Mandya JDS Candidate: ಮಂಡ್ಯ ಜೆಡಿಎಸ್ ಅಭ್ಯರ್ಥಿ ಬದಲಾವಣೆ, ಎಂ ಶ್ರೀನಿವಾಸ್‌ರಿಂದ ಕೈಜಾರಿದ ಟಿಕೆಟ್
ಮಂಡ್ಯ, ಏಪ್ರಿಲ್ 19: ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯ ಬದಲಾವಣೆಯಾಗಿದೆ. ಇದರಿಂದ ಈ ಹಿಂದೆ ಟಿಕೆಟ್ ಪಡೆದು ಪ್ರಚಾರಕ್ಕೆ ಇಳಿದಿದ್ದ ಹಾಲಿ ಶಾಸಕ ಎಂ ಶ್ರೀನಿವಾಸ್‌ಗೆ ಭಾರೀ ಮುಖಭಂಗವಾಗಿದೆ.
ಬುಧವಾರ ಜೆಡಿಎಸ್ ಟಿಕೆಟನ್ನು ಮರು ಘೋಷಣೆ ಮಾಡಲಾಗಿದ್ದು, ಪ್ರಸ್ತುತ ಮನ್ಮುಲ್ ಅಧ್ಯಕ್ಷ ರಾಮಚಂದ್ರುಗೆ ಜೆಡಿಎಸ್ ಟಿಕೆಟ್ ಘೋಷಣೆಯಾಗಿದೆ. ಮೊದಲ ಪಟ್ಟಿಯಲ್ಲಿ ಜೆಡಿಎಸ್‌ನಿಂದ ಟಿಕೆಟ್ ಅನ್ನು ಹಾಲಿ ಶಾಸಕ ಎಂ ಶ್ರೀನಿವಾಸ್‌ಗೆ ನೀಡಲಾಗಿತ್ತು. ಕೊನೆಗೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರೇ ಇಲ್ಲಿ ವಿಧಾನಸಭಾ ಚುನಾವಣೆಗೆ ನಿಲ್ಲುತ್ತಾರೆ ಎಂದು ತಿಳಿಸಲಾಗಿತ್ತು.

ಈಗ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ಅನ್ನು ಮನ್ಮುಲ್ ಅಧ್ಯಕ್ಷರಾಗಿರುವ ರಾಮಚಂದ್ರು ಅವರಿಗೆ ನೀಡಲಾಗಿದ್ದು, ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಅವರು ಬಿ ಫಾರಂ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಮಂಡ್ಯ ವಿಧಾನಸಭಾ ಚುನಾವಣೆಗೆ ಟಿಕೆಟ್ ಗಿಟ್ಟಿಸಿಕೊಂಡಿದ್ದ ಎಂ ಶ್ರೀನಿವಾಸ್‌ಗೆ ಬಿ ಫಾರಂ ಅನ್ನು ನೀಡಲಾಗಿರಲಿಲ್ಲ.
ಜೆಡಿಎಸ್ ಮಂಡ್ಯ ಟಿಕೆಟ್ ಅನ್ನು ಕಾಂಗ್ರೆಸ್ ಯಾರಿಗೆ ನೀಡಲಿದೆ ಎಂಬುದರ ಮೇಲೆ ಜೆಡಿಎಸ್ ಇಲ್ಲಿ ನಿರ್ಧಾರ ಮಾಡಬೇಕಿತ್ತು. ಈ ಹಿನ್ನೆಲೆಯಲ್ಲಿ ಜೆಡಿಎಸ್ ತನ್ನ ನಿರ್ಧಾರವನ್ನು ಬದಲಿಸಿದೆ ಎನ್ನಲಾಗುತ್ತಿದೆ. ಎಂ ಶ್ರೀನಿವಾಸ್ ಅವರಿಗೆ ಟಿಕೆಟ್ ನೀಡಲಾಗಿತ್ತಾದರೂ ಟಿಕೆಟ್‌ಗೆ ವಿಜಯಾನಂದ, ಮನ್ಮುಲ್ ಅಧ್ಯಕ್ಷ ಬಿಆರ್ ರಾಮಚಂದ್ರು ಹಾಗೂ ಯೋಗೇಶ್ ಅವರು ಆಕಾಂಕ್ಷಿಗಳಾಗಿದ್ದರು.
ಜೆಡಿಎಸ್‌ಗೆ ಪ್ರತಿಷ್ಠೆಯ ಕಣವಾಗಿದ್ದ ಮಂಡ್ಯ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವುದು ಅನಿವಾರ್ಯವೇ ಆಗಿದೆ. ಹೀಗಾಗಿ ಎಚ್‌ಡಿ ಕುಮಾರಸ್ವಾಮಿ ಅವರು ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿತ್ತು. ಕ್ಷೇತ್ರದಲ್ಲಿ ಈಗಾಗಲೇ ಗಣಿ ವಿಚಾರಕ್ಕೆ ಹಾಲಿ ಶಾಸಕ ಎಂ ಶ್ರೀನಿವಾಸ್ ಅವರು ಹೆಸರು ಕೆಸಿಕೊಂಡಿದ್ದಾರೆ ಎಂದು ಹೇಳಲಾಗಿತ್ತು.

ಈಗ ಮುಂದುವರೆದ ಬೆಳವಣಿಗೆಯಲ್ಲಿ ಬಿಆರ್ ರಾಮಚಂದ್ರುಗೆ ಟಿಕೆಟ್ ನೀಡಲಾಗಿದ್ದು ದೇವೇಗೌಡರಿಂದ ಬಿ ಫಾರಂ ಅನ್ನು ನೀಡಲಾಗಿದೆ. ಇದಕ್ಕೂ ಮೊದಲು ಹಾಲಿ ಶಾಸಕ ಎಂ ಶ್ರೀನಿವಾಸ್ ಅವರ ಅಳಿಯ ಆಗಿರುವ ಯೋಗೇಶ್‌ಗೆ ಟಿಕೆಟ್ ನೀಡಬೇಕು ಎಂದು ಸ್ವತಃ ಎಂ ಶ್ರೀನಿವಾಸ್ ಅವರೇ ಹೇಳಿದ್ದರು ಎನ್ನಲಾಗಿತ್ತು. ಆದರೆ ಅವರ ಮಾತಿಗೆ ಪಕ್ಷ ಗಣನೆಗೆ ತೆಗೆದುಕೊಂಡಿಲ್ಲ ಎಂದು ಹೇಳಲಾಗಿದೆ.
ಕಳೆದ ಎರಡು ದಿನಗಳಿಂದ ನಡೆದ ರಾಜಕೀಯ ಬೆಳವಣಿಗೆಯಿಂದ ಕೊನೆಗೆ ಈಗ ಬಿಆರ್ ರಾಮಚಂದ್ರು ಅವರಿಗೆ ಟಿಕೆಟ್ ನೀಡಲಾಗಿದೆ. ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ತಂತ್ರಗಾರಿಕೆಯನ್ನು ಅರಿತೇ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications