CM Post Fight: ಒಕ್ಕಲಿಗರ ಕೋಟೆಯಲ್ಲಿ ಲಿಂಗಾಯತ ಸಿಎಂ ಮಾತು: ಡಿಕೆಶಿ ಆಪ್ತನಿಂದಲೇ ಆ ನಾಯಕನ ಪರ ಬ್ಯಾಟಿಂಗ್
ಮಂಡ್ಯ, ಮೇ 31: 2023 ರ ವಿಧಾನಸಭಾ ಚುನಾವಣೆಯಲ್ಲಿ 135 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸುವ ಮೂಲಕ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸಿದ್ದು, ಸರ್ಕಾರ ರಚನೆಯಾದ ಆರಂಭದ ದಿನದಿಂದಲೂ ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ನಡುವೆ ಹಗ್ಗಜಗ್ಗಾಟ ಶುರುವಾಗಿತ್ತು. ರಾಜ್ಯ ಕಾಂಗ್ರೆಸ್‌ನಲ್ಲಿ ಶೀಘ್ರದಲ್ಲಿಯೇ ರಾಜಕೀಯದಲ್ಲಿ ಬದಲಾವಣೆಯಾಗಲಿದೆಯೇ? ಅಥವಾ ಸಿಎಂ ಬದಲಾವಣೆಯಾಗಲಿದ್ದಾರಾ? ಎನ್ನುವ ಚರ್ಚೆ ನಡೆಯುತ್ತಿದ್ದು, ಇದೀಗ ಲಿಂಗಾಯತ ಸಿಎಂ ಬಗ್ಗೆ ಡಿ ಕೆ ಶಿವಕುಮಾರ್ ಆಪ್ತ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.
ಹೌದು, ಮುಖ್ಯಮಂತ್ರಿ ಸ್ಥಾನದ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರು ಅಧಿಕಾರ ಹಂಚಿಕೆ ಕುರಿತು ಚರ್ಚೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕರು ಬಹಿರಂಗವಾಗಿ ಹೇಳಿಕೆ ನೀಡಿದ್ರು. ಅಲ್ಲದೇ ಡಿ ಕೆ ಶಿವಕುಮಾರ್ ಸಹ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಹೇಳಿಕೆ ನೀಡಿದ್ದು, ಕಾಂಗ್ರೆಸ್‌ನಲ್ಲಿ ಬಣ ಬಡಿದಾಟಕ್ಕೆ ಕಾರಣವಾಗಿತ್ತು. ಇದೀಗ ಒಕ್ಕಲಿಗರ ಭದ್ರಕೋಟೆಯಾದ ಮಂಡ್ಯದಲ್ಲಿ ಲಿಂಗಾಯತ ನಾಯಕರ ಕಹಳೆ ಮೊಳಗಿದೆ.

ಹಳೇ ಮೈಸೂರು ಭಾಗ ಒಕ್ಕಲಿಗರ ಪ್ರಾಭಲ್ಯ ಹೆಚ್ಚಾಗಿದ್ದು, ಮಂಡ್ಯದಲ್ಲಿ ಬಸವ ಜಯಂತಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ನ ಲಿಂಗಾಯತ ನಾಯಕರು, ಜೊತೆಗೆ ಒಕ್ಕಲಿಗ ನಾಯಕರೂ ಕೂಡ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಆಪ್ತ, ಕಾಂಗ್ರೆಸ್ ಶಾಸಕ ರವಿಕುಮಾರ್ ಅವರು ಮಂಡ್ಯದಲ್ಲಿ ಸಚಿವ ಎಂ.ಬಿ.ಪಾಟೀಲ್ ಅವರ ಪರ ಬ್ಯಾಟ್ ಬೀಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಶುಕ್ರವಾರ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ಅವರು , ಎಂ.ಬಿ ಪಾಟೀಲ್ ಅವರಿಗೆ ಮುಖ್ಯಮಂತ್ರಿ ಆಗುವ ಲಕ್ಷಣ ಇದೆ ಎಂದಿದ್ದಾರೆ. ಕೈಗಾರಿಕ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಮುಖ್ಯಮಂತ್ರಿ ಆಗುವ ಎಲ್ಲ ಲಕ್ಷಣ ಇದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ನಮ್ಮ ಜಿಲ್ಲೆಯ ಸುಪುತ್ರ, ಭವಿಷ್ಯದ ನಾಯಕ ಎಂದು ಹೇಳಿದರು. ಲಿಂಗಾಯತ ನಾಯಕ ಹಾಗೂ ಸಚಿವ ಎಂ ಬಿ ಪಾಟೀಲ್ ಪರ ರವಿಕುಮಾರ್ ಗಣಿಗ ಅವರು ಸಿಎಂ ಕುರಿತು ಬಹಿರಂಗವಾಗಿ ಹೇಳಿಕೆ ನೀಡಿರುವುದು ಹಲವು ಅಚ್ಚರಿಗೆ ಕಾರಣವಾಗಿದೆ.












Click it and Unblock the Notifications