ನಾಳೆಯಿಂದ ಮಂಡ್ಯದಲ್ಲಿ ಫಲಪುಷ್ಪ ಪ್ರದರ್ಶನ: ಈ ಬಾರಿಯ ವಿಶೇಷತೆಗಳೇನು?
ಮಂಡ್ಯ, ಜನವರಿ 23: ಮಂಡ್ಯ ಜಿಲ್ಲಾ ಪಂಚಾಯತ್, ತೋಟಗಾರಿಕಾ ಸಂಘ, ತೋಟಗಾರಿಕೆ ಇಲಾಖೆ ಇವರ ಸಹಯೋಗದಲ್ಲಿ 'ಪ್ರತಿ ತುತ್ತಿಗೂ ರೈತರನ್ನು ಸ್ಮರಿಸೋಣ' ಶೀರ್ಷಿಕೆಯಡಿ ನಾಳೆಯಿಂದ ಅಂದರೆ ಜನವರಿ 24ರಿಂದ 28 ರವರೆಗೆ ಮಂಡ್ಯ ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ-2025 ನಡೆಯಲಿದೆ.
ತೋಟಗಾರಿಕೆ ಕಚೇರಿ ಆವರಣ ಹಾಗೂ ಕಾವೇರಿ ಉದ್ಯಾನವನದಲ್ಲಿ ಮನಸೂರೆಗೊಳ್ಳುವ ವಿವಿಧ ಹೂ ಅಲಂಕಾರಿಕ ಕುಂಡಗಳ ಜೋಡಣೆ, ವಿವಿಧ ತರಕಾರಿ ಬೆಳೆಗಳು ಹಾಗೂ ಪೌಷ್ಠಿಕ ಕೈತೋಟ ಮಾದರಿ ಹಾಗೂ ತರಕಾರಿ ಕೆತ್ತನೆ ಪ್ರದರ್ಶನ ಮತ್ತು ಜಿಲ್ಲೆಯ ತೋಟಗಾರಿಕೆ ಬೆಳೆಗಳ ವೈವಿಧ್ಯತೆಯ ಮಾದರಿಗಳ ಪ್ರದರ್ಶನ ಹಾಗೂ ರೈತರಿಂದ ಗ್ರಾಹಕರಿಗೆ ನೇರ ಮಾರಾಟ ಮತ್ತು ವಿವಿಧ ಅಭಿವೃದ್ಧಿ ಇಲಾಖೆಗಳ ಕಾರ್ಯಕ್ರಮಗಳ ಸಮಗ್ರ ಮಾಹಿತಿಯನ್ನು ಫಲಪುಷ್ಪ ಪ್ರದರ್ಶನದಲ್ಲಿ ನೀಡಲಾಗುತ್ತದೆ.

ಪ್ರತಿ ದಿನ ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ದಿನ ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ವಯಸ್ಕರಿಗೆ ಟಿಕೆಟ್ ದರ 30, 6-12 ವರ್ಷದ ಮಕ್ಕಳಿಗೆ 20 ಹಾಗೂ ಸಮವಸ್ತ್ರ ಧರಿಸಿ ಬರುವ ಶಾಲಾ ಮಕ್ಕಳ ಗುಂಪುಗಳಿಗೆ ಹಾಗೂ 6 ವರ್ಷದೊಳಗಿನ ಮಕ್ಕಳಿಗೆ ಪ್ರವೇಶ ಉಚಿತವಾಗಿರಲಿದೆ.
ಪ್ರಸ್ತುತ ಸಾಲಿನ ಫಲಪುಷ್ಪ ಪ್ರದರ್ಶನದಲ್ಲಿ 9 ಲಕ್ಷ ವಿವಿಧ ಬಣ್ಣದ ಸೇವಂತಿಗೆ ಮತ್ತು ವಿವಿಧ ಬಣ್ಣದ ಗುಲಾಬಿ ಹೂವುಗಳನ್ನು ಬಳಸಿ ಪ್ರಸಿದ್ಧ ದೇವಾಲಯ ಹಾಗೂ ಪ್ರಸಿದ್ದ ಪ್ರವಾಸಿ ತಾಣಗಳನ್ನು ನಿರ್ಮಿಸಲಾಗಿದೆ. ಜಿಲ್ಲೆಯ ಪ್ರಸಿದ್ಧ ದೇವಾಲಯವಾದ ಮೇಲುಕೋಟೆಯ ಯೋಗನರಸಿಂಹ ಸ್ವಾಮಿ ದೇವಾಲಯ, ಕರ್ನಾಟಕ ಪ್ರಸಿದ್ಧ ಪ್ರವಾಸಿ ತಾಣವಾದ ರಂಗನತಿಟ್ಟು, ಹಳ್ಳಿ ಸೊಗಡಿನ ರೈತನ ಮನೆ, ಏಳು ಬೆಟ್ಟದ ಒಡೆಯ ಮಲೆ ಮಹದೇಶ್ವರ ದೇವಾಲಯಗಳು ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿದೆ.
ಯುವ ಜನತೆಯನ್ನು ಸೆಳೆಯಲು ಹತ್ತು ವಿವಿಧ ಕಡೆಗಳಲ್ಲಿ ಸೆಲ್ಫಿ ಪಾಯಿಂಟ್, ಹೂವಿನ ಆಕೃತಿಯ ಕ್ಷಯ ರೋಗ ಕುರಿತು ಜಾಗೃತಿ, ನರೇಗಾ ಯೋಜನೆಯ ಮಾಹಿತಿಯೊನ್ನೊಳಗೊಂಡ ಸ್ಥಬ್ಥ ಚಿತ್ರ, ವಿವಿಧ ಆಕರ್ಷಕ ಬಗೆಯ ಅಡಿನಿಯಂ ಗಿಡಗಳ ಪ್ರದರ್ಶನ, ಬೋನ್ಸಾಯ್ ಗಿಡಗಳ ಪ್ರದರ್ಶನ, ವಿವಿಧ ತರಕಾರಿ ಹಣ್ಣುಗಳನ್ನು ಬಳಸಿ ಕಲಾಕೃತಿಗಳ ಕೆತ್ತನೆ ಹಾಗೂ ಜೋಡಣೆ ಆಕರ್ಷಿಸಲಿವೆ.

35 ಸಾವಿರಕ್ಕೂ ಹೆಚ್ಚು 40 ಬಗೆಯ ವಿವಿಧ ಜಾತಿಯ ಹೂವುಗಳ ಅಲಂಕಾರಿಕ ಕುಂಡಗಳ ಜೋಡಣೆ, 1.50 ಲಕ್ಷ ವಿವಿಧ ಜಾತಿಯ ಅಲಂಕಾರಿಕ ಗಿಡಗಳಾದ ಪೆಟೊನಿಯಾ, ಸಾಲ್ವಿಯಾ, ಅಂಟಿರೈನ, ಸೆಲೋಶಿಯಾ, ಮಾರಿಗೋಲ್ಡ್, ಜೀನಿಯಾ, ಸೇವಂತಿಗೆ, ಪಾಯ್ನಿಸೆಟಿಯಾಗಳು ಗಮನ ಸೆಳೆಯಲಿವೆ. ಜೊತೆಗೆ ಫಲಪುಷ್ಪ ಪ್ರದರ್ಶನದಲ್ಲಿ ವಿವಿಧ ಜಿಲ್ಲೆಗಳ ಕೈಮಗ್ಗ, ನೇಕಾರರ ಸಹಕಾರ ಸಂಘಗಳು ಭಾಗವಹಿಸಿ, ಕೈ ಮಗ್ಗ ನೇಕಾರರಿಂದ ತಯಾರಿಸಿರುವ ಹತ್ತಿ, ರೇಷ್ಮೆ, ಮೊಳಕಾಲ್ಮೂರು ರೇಷ್ಮೆ ಸೀರೆ, ಚಿಂತಾಮಣಿ ರೇಷ್ಮೆ ಸೀರೆ, ಕಾಟನ್ ಸೀರೆ, ಪಂಚೆ, ಬೆಡ್ಶೀಟ್, ಟವಲ್, ಲುಂಗಿ ಹಾಗೂ ಇತರೆ ಕೈ ಮಗ್ಗ ಉತ್ಪನ್ನಗಳನ್ನು ಶೇ.20 ರಿಯಾಯಿತಿ ದರದಲ್ಲಿ ಮಾರಾಟ ಮಾಡಲಿದ್ದಾರೆ.












Click it and Unblock the Notifications