬ್ಬು ಕೊರತೆ ಆಗಬಹುದು. ಈ ಬಾರಿ ಬರಗಾಲ ಇರುವ ಹಿನ್ನೆಲೆ ಕಬ್ಬು ಕೊರತೆ ಆಗಬಹುದು. ಪ್ರಸ್ತುತ 1.90 ಲಕ್ಷ ಕಬ್ಬು ಒಪ್ಪಿಗೆಯಾಗಿದ್ದು, ಉಳಿದ ಕಬ್ಬನ್ನು ಹೊರ ಜಿಲ್ಲೆಯ ಮೂಲಕ ತಂದು ನುರಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
2023-24ನೇ ಸಾಲಿನಲ್ಲಿ 2,41,305 ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿದೆ. ಅಲ್ಲದೆ, ಕಬ್ಬು ಸರಬರಾಜು ಮಾಡಿದ ರೈತಗೆ ಸಂಪೂರ್ಣವಾಗಿ ಹಣವನ್ನು ಪಾವತಿಸಲಾಗಿರುತ್ತದೆ ಎಂದರು.
ವಿದ್ಯುತ್ ಬಿಲ್ ಮನ್ನಾ ಮಾಡಲು ಮನವಿ
ಈ ವಾರ ಕಳೆದ ನಂತರ ಸಭೆ ನಡೆಸಿ ಹೊಸ ಕಾರ್ಖಾನೆ ಸ್ಥಾಪನೆ ಬಗ್ಗೆ ಚಿಂತನೆ ಮಾಡುತ್ತೇವೆ. ಕಾರ್ಖಾನೆ ವಿದ್ಯುತ್ ಬಿಲ್ ಮನ್ನಾ ಮಾಡಲು ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಡೆಂಗ್ಯೂ ಬಗ್ಗೆ ಮುನ್ನೆಚ್ಚರಿಕೆ
ರಾಜ್ಯದಲ್ಲಿ ಡೆಂಗ್ಯೂ ಜ್ವರ ಉಲ್ಬಣಗೊಂಡಿದ್ದು, ಮಹಾಮಾರಿ ಡೆಂಗ್ಯೂ ಹೆಚ್ಚು ಹರಡದಂತೆ ಸಂಬಂಧಿಸಿದ ಆರೋಗ್ಯ ಸಚಿವರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿಗಳು ಚರ್ಚಿಸಿ, ಕ್ರಮ ವಹಿಸುವಂತೆ ಸೂಚಿಸಿದ್ದಾರೆ. ಈ ಬಗ್ಗೆ ಎಲ್ಲ ಜಿಲ್ಲೆಯಲ್ಲೂ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಜಿಲ್ಲಾಧಿಕಾರಿ, ಜಿಪಂ ಸಿಒ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.












Click it and Unblock the Notifications