Mandya Riots: ಪಾಕಿಸ್ತಾನದ ಮನಸ್ಥಿತಿ ಇರುವವರು ಕಿಡಿ ಹಚ್ಚಿದ್ದಾರೆ- ಕೆಎಸ್ ಈಶ್ವರಪ್ಪ
ಶಿವಮೊಗ್ಗ ಸೆಪ್ಟೆಂಬರ್ 12: ಪಾಕಿಸ್ತಾನದ ಮನಸ್ಥಿತಿ ಇರುವವರು ಕಿಡಿ ಹಚ್ಚಿದ್ದಾರೆ ಎಂದು ಮಂಡ್ಯದಲ್ಲಿ ಗಣೇಶ ಮೆರವಣಿಗೆ ವೇಳೆ ನಡೆದ ಗಲಾಟೆ ವಿಚಾರವಾಗಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಶಿವಮೊಗ್ಗದಲ್ಲಿ ವಾಗ್ದಾಳಿ ಮಾಡಿದರು.
ಹಿಂದೂಗಳೆಲ್ಲರೂ ಸೇರಿ ಹಿಂದೂಗಳ ಆರಾಧ್ಯ ದೈವ ಗಣಪತಿ ಮೆರವಣಿಗೆ ನಡೆಸುವ ಸಂದರ್ಭದಲ್ಲಿ ಗಲಾಟೆ ನಡೆದಿದೆ. ಮೆರವಣಿಗೆ ವೇಳೆ ಪಾಕಿಸ್ತಾನದ ಮನಸ್ಥಿತಿ ಇರುವವರು ಕಿಡಿ ಹಚ್ಚಿದ್ದಾರೆ. ಮಸೀದಿ ಎದುರಿಗೆ ಮೆರವಣಿಗೆ ತೆಗೆದುಕೊಂಡು ಹೋಗಬಾರದು, ಮಸೀದಿ ಎದುರಿಗೆ ಡೊಳ್ಳು ಹೊಡಿಯಬಾರದು, ಮಂಗಳವಾದ್ಯ ನುಡಿಸಬಾರದೆಂದು ಕಲ್ಲು ಎಸೆದಿದ್ದಾರೆ ಎಂದು ಈಶ್ವರಪ್ಪ ಕಿಡಿ ಕಾರಿದ್ದಾರೆ.

ಕೃತಕ ಬಾಂಬ್ ಎಸೆದು ರಾಷ್ಟ್ರದ್ರೋಹಿ ಕೃತ್ಯವೆಸಗಿದ್ದಾರೆ. ದೇಶದಲ್ಲಿ ಈ ರೀತಿಯಾಗುವುದು ಕಡಿಮೆಯಾಗಿದೆ. ಆದರೆ ಕರ್ನಾಟಕ ರಾಜ್ಯದಲ್ಲಿ ಪಾಕಿಸ್ತಾನ ಮನಸ್ಥಿತಿ ಇರುವವರು ಈ ರೀತಿ ಬದುಕು ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದ್ದಾರೆ.
ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಪ್ರಶ್ನೆಯಿಲ್ಲದೇ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪ್ರಶ್ನೆಯಿಲ್ಲದೇ ಎಲ್ಲಾ ರಾಷ್ಟ್ರಭಕ್ತರು ಇದನ್ನು ಖಂಡಿಸಬೇಕು. ರಾಷ್ಟ್ರದ್ರೋಹಿ ಕೆಲಸವನ್ನು ಖಂಡಿಸಬೇಕು. ರಾಜ್ಯದಲ್ಲಿ, ದೇಶದಲ್ಲಿ ಈ ರೀತಿ ಎಂದೂ ಆಗಬಾರದು. ಯಾರು ಈ ರೀತಿ ಮಾಡಿದ್ದಾರೆ ಅವರ ವಿರುದ್ಧ ಕ್ರಮ ಜರುಗಿಸಬೇಕು ಆರೋಪಿಗಳನ್ನು ಬಂಧಿಸಿ ಅವರ ಮೇಲೆ ರಾಷ್ಟ್ರದ್ರೋಹಿ ಕೇಸುಗಳನ್ನು ಹಾಕಬೇಕು. ಆರೋಪಿಗಳಿಗೆ ಜೈಲಿಗೆ ಹಾಕಬೇಕು. ಎಲ್ಲರೂ ಒಟ್ಟಾಗಿ ಸೇರಿ ಇದನ್ನು ಖಂಡನೆ ಮಾಡಬೇಕು ಎಂದರು.

ಕಳೆದ ದಿನ ನಾಗಮಂಗಲದಲ್ಲಿ ಕೋಮುಗಲಭೆ
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ಬುಧವಾರ ರಾತ್ರಿ ಗಣೇಶ ಮೆರವಣಿಗೆ ವೇಳೆ ಕೋಮುಗಲಭೆ ಉಂಟಾಗಿದೆ. ಸಂಜೆ 6.30ರ ವೇಳೆಗೆ ಗಣೇಶನ ವಿಸರ್ಜನಾ ಮೆರವಣಿಗೆ ಆರಂಭವಾಗಿತ್ತು. ನಾಗಮಂಗಲ ಪಟ್ಟಣದ ಬದರಿಕೊಪ್ಪಲಿನಲ್ಲಿ ಕಳೆದ ಐದು ದಿನಗಳ ಹಿಂದೆ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಬುಧವಾರ ಸಂಜೆ ಅದ್ಧೂರಿಯಾಗಿ ವಿಸರ್ಜನಾ ಮೆರವಣಿಗೆ ಹಮ್ಮಿಕೊಂಡಿದ್ದರು. ಪಟಾಕಿ ಸಿಡಿಸುತ್ತಾ, ಡೊಳ್ಳು, ತಮಟೆ, ಡಿಜೆ ಸೌಂಡ್‌ನೊಂದಿಗೆ ಹಿಂದೂಗಳು ಗಣೇಶನ ಮೂರ್ತಿ ವಿಸರ್ಜನೆ ಮೆರವಣಿಗೆ ಹೊರಟಿದ್ದರು.
ಬದರಿಕೊಪ್ಪದಿಂದ ಹೊರಟ ಗಣೇಶನ ವಿಸರ್ಜನಾ ಮೆರವಣಿಗೆ ಮಂಡ್ಯ ಸರ್ಕಲ್ ಮಾರ್ಗವಾಗಿ ತೆರಳಿತ್ತು. ಯಾ ಅಲ್ಲಾ ಮಸೀದಿ ಮತ್ತು ದುರ್ಗಾ ಮುಂಭಾಗದ ರಸ್ತೆಯತ್ತ ಮೆರವಣಿಗೆ ಹೊರಟಿತ್ತು. ಆದರೆ ನಾಗಮಂಗಲದ ಮಂಡ್ಯ ಸರ್ಕಲ್ ಬಳಿಯೇ ಕೆಲ ಅನ್ಯಕೋಮಿನ ಯುವಕರು ಮೆರವಣಿಗೆ ತಡೆಯೊಡ್ಡಿದ್ದಾರೆ. ಮಸೀದಿ ಮುಂದೆ ಡಿಜೆ ಸೌಂಡ್, ತಮಟೆ, ಡೊಳ್ಳು ಬಾರಿಸದಂತೆ ಕ್ಯಾತೆ ತೆಗೆದಿದ್ದಾರೆ. ಈ ವೇಳೆ ಗುಂಪುಗಳ ನಡುವೆ ವಾಗ್ವಾದ ನಡೆದಿದೆ.

ಅನ್ಯಕೋಮಿನ ಯುವಕರ ಕ್ಯಾತೆಗೆ ಕೇರ್ ಮಾಡದ ಗಣೇಶನ ವಿಸರ್ಜನಾ ತಂಡ, ಮೈಸೂರು ರಸ್ತೆಯಲ್ಲಿರುವ ಯಾ ಅಲ್ಲಾ ಮಸೀದಿ ಮತ್ತು ದುರ್ಗಾ ಮುಂಭಾಗದ ರಸ್ತೆಯಲ್ಲಿ ಮೆರವಣಿಗೆ ಹೊರಟಿದೆ. ಇನ್ನೇನು ಮಸೀದಿ ಸ್ವಲ್ಪ ದೂರವಿದೆ ಎನ್ನುವಷ್ಟರಲ್ಲಿ ಕೆಲ ಕಿಡಿಗೇಡಿಗಳು ಗಣೇಶನ ಮೂರ್ತಿ ಇರುವ ಕಡೆಗೆ ಕಲ್ಲು ತೂರಿದ್ದಾರೆ. ಮಸೀದಿ ಮೇಲೆ ಕಟ್ಟಡಗಳ ಮೇಲೆ ನಿಂತು ಮನಬಂದಂತೆ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿ ಕಲ್ಲು ತೂರಿದವರ ವಿರುದ್ಧ ಕ್ರಮದ ಭರವಸೆ ನೀಡಿದ್ದಾರೆ.
ಆದರೆ ರಾತ್ರಿ 10 ಗಂಟೆ ಸುಮಾರಿಗೆ ಅನ್ಯಕೋಮಿನ ಯುವಕರ ಗುಂಪು ಸಿಕ್ಕಸಿಕ್ಕ ಅಂಗಡಿಗಳಿಗೆ ಬೆಂಕಿ ಹಚ್ಚಿದೆ, ಬೈಕ್‌ಗಳನ್ನು ಸುಟ್ಟುಹಾಕಿದ್ದಾರೆ. ಪೆಟ್ರೋಲ್ ಬಾಂಬ್ ಸಿಡಿಸಿದ್ದಾರೆ. ಅಲ್ಲದೆ ಕೆಲವರು ಲಾಂಗು, ರಾಡ್, ತಲ್ವಾರ್‌ಗಳನ್ನು ಹಿಡಿದು ಅಟ್ಟಹಾಸ ಪ್ರದರ್ಶಿಸಿದ್ದಾರೆ. ಹೀಗಾಗಿ ಸೆಪ್ಟೆಂಬರ್ 14ರವರೆಗೆ ಸೆಕ್ಷನ್ 144 ಅಡಿ ನಿಷೇಧಾಜ್ಞೆ ಹೇರಲಾಗಿದೆ.












Click it and Unblock the Notifications