ಜನದ್ರೋಹಿಗಳಿಗೆ ತಕ್ಕ ಪಾಠ ಕಲಿಸುವ ಕೆಲಸ ಆಗಬೇಕಿದೆ-ಅಶ್ವತ್ಥ್ ನಾರಾಯಣ್
ಮಂಡ್ಯ, ನವೆಂಬರ್ 27 : ಅಭಿವೃದ್ಧಿಗೆ ಹೆಸರಾಗಿದ್ದ ಮಂಡ್ಯ ಜಿಲ್ಲೆಯಲ್ಲಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಕುಸಿತ ಕಾಣುತ್ತಿದೆ. ಜಿಲ್ಲೆಯ ಜನರಿಂದ ಅವಕಾಶ ಪಡೆದ ಜನಪ್ರತಿನಿಧಿಗಳು ಸಮರ್ಪಕವಾಗಿ ಕೆಲಸ ಮಾಡದೆ ವಿಫಲರಾಗಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ್ ಆರೋಪಿಸಿದ್ದಾರೆ.
ಕೆಪಿಸಿಸಿ ಮಾಜಿ ಸದಸ್ಯ ಎಸ್. ಸಚ್ಚಿದಾನಂದ, ನಾಗಮಂಗಲದ ಮುಖಂಡ ರವಿ ಇತರರ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ವಾರ್ಥ ರಾಜಕಾರಣ ಸಲ್ಲದು. ಜನಪರ ಕೆಲಸ ಮಾಡುವವರೇ ನಾಯಕ. ಜನದ್ರೋಹಿಗಳಿಗೆ ತಕ್ಕ ಪಾಠ ಕಲಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.
Breaking; ರೌಡಿಗಳ ಜೊತೆ ಬಿಜೆಪಿ ಬಾಂಧವ್ಯ ಬಿಚ್ಚಿಟ್ಟ ಕಾಂಗ್ರೆಸ್
ಇಂಡುವಾಳು ಸಚ್ಚಿದಾನಂದ ಅವರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು, ಇಂಡುವಾಳು ಸಚ್ಚಿದಾನಂದ, ನಾಗಮಂಗಲ ರವಿ, ಶ್ರೀರಂಗ ಪಟ್ಟಣ ಲಿಂಗಾರಾಜು ಸೇರಿದಂತೆ ಅನೇಕರು ಸೋಮವಾರ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.

ನಿಜ ಸ್ವಾತಂತ್ರ್ಯ ರೂಪಿಸಲು ಬಿಜೆಪಿ ಸೂಕ್ತವಾದ ಪಕ್ಷ
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಅಶ್ವತ್ಥ್ ನಾರಾಯಣ್, ಗುಲಾಮಗಿರಿ ಸಹಿಸದೆ ಹಲವು ನಾಯಕರು ಈಗಾಗಲೇ ಜೆಡಿಎಸ್ ತೊರೆದಿದ್ದಾರೆ. ಮಂಡ್ಯದ ಸಮೃದ್ಧಿಯನ್ನು ಹೆಚ್ಚಿಸಲು ನಿಜ ಸ್ವಾತಂತ್ರ್ಯ ರೂಪಿಸಲು ಬಿಜೆಪಿ ಸೂಕ್ತವಾದ ಪಕ್ಷ. ದೇಶದಲ್ಲಿ ಪ್ರತಿಯೊಬ್ಬರು ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಪ್ರೀತಿಸುತ್ತಾರೆ. ಕಾಂಗ್ರೆಸ್-ಜೆಡಿಎಸ್ ಕುಟುಂಬ ಪಕ್ಷಗಳಾದರೆ, ಬಿಜೆಪಿ ಜನಪರ ಪಕ್ಷ. ವಿಶ್ವಕ್ಕೆ ಭರವಸೆಯನ್ನು ಕರ್ನಾಟಕ ನೀಡುತ್ತಿದೆ. ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರತಿಭೆ ಇರುವ ನಾಡು ಕರ್ನಾಟಕ. ಸ್ವಾಭಿಮಾನದಿಂದ ಕೆಲಸ ಮಾಡಲು ಅವಕಾಶವಿರುವ ಪಕ್ಷ ಎಂದರೆ ಬಿಜೆಪಿ ಎಂದು ಬಿಜೆಪಿಯನ್ನು ಹೊಗಳಿದರು.

ಬಿಜೆಪಿ ಮಂಡ್ಯದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ
ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾಣ ಮಾತನಾಡಿ, ತುಷ್ಟೀಕರಣದ ರಾಜಕೀಯ ಮಾಡುವ ಎರಡೂ ಪಕ್ಷಗಳಿಗೆ ಪಾಠ ಕಲಿಸಿ ಬಿಜೆಪಿ ಗೆಲ್ಲಿಸಬೇಕು. ಸಚ್ಚಿದಾನಂದ ಬಿಜೆಪಿ ಸೇರ್ಪಡೆಯಿಂದ ಮಂಡ್ಯ ಜಿಲ್ಲೆಯಲ್ಲಿ ಹೊಸ ಶಕ್ತಿ ಮತ್ತು ನವೀನ ಸಂಚಲನ ಉಂಟಾಗಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಮಂಡ್ಯ ಜಿಲ್ಲೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ಇತ್ತೀಚೆಗೆ ಕೆ.ಆರ್.ಪೇಟೆಯಲ್ಲಿ ನಡೆದ ಕುಂಭ ಮೇಳ ಯಶಸಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಹಿಂದೂತ್ವದ ವಾತಾವರಣ ಮಂಡ್ಯ ಜಿಲ್ಲೆಯಲ್ಲಿ ಉಂಟಾಗಿದೆ ಎಂದು ಹೇಳಿದರು.

ಗೂಂಡಾಗಳಿಗೆ ತಕ್ಕ ಪಾಠವನ್ನು ನಮ್ಮ ಪಕ್ಷ ಕಲಿಸಿದೆ
ಯುವ ಸಬಲೀಕರಣ ಮತ್ತು ಕ್ರೀಡಾ ಖಾತೆ ಸಚಿವ ಕೆ.ಸಿ. ನಾರಾಯಣಗೌಡ ಮಾತನಾಡಿ, ಕಾಂಗ್ರೆಸ್ಸಿನ ಹಲವಾರು ಮುಖಂಡರು ಪಕ್ಷ ಸೇರಿದ್ದರಿಂದ ಬಿಜೆಪಿ ಇನ್ನಷ್ಟು ಬಲಗೊಂಡಿದೆ. ಇತರ ಪಕ್ಷಗಳ ಭದ್ರಕೋಟೆಯನ್ನು ಒಡೆಯುವ ದೊಡ್ಡ ಶಕ್ತಿ ಇದೀಗ ಬಿಜೆಪಿಗೆ ಬಂದಿದೆ. ಕನಿಷ್ಟ 7 ಶಾಸಕರ ಸ್ಥಾನವನ್ನು ನಾವು ಮಂಡ್ಯದಲ್ಲಿ ಗೆಲ್ಲುವುದು ಖಚಿತ ಎಂದ ಅವರು, ಜೆಡಿಎಸ್- ಕಾಂಗ್ರೆಸ್ ಪಕ್ಷಕ್ಕೆ ನಾವು ಭಯಪಡಬೇಕಿಲ್ಲ ಎಂದು ತಿಳಿಸಿದರು. ಗೂಂಡಾಗಳಿಗೆ ತಕ್ಕ ಪಾಠವನ್ನು ನಮ್ಮ ಪಕ್ಷ ಕಲಿಸಿದೆ ಎಂದು ಕಿವಿಮಾತು ಹೇಳಿದರು.

ಬಿಜೆಪಿ 150ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ
ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಮಾತನಾಡಿ, ಮಂಡ್ಯ ಜಿಲ್ಲೆಯ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್- ಜೆಡಿಎಸ್ ಎದುರಿಸಲು ಬಿಜೆಪಿ ಸಮರ್ಥ ಅಭ್ಯರ್ಥಿಗಳನ್ನು ಹೊಂದಿದೆ. ಪಕ್ಷಕ್ಕೆ ಹಠ- ಛಲ ಇರಬೇಕು. ಪಕ್ಷವು ಮೋದಿ ಹಾಗೂ ಬೊಮ್ಮಾಯಿ ಮತ್ತು ಇತರ ಸಮರ್ಥ ನಾಯಕರ ನೇತೃತ್ವದಲ್ಲಿ ರಾಜ್ಯದಲ್ಲಿ 150ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ಕೋವಿಡ್ ಸಂಕಷ್ಟ ನಿವಾರಣೆಗೆ ಕೇಂದ್ರ- ರಾಜ್ಯ ಸರಕಾರಗಳು ಗರಿಷ್ಟ ನೆರವು ನೀಡಿವೆ. ಫಲಾನುಭವಿಗಳ ಭೇಟಿಯಿಂದ ಪಕ್ಷಕ್ಕೆ ಪೂರಕ ವಾತಾವರಣ ನಿರ್ಮಾಣವಾಗಿದೆ. ಈಗ ಪಕ್ಷದ ಸರ್ಕಾರಗಳು ಅಭಿವೃದ್ಧಿಗೆ ಆದ್ಯತೆ ನೀಡಿವೆ. ಇದು ಪಕ್ಷದ ಗೆಲುವಿಗೆ ಪೂರಕ ಎಂದು ತಿಳಿಸಿದರು.
ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಮಾತನಾಡಿ, ಬಿಜೆಪಿಗೆ ಮಂಡ್ಯ ಜಿಲ್ಲೆಯಲ್ಲಿ ಅಭ್ಯರ್ಥಿಗಳ ಕೊರತೆ ಇಲ್ಲ. ಮಂಡ್ಯ ಜಿಲ್ಲೆಯು ಜಿದ್ದಾಜಿದ್ದಿನ ಕ್ಷೇತ್ರಗಳನ್ನು ಹೊಂದಿದೆ. ಜನರು ಬಿಜೆಪಿ ಪರ ಬರುವಂತೆ ಅಭಿವೃದ್ಧಿ ಕೆಲಸಗಳು ಆಗಬೇಕು ಎಂದು ಮನವಿ ಮಾಡಿದರು.