ಮಂಡ್ಯದಲ್ಲಿ ತೆನೆ ವಿರುದ್ಧದ ಅಸಮಾಧಾನ ಕಮಲಕ್ಕೆ ಲಾಭನಾ?
ಮಂಡ್ಯ, ಅಕ್ಟೋಬರ್ 21 : ಮಂಡ್ಯ ಲೋಕಸಭೆಯ ಉಪಚುನಾವಣೆ ಬರೀ ಚುನಾವಣೆಯಾಗಿ ಉಳಿದಿಲ್ಲ. ಇದು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಗೆ ಸಾಕ್ಷಿಯಾಗಿ, ಬಿಜೆಪಿಗೆ ಅಗ್ನಿಪರೀಕ್ಷೆಯಾಗಿಯೂ, ಜೆಡಿಎಸ್ ಗೆ ಮಗ್ಗುಲ ಮುಳ್ಳಾಗಿಯೂ ಕಂಡು ಬರುತ್ತಿದ್ದು, ಸದ್ಯಕ್ಕೆ ಜೆಡಿಎಸ್ ಮತ್ತು ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿ ಬಿಂಬಿತವಾಗುತ್ತಿದೆ.
ಜತೆಜತೆಗೆ ಒಂದಷ್ಟು ಗೊಂದಲ, ಅಸಮಾಧಾನಗಳು ನಿರೀಕ್ಷೆಗಳನ್ನೆಲ್ಲ ಹುಸಿಗೊಳಿಸಿದರೆ ಅಚ್ಚರಿಪಡಬೇಕಾಗಿಲ್ಲ. ತಮ್ಮ ಸರ್ಕಾರಿ ಹುದ್ದೆಯನ್ನು ತೊರೆದು ದೇವೇಗೌಡರ ಮಾತಿಗೆ ಕಟ್ಟುಬಿದ್ದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಲಕ್ಷ್ಮಿಅಶ್ವಿನ್ ಗೌಡ ಅವರಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಲಿಲ್ಲ.
ಹೋಗಲಿ ಲೋಕಸಭಾ ಉಪಚುನಾವಣೆಯಲ್ಲಾದರೂ ಟಿಕೆಟ್ ನೀಡಬಹುದೆಂದು ನಿರೀಕ್ಷೆಯಲ್ಲಿದ್ದ ಅವರಿಗೆ ಅದರಲ್ಲೂ ಟಿಕೆಟ್ ಸಿಕ್ಕಿಲ್ಲ. ಯಾವಾಗ ತನಗೆ ಮೋಸವಾಯಿತು ಎನ್ನುವುದು ಗೊತ್ತಾಯಿತೋ ಲಕ್ಷ್ಮಿ ಗಳಗಳನೆ ಕಣ್ಣೀರು ಸುರಿಸಿದ್ದರು. ಅದು ನಾಟಕವಾಗಿರಲಿಲ್ಲ. ಅದು ಸಹಜವಾಗಿ, ಮನನೊಂದು ಹರಿದ ಕಣ್ಣೀರಾಗಿತ್ತು.
ಅವರ ಕಣ್ಣೀರು ಜೆಡಿಎಸ್ ನ ಕಾರ್ಯಕರ್ತರನ್ನು ದುಃಖದ ಮಡುವಿಗೆ ತಳ್ಳಿದ್ದು ಅದು ಈಗ ಆಕ್ರೋಶವಾಗಿ ಹೊರಹೊಮ್ಮಲು ಕಾರಣವಾಗಿದೆ. ಬಹುಶಃ ಕಾರ್ಯಕರ್ತರು ಬೇರೆ ಯಾರಿಗೆ ಟಿಕೆಟ್ ನೀಡಿದ್ದರೂ ಒಪ್ಪಿಕೊಳ್ಳುತ್ತಿದ್ದರೇನೋ ಆದರೆ ಎಲ.ಆರ್.ಶಿವರಾಮೇಗೌಡ ಅವರಿಗೆ ಟಿಕೆಟ್ ನೀಡಿರುವುದು ಬಹಳಷ್ಟು ಮಂದಿಗೆ ಅಸಮಾಧಾನವನ್ನುಂಟು ಮಾಡಿದೆ. ಇದಕ್ಕೆ ಕಾರಣವೂ ಇದೆ. ಮುಂದೆ ಓದಿ...

ಜೆಡಿಎಸ್ ಕಾರ್ಯಕರ್ತರಲ್ಲೇ ಅಸಮಾಧಾನ
ಎಲ್.ಆರ್.ಶಿವರಾಮೇಗೌಡರು ಚುನಾವಣೆ ಬಂದಾಗಲೆಲ್ಲ ತಮಗೆ ಅನುಕೂಲವಾಗುವ ಪಕ್ಷಕ್ಕೆ ಸೇರ್ಪಡೆಗೊಳ್ಳುವುದು ಮಾಮೂಲಿಯಾಗಿದೆ. ಹಿಂದೆ ಕಾಂಗ್ರೆಸ್, ಬಿಜೆಪಿ ಎಲ್ಲ ಪಕ್ಷಗಳಲ್ಲಿಯೂ ಅವರು ಗುರುತಿಸಿಕೊಂಡಿದ್ದರು. ಆದರೆ ರಾಜಕೀಯವಾಗಿ ಅವರನ್ನು ಯಾವ ಪಕ್ಷವೂ ಕೈಹಿಡಿಯಲಿಲ್ಲ.
ಮಂಡ್ಯದಲ್ಲಿ ಜೆಡಿಎಸ್ ಪ್ರಬಲವಾಗುತ್ತಿದೆ ಎನ್ನುವುದು ಅರಿವಾಗುತ್ತಿದ್ದಂತೆಯೇ ಇದೀಗ ಜೆಡಿಎಸ್ ನತ್ತ ಮುಖ ಮಾಡಿದ್ದಾರೆ. ಜತೆಗೆ ಲೋಕಸಭಾ ಉಪಚುನಾವಣೆಯ ಟಿಕೆಟ್ ಪಡೆಯುವಲ್ಲಿಯೂ ಯಶಸ್ವಿಯಾಗಿದ್ದು, ಇದೀಗ ಮಂಡ್ಯ ಜೆಡಿಎಸ್ ನ ಕಾರ್ಯಕರ್ತರಲ್ಲೇ ಅಸಮಾಧಾನ ಕಂಡು ಬರುತ್ತಿದೆ.
ಜತೆಗೆ ಹಲವರು ತಮ್ಮ ಅಸಮಾಧಾನವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹೊರ ಹಾಕುತ್ತಿದ್ದಾರೆ. ಇದರ ಲಾಭವನ್ನು ತಮ್ಮ ಪಕ್ಷಕ್ಕೆ ಬಳಸಿಕೊಳ್ಳಲು ಈಗ ಬಿಜೆಪಿ ಸಜ್ಜಾಗಿದೆ.

ಲಕ್ಷ್ಮಣ್ ಅವರನ್ನು ಬಿಜೆಪಿಗೆ ಕರೆತರಲು ಯತ್ನ
ಹಳೇ ಮೈಸೂರು ವ್ಯಾಪ್ತಿಯಲ್ಲಿ ತನ್ನ ಪ್ರಾಬಲ್ಯ ಮೆರೆಯಲು ತೆರೆಮರೆಯ ಯತ್ನ ನಡೆಸುತ್ತಿರುವ ಬಿಜೆಪಿಗೆ ಮಂಡ್ಯ ಜೆಡಿಸ್ ನ ಕಾರ್ಯಕರ್ತರಲ್ಲಿ ಎದ್ದಿರುವ ಅಸಮಾಧಾನವನ್ನು ಬಳಸಿಕೊಂಡು ತಾವು ಹೇಗೆ ಗೆಲುವು ಕಾಣಬಹುದು ಎಂಬುದರ ಬಗ್ಗೆ ತಂತ್ರಗಳನ್ನು ಹೆಣೆಯಲು ಆರಂಭಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಅವರು ಜನತೆಯ ಮನೆ ಬಾಗಿಲು ತಟ್ಟಲು ಶುರು ಮಾಡಿಕೊಂಡಿದ್ದಾರೆ. ಇಲ್ಲಿ ಕಾಂಗ್ರೆಸ್ ಜೆಡಿಎಸ್ ಗೆ ಸಾಥ್ ನೀಡುತ್ತೆ ಎಂದರೂ ದೇವೇಗೌಡರ ಕುಟುಂಬದೊಂದಿಗೆ ಮುನಿಸಿಕೊಂಡಿರುವ ಚೆಲುವರಾಯಸ್ವಾಮಿ ಅವರು ಪ್ರಚಾರಕ್ಕಂತು ಬರುವುದು ಅಷ್ಟರಲ್ಲಿಯೇ ಇದೆ.
ಅವರಿಗೂ ಕಾಂಗ್ರೆಸ್‌ನಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರುವ ಬಗ್ಗೆ ಅಸಮಾಧಾನವಿದೆ. ಸದ್ಯಕ್ಕೆ ಬಿಜೆಪಿ ನೇರಾನೇರ ಜೆಡಿಎಸ್ ಗೆ ಫೈಟ್ ನೀಡಲು ಸರ್ವ ಸನ್ನದ್ಧವಾಗಿ ನಿಂತಿದ್ದು, ಅದಾಗಲೇ ಎಲ್ಲ ಜಾತಿ, ಸಮುದಾಯದ ನಾಯಕರನ್ನು ತಂದು ತಮ್ಮ ಅಭ್ಯರ್ಥಿ ಪರ ಇಲ್ಲಿ ಭಾಷಣ ಮಾಡಿಸುತ್ತಿದ್ದಾರೆ.
ಆದರೆ ಮದ್ದೂರು ವ್ಯಾಪ್ತಿಯ ಬಿಜೆಪಿಯ ಕಾರ್ಯಕರ್ತರು ತಮ್ಮ ನಾಯಕರ ವಿರುದ್ಧವೇ ಸಿಟ್ಟಾಗಿದ್ದಾರೆ. ಅವರ ಕೋಪ ಶಮನಗೊಳಿಸಿ ಮತ್ತೆ ಬಿಜೆಪಿಯನ್ನು ತಳಮಟ್ಟದಿಂದ ಸಂಘಟಿಸಲೇಬೇಕಾದ ಅನಿವಾರ್ಯತೆ ಎದುರಾಗಿದ್ದು, ಹೀಗಾಗಿ ಈ ಹಿಂದೆ ಬಿಜೆಪಿಯನ್ನು ಸಂಘಟಿಸಿ ಬೆಳೆಸುವಲ್ಲಿ ಕಾರಣರಾಗಿದ್ದ ಮತ್ತು ಇದೀಗ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿರುವ ಮುಖಂಡ ಲಕ್ಷ್ಮಣ್ ಎಂಬುವರನ್ನು ಮತ್ತೆ ಬಿಜೆಪಿಗೆ ಕರೆತರುವ ತೆರೆಮರೆಯ ಯತ್ನಗಳು ನಡೆಯುತ್ತಿವೆ ಎನ್ನಲಾಗಿದೆ.

ಈ ವ್ಯಾಪ್ತಿಯಲ್ಲಿ ನೆಲಕಚ್ಚಿದ ಬಿಜೆಪಿ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ವಂಚಿತರಾದ ಲಕ್ಷ್ಮಣ್ ಅವರು ಕಾಂಗ್ರೆಸ್ ಸೇರಿ ರಾಜಕೀಯ ಅಜ್ಞಾತವಾಸ ಅನುಭವಿಸುತ್ತಿರುವುದರಿಂದ ಅವರ ಮನವೊಲಿಸಿ ಬಿಜೆಪಿಗೆ ಕರೆತಂದರೆ ಮದ್ದೂರು ಕ್ಷೇತ್ರದಲ್ಲಿ ದಶಕಗಳ ಕಾಲದಿಂದಲೂ ಮೂಲೆಗುಂಪಾಗಿರುವ ಬಿಜೆಪಿಗೆ ಒಂದಷ್ಟು ಶಕ್ತಿ ತುಂಬಲು ಸಾಧ್ಯವಾಗಬಹುದು ಎಂಬುದು ಕೆಲವರ ಲೆಕ್ಕಾಚಾರವಾಗಿದೆ.
ಈ ಹಿಂದೆ ಪಕ್ಷದ ತಾಲೂಕು ಘಟಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಎಂ. ಲಕ್ಷ್ಮಣ್‌ಕುಮಾರ್, ಹೋಬಳಿ ಮಟ್ಟದಲ್ಲಿ ಸಂಘಟನೆಯನ್ನು ಚುರುಕುಗೊಳಿಸುವ ಮೂಲಕ ಬೃಹತ್ ಕಾರ್ಯಕರ್ತರ ಪಡೆಯನ್ನು ಕಟ್ಟಿ ಪಕ್ಷ ಬೆಳೆಸಲು ಪ್ರಮುಖ ಪಾತ್ರ ವಹಿಸಿ ಪಕ್ಷದ ಬಲವರ್ಧನೆಗೆ ತಮ್ಮ ತನು ಮನವನ್ನು ಧಾರೆ ಎರೆದಿದ್ದರು.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ವರಿಷ್ಠರು ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ಲಕ್ಷ್ಮಣ್‌ಕುಮಾರ್ ಅವರನ್ನು ಕಡೆಗಣಿಸಿ ನಾಮಕಾವಸ್ಥೆ ಅಭ್ಯರ್ಥಿಯಾಗಿ ಎಂ. ಸತೀಶ್ ಅವರನ್ನು ಕಣಕ್ಕಿಳಿಸಿದ್ದರು. ಇದು ಲಕ್ಷ್ಮಣ್‌ಕುಮಾರ್ ಅವರಿಗೆ ಮನಸಿಗೆ ಬೇಸರ ತರಿಸಿತ್ತು. ಹೀಗಾಗಿ ಮನನೊಂದು ಬಿಜೆಪಿಯಿಂದ ಹೊರನಡೆದಿದ್ದರು. ಪರಿಣಾಮ ಈ ವ್ಯಾಪ್ತಿಯಲ್ಲಿ ಬಿಜೆಪಿ ನೆಲಕಚ್ಚಿತ್ತು.

ದಿನ ಕಳೆದಂತೆ ಗೊತ್ತಾಗಲಿದೆ ಮರ್ಮ
ಇದೀಗ ಎಚ್ಚೆತ್ತ ಬಿಜೆಪಿ ವರಿಷ್ಠರು ಲಕ್ಷ್ಮಣ್‌ಕುಮಾರ್ ಅವರನ್ನು ಮತ್ತೆ ಪಕ್ಷಕ್ಕೆ ಕರೆತಂದು ಸೂಕ್ತ ಸ್ಥಾನಮಾನ ನೀಡುವ ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದ್ದು, ಒಂದು ವೇಳೆ ಇದು ಸಾಧ್ಯವಾದರೆ ಮುಳುಗುತ್ತಿರುವ ವ್ಯಕ್ತಿಗೆ ಹುಲ್ಲುಕಡ್ಡಿ ಆಸರೆ ಎಂಬಂತೆ ಬಿಜೆಪಿಗೆ ಆಸರೆಯಾಗಬಹುದೇನೋ? ಸದ್ಯ ಚುನಾವಣೆಯಲ್ಲಿ ಕಾಂಗ್ರೆಸ್‌ನ ಯಾವ ಪಾತ್ರವೂ ಕಾಣಿಸುತ್ತಿಲ್ಲ.
ಜೆಡಿಎಸ್ ನಲ್ಲಿನ ಒಂದಷ್ಟು ಗೊಂದಲ ಬಿಜೆಪಿಗೆ ವರವಾದರೂ ಅಚ್ಚರಿ ಪಡಬೇಕಾಗಿಲ್ಲ. ಏನೇ ಆದರೂ ಈ ಚುನಾವಣೆ ಪ್ರತಿಷ್ಠೆಯ ಕಣವಾಗಿ ಬಿಂಬಿತವಾಗುತ್ತಿರುವುದರಿಂದ ಒಳಮರ್ಮಗಳೇನು ಎಂಬುದು ದಿನ ಕಳೆದಂತೆ ಗೊತ್ತಾಗಲಿದೆ.












Click it and Unblock the Notifications