ಜೆಡಿಎಸ್ ಪಕ್ಷ ಸಂಘಟನೆಯಲ್ಲಿ ಸಕ್ರಿಯರಾದ ಪ್ರಜ್ವಲ್ ರೇವಣ್ಣ
ಜೆಡಿಎಸ್ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿರುವ ಪ್ರಜ್ವಲ್ ರೇವಣ್ಣ ಮಂಗಳವಾರ ಮಾಚಿ ಸಚಿವ ದಿ. ಎಸ್.ನಂಜಪ್ಪನವರ ಮನೆಗೆ ಭೇಟಿ ನೀಡಿ ರಾಜಕೀಯ ಕುರಿತು ಚರ್ಚೆ ನಡೆಸಿದ್ದಾರೆ. ರಾಜಕೀಯ ವಲಯದಲ್ಲಿ ಈ ಭೇಟಿ ಕುತೂಹಲ ಹುಟ್ಟಿಸಿದೆ.
ಮಂಡ್ಯ, ಮೇ 23: ಹೆಚ್.ಡಿ.ದೇವೇಗೌಡರ ಕುಟುಂಬದ ಕುಡಿ, ಮಾಜಿ ಸಚಿವ ಹೆಚ್.ಡಿ.ರೇವಣ್ಣರವರ ಪುತ್ರ ಪ್ರಜ್ವಲ್ ರೇವಣ್ಣ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದು, ಪಕ್ಷ ಸಂಘಟನೆ ಬಗ್ಗೆ ಗಮನ ಹರಿಸಿದ್ದಾರೆ.
ಎಲ್ಲೆಡೆ ಪ್ರವಾಸ ಮಾಡುತ್ತಾ ಜೆಡಿಎಸ್ ಪಕ್ಷ ಸಂಘಟನೆಯಲ್ಲಿ ಅವರು ತೊಡಗಿಸಿಕೊಳ್ಳುತ್ತಿದ್ದಾರೆ. ಮಂಗಳವಾರ ಮಾಚಿ ಸಚಿವ ದಿ. ಎಸ್.ನಂಜಪ್ಪನವರ ಮನೆಗೆ ಪ್ರಜ್ವಲ್ ರೇವಣ್ಣ ಭೇಟಿ ನೀಡಿ ರಾಜಕೀಯ ಕುರಿತು ಚರ್ಚೆ ನಡೆಸಿದ್ದಾರೆ. ರಾಜಕೀಯ ವಲಯದಲ್ಲಿ ಈ ಭೇಟಿ ಕುತೂಹಲ ಹುಟ್ಟಿಸಿದೆ.

ಈಗಾಗಲೇ ಜೆಡಿಎಸ್‍ನಲ್ಲಿ ದಿನಕ್ಕೊಂದು ಬೆಳವಣಿಗೆ ಕಾಣುತ್ತಿವೆ. ಹೀಗಿರುವಾಗಲೇ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ದಿ.ನಂಜಪ್ಪನವರ ಪುತ್ರ ಕೆ.ಎನ್.ಬಸಂತ್ ಜತೆ ರೇವಣ್ಣ ಚರ್ಚೆ ನಡೆಸಿದ್ದಾರೆ. ಸದ್ಯ ನವನಗರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್ ಜತೆ ಪ್ರಜ್ವಲ್ ನಡೆಸಿರಬಹುದಾದ ಚರ್ಚೆ ರಾಜಕೀಯ ವಲಯದಲ್ಲಿ ಒಂದಷ್ಟು ಕುತೂಹಲ ಹುಟ್ಟಿಸಿದೆ.
ಭೇಟಿ ಸಂದರ್ಭ ಯಾವ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂಬುದನ್ನು ಗೌಪ್ಯವಾಗಿಡಲಾಗಿದೆ. ಈ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಜ್ವಲ್ ರೇವಣ್ಣ , "ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮತ್ತು ದಿ. ಎಸ್.ನಂಜಪ್ಪನವರು ತುಂಬಾ ಆತ್ಮೀಯರಾಗಿದ್ದರು. ನಂಜಪ್ಪನವರ ಪುತ್ರ ಬಸಂತ್ ರಾಜಕೀಯದಿಂದ ದೂರವಿದ್ದು, ಅವರನ್ನು ಜೆಡಿಎಸ್‍ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಆಹ್ವಾನ ನೀಡಿದ್ದೇನೆ," ಎಂದು ಹೇಳಿದ್ದಾರೆ.
ಇನ್ನು ಕಳೆದೊಂದು ವರ್ಷದಿಂದ ತಾವು ಹುಣಸೂರು ಕ್ಷೇತ್ರದಲ್ಲಿ ಪಕ್ಷದ ಸಂಘಟನೆಯಲ್ಲಿ ತೊಡಗಿರುವುದರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಹುಣಸೂರು ಕ್ಷೇತ್ರದಿಂದ ಆಕಾಂಕ್ಷಿಯಾಗಿರುವುದು ನಿಜ. ನಾನು ಮಾತ್ರವಲ್ಲದೆ, ಜಿ.ಟಿ.ದೇವೇಗೌಡರ ಪುತ್ರ ಹರೀಶ್‍ಗೌಡ ಮತ್ತು ಪಕ್ಷಕ್ಕೆ ಸೇರ್ಪಡೆಯಾಗಲಿರುವ ಮಾಜಿ ಸಂಸದ ಎಚ್.ವಿಶ್ವನಾಥ್ ಅವರು ಕೂಡ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಆದರೂ ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬದ್ಧರಾಗಿರುವುದಾಗಿ ಹೇಳಿದರು.
ತಮ್ಮ ಕುಟುಂಬದಿಂದ ಮುಂಬರುವ ವಿಧಾನಸಭಾ ಚುನಾವಣೆಗೆ ಇಬ್ಬರು ಮಾತ್ರ ಸ್ಪರ್ಧಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿರುವ ಬಗ್ಗೆ ಗಮನ ಸೆಳೆದಾಗ ಹುಣಸೂರಿನಲ್ಲಿ ಶಾಸಕ ಹೆಚ್.ಪಿ.ಮಂಜುನಾಥ್ ಅವರನ್ನು ಸೋಲಿಸಲು ಪಕ್ಷದ ಸಂಘಟನೆಯಲ್ಲಿ ತೊಡಗಿದ್ದು, ಪಕ್ಷ ಯಾರಿಗೆ ಅವಕಾಶ ನೀಡಿದರೂ ಅವರ ಗೆಲುವಿಗೆ ದುಡಿಯುತ್ತೇನೆಂದರು.
ಮಾಜಿ ಸಂಸದ ಎಚ್.ವಿಶ್ವನಾಥ್ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವ ಹಿನ್ನಲೆಯಲ್ಲಿ ಶಾಸಕ ಜಿ.ಟಿ.ದೇವೇಗೌಡ ಜೆಡಿಎಸ್ ತೊರೆದು ಕಾಂಗ್ರೆಸ್‍ಗೆ ಹೋಗುತ್ತಾರೆ ಎಂಬ ವದಂತಿ ಇದೆಯಲ್ಲ ಎಂಬ ಪ್ರಶ್ನೆಗೆ ಇದು ಕೇವಲ ಮಾಧ್ಯಮದ ಸೃಷ್ಠಿ ಎಂದಿದ್ದಾರೆ.












Click it and Unblock the Notifications