ಮೇಲುಕೋಟೆ ದೇವಾಲಯದ ಪ್ರಥಮ ಸ್ಥಾನಿಕ ವಿಧಿವಶ: ಮಧ್ಯಾಹ್ನದವರೆಗೂ ಭಕ್ತರಿಗಿಲ್ಲ ದರ್ಶನ
ಮಂಡ್ಯ, ಜೂನ್.16: ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದ ಪ್ರಥಮ ಸ್ಥಾನಿಕರಾಗಿದ್ದ ಕರಗಂ ನಾರಾಯಣ ಅಯ್ಯಂಗಾರ್ (82) ವಿಧಿವಶರಾಗಿದ್ದಾರೆ. ಇಂದು ಜೂನ್ 16 ಭಾನುವಾರ ಕರಗಂ ನಾರಾಯಣ ಅಯ್ಯಂಗಾರ್ ಅವರು ಕೊನೆಯುಸಿರೆಳೆದಿದ್ದಾರೆ. ಹೀಗಾಗಿ ಇಂದು ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯಕ್ಕೆ ತೆರಳುವ ಭಕ್ತರು ಈ ವಿಚಾರವನ್ನು ಗಮನಿಸಬೇಕಾಗಿದೆ.
ಪ್ರಥಮ ಸ್ಥಾನಿಕರಾಗಿದ್ದ ಕರಗಂ ನಾರಾಯಣ ಅಯ್ಯಂಗಾರ್ ನಿಧನರಾಗಿದ್ದು, ಅವರ ಅಂತ್ಯಕ್ರಿಯೆ ಮುಗಿಯುವವರೆಗೂ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯ ಬಾಗಿಲು ಮುಚ್ಚಿರಲಿದೆ. ಅವರ ಅಂತ್ಯಕ್ರಿಯೆ ಮುಗಿದು ಶುದ್ಧಿ ಬಳಿಕ ಮಧ್ಯಾಹ್ನ 12 ಗಂಟೆ ನಂತರ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಮಾಹಿತಿ ಹಂಚಿಕೊಂಡಿದೆ.

ಇಂದು ಭಾನುವಾರ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯಕ್ಕೆ ತೆರಳುವವರು ಮಧ್ಯಾಹ್ನ 12 ಗಂಟೆ ಬಳಿಕ ತೆರಳುವುದು ಉತ್ತಮವಾಗಿದೆ. ಸದ್ಯ ದೇವಾಲಯದ ಬಾಗಿಲು ಮುಚ್ಚಿದ್ದು, ಮಧ್ಯಾಹ್ನದ ನಂತರ ತೆರೆಯಲಿದೆ.
ಕರಗಂ ನಾರಾಯಣ ಅಯ್ಯಂಗಾರ್ ಅವರ ಚೆಲುವನಾರಾಯಣನ ಸೇವೆ
ಕರಗಂ ನಾರಾಯಣ ಅಯ್ಯಂಗಾರ್ ಅವರು ಚೆಲುವನಾರಾಯಣನ ಸೇವೆಗಾಗಿಯೇ ತಮ್ಮ ಇಡೀ ಜೀವನ ಮುಡಿಪಾಗಿಟ್ಟಿದ್ದರು. ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಅವರು ನಿವೃತ್ತಿ ಬಳಿಕ ದೇವಾಲಯದಲ್ಲಿ ಸ್ಥಾನಿಕರಾಗಿದ್ದರು. ಸುಧೀರ್ಘವಾಗಿ ಚೆಲುವನಾರಾಯಣನ ಸೇವೆಯನ್ನು ಭಕ್ತಿ-ನಿಷ್ಠೆಯಿಂದ ಮಾಡಿರುವ ಕರಗಂ ನಾರಾಯಣ ಅಯ್ಯಂಗಾರ್ ಅವರ ಅಂತ್ಯಕ್ರಿಯೆಯನ್ನು ದೇವಾಲಯದ ಸಾಂಪ್ರದಾಯಿಕ ಮರ್ಯಾದೆಯೊಡನೆ ಮೇಲುಕೋಟೆಯಲ್ಲೇ ನಡೆಸಲು ನಿರ್ಧರಿಸಲಾಗಿದೆ.
ಸದ್ಯ ಕರಗಂ ನಾರಾಯಣ ಅಯ್ಯಂಗಾರ್ ಅವರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಭಕ್ತರು ಹಾಗೂ ಆಪ್ತರು ಅಂತಿಮ ದರ್ಶನ ಪಡೆದ ಬಳಿಕ ಕರಗಂ ನಾರಾಯಣ ಅಯ್ಯಂಗಾರ್ ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳು ಆರಂಭವಾಗಲಿದೆ.












Click it and Unblock the Notifications