ಪರ್ಯಾಯ ಮಠ ಹುಟ್ಟುಹಾಕಿದವರ್ಯಾರು? ಜೆಡಿಎಸ್ ವಿರುದ್ಧ ಚೆಲುವರಾಯಸ್ವಾಮಿ ಆಕ್ರೋಶ
ಆದಿಚುಂಚನಗಿರಿ ಮಹಾಸಂಸ್ಥಾನಮಠದ ಭೈರವೈಕ್ಯ ಬಾಲಗಂಗಾಧರನಾಥಶ್ರೀಗಳ ವಿರುದ್ಧ ಕೆಂಗೇರಿಯಲ್ಲಿ ಪರ್ಯಾಯ ಮಠ ಹುಟ್ಟುಹಾಕಿದವರ್ಯಾರು? ಇಂದಿನ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಶ್ರೀಗಳ ಫೋನ್ ಟ್ಯಾಪ್ ಮಾಡಿಸಿ ಒಂದು ಧರ್ಮಪೀಠಕ್ಕೆ ಅಗೌರವ ತಂದರಲ್ಲ ಇದಕ್ಕಿಂತ ಅಪಮಾನ ಬೇಕೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಎನ್.ಚೆಲುವರಾಯಸ್ವಾಮಿ ಜೆಡಿಎಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಸೇರಿದಂತೆ ಮೈತ್ರಿ ಪಕ್ಷದ ಅಭ್ಯರ್ಥಿಗಳು ಚುಂಚಶ್ರೀಗಳನ್ನು ಭೇಟಿ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಮೈತ್ರಿ ಅಭ್ಯರ್ಥಿಗಳಿಗಿಂತ ಮೊದಲು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ನಾವೆಲ್ಲರೂ ಚುಂಚಶ್ರೀಗಳನ್ನು ಭೇಟಿ ಮಾಡಿದ್ದೇವೆ. ಸ್ಟಾರ್ ಚಂದ್ರು ಇಲ್ಲೇ ಹುಟ್ಟಿ ಬೆಳೆದವರು. ಅವರೂ ಕೂಡ ನಾಲ್ಕು ಬಾರಿ ಶ್ರೀಗಳನ್ನು ಭೇಟಿ ಮಾಡಿದ್ದಾರೆ. ಹೋದವರಿಗೆಲ್ಲ ಶ್ರೀಗಳು ದೇವರು ಒಳ್ಳೆಯದು ಮಾಡಲಿ ಎಂದಷ್ಟೇ ಹೇಳುತ್ತಾರೆ. ಚುನಾವಣೆ ಬಂದಾಗ ಎಲ್ಲಾ ಮಠಮಾನ್ಯಗಳಿಗೆ ಎಲ್ಲಾ ಪಕ್ಷದ ಅಭ್ಯರ್ಥಿಗಳು ಹೋಗಿ ಆಶೀರ್ವಾದ ಪಡೆಯುವುದು ಸಹಜವಾದ ಪ್ರಕ್ರಿಯೆ ಎಂದರು.

ಜ್ವರ ಬಂದಾಗ ವೈದ್ಯರ ಬಳಿ ಹೋಗುವಂತೆ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ನಾಯಕರು, ಎಸ್.ಎಂ.ಕೃಷ್ಣ ಸೇರಿದಂತೆ ಎಲ್ಲರ ಬಳಿ ಹೋಗುತ್ತಿದ್ದಾರೆ. ಆದರೆ ಅವರುಗಳು ಇವರ ಪರ ಇರಬೇಕೆನ್ನುವುದಕ್ಕೆ ಏನಾದರೊಂದು ಬಲವಾದ ಕಾರಣ ಬೇಕಲ್ಲವೇ ಎಂದು ಪ್ರಶ್ನಿಸಿದರು.
ಎಚ್‌ಡಿಕೆ ವಿರುದ್ಧ ಆಕ್ರೋಶ
ಭೈರವೈಕ್ಯಶ್ರೀಗಳ ವಿರುದ್ಧ ಕೆಂಗೇರಿಯಲ್ಲಿ ಪರ್ಯಾಯ ಮಠ ಹುಟ್ಟುಹಾಕಿದವರು ಇದೇ ಜೆಡಿಎಸ್ ನಾಯಕರು. ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಶ್ರೀಗಳ ಫೋನ್‌ಟ್ಯಾಪ್ ಮಾಡಲಾಗಿತ್ತು. ಒಂದು ಧರ್ಮಪೀಠಕ್ಕೆ ಇದಕ್ಕಿಂತ ಅಪಮಾನ ಬೇಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
2004ರಲ್ಲಿ ಒಂದೇ ಪಕ್ಷಕ್ಕೆ ಬಹುಮತ ಸಿಗದಿದ್ದಾಗ ಎಸ್.ಎಂ.ಕೃಷ್ಣ ಅವರು ನಮಗೆ ಮತ್ತೊಂದು ಅವಕಾಶ ಕೊಡುವಂತೆ 59ಸ್ಥಾನ ಪಡೆದಿದ್ದ ಜೆಡಿಎಸ್ ನಾಯಕರನ್ನು ಕೇಳಿಕೊಂಡಾಗ ಏನಾಯಿತು. ಇದೇ ಜಿಲ್ಲೆಯ ಒಬ್ಬ ಒಕ್ಕಲಿಗ ನಾಯಕನ್ನು ಎರಡನೇ ಬಾರಿಗೆ ಸಿಎಂ ಮಾಡುವ ಅವಕಾಶ ಜೆಡಿಎಸ್ ಪಕ್ಷಕ್ಕೆ ಮತ್ತು ದೇವೇಗೌಡರಿಗಿತ್ತು. ಆದರೆ ಏನು ಮಾಡಿದ್ರು. ಈಗ ಅವರ ಮನೆಗೆ ಹೋಗುತ್ತಾರೆಂದರೆ ಅವರು ಏನು ಮಾಡಬೇಕೆಂಬದನ್ನು ನೀವೇ ಅರ್ಥ ಮಾಡಿಕೊಳ್ಳಬೇಕು. ನಂತರ ಎರಡನೇ ಅವಕಾಶವನ್ನು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೇಳಲಾಗಿತ್ತು. ಅದನ್ನೂ ಸಹ ಆಗುವುದಿಲ್ಲ ಎಂದರು. ಅಂತಿಮವಾಗಿ ಅವರ ಕೈಗೊಂಬೆಯಾಗಿ ಕೆಲಸ ಮಾಡಬೇಕೆನ್ನುವ ಕಾರಣಕ್ಕೆ ಧರ್ಮಸಿಂಗ್ ಅವರನ್ನು ಸಿಎಂ ಮಾಡಲಾಯ್ತು. ಆಗ ನಾನೂ ಕೂಡ ಅದೇ ಪಕ್ಷದಲ್ಲಿದ್ದು ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬದ್ದನಾಗಿದ್ದೆ. ಅಲ್ಲಿದ್ದಾಗ ನಡೆದ ಕೆಲವು ವಿಚಾರಗಳನ್ನು ಬಹಿರಂಗ ಪಡಿಸುವುದು ಸೂಕ್ತವಲ್ಲ ಎಂದರು.
ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಾಗ ಇದೇ ಎಚ್.ಡಿ.ಕುಮಾರಸ್ವಾಮಿ ನಾಯಕತ್ವದ ಜೆಡಿಎಸ್ ಶಾಸಕಾಂಗ ಪಕ್ಷದವರು ರಾಜ್ಯದ ಬಿಜೆಪಿಯೊಂದಿಗೆ ಸೇರಿ ವಿಧಾನಪರಿಷತ್‌ನಲ್ಲಿ ಕೈ ಎತ್ತಿ ಬೆಂಬಲಿಸುವ ಮೂಲಕ ರೈತ ವಿರೋಧಿ ಧೋರಣೆಯನ್ನು ಪ್ರದರ್ಶಿಸಿತು. ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡುವಂತೆ ಸರಿಯಾದ ರೀತಿಯಲ್ಲಿ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರೂ ಸಹ ಈವರೆಗೂ ಬಿಡಿಗಾಸು ಹಣ ಬಿಡುಗಡೆ ಮಾಡಿಲ್ಲ. ಬಿಜೆಪಿ ಮತ್ತು ಜೆಡಿಎಸ್‌ಗೆ ರಾಜ್ಯದ ಜನರು ಮತ ನೀಡಬೇಕೆ ಎಂದು ಪ್ರಶ್ನೆ ಮಾಡಿದರು.












Click it and Unblock the Notifications