ಮಂಡ್ಯ ಉಪ ಚುನಾವಣೆ : ಸಿದ್ದರಾಮಯ್ಯ ಮುಂದೆ ಒಗ್ಗಟ್ಟಿನ ಮಂತ್ರ!
Recommended Video

ಮಂಡ್ಯ, ಅಕ್ಟೋಬರ್ 25 : ಕರ್ನಾಟಕದ ಬೇರೆ ಜಿಲ್ಲೆಗಳ ರಾಜಕೀಯ ಬೇರೆ, ಮಂಡ್ಯ ಜಿಲ್ಲೆಯ ರಾಜಕೀಯವೇ ಬೇರೆ. ಮಂಡ್ಯ ಲೋಕಸಭೆ ಉಪ ಚುನಾವಣೆ ನ.3ರಂದು ನಡೆಯಲಿದ್ದು, ಜಿಲ್ಲಾ ಕಾಂಗ್ರೆಸ್‌ನಲ್ಲಿ ಜೆಡಿಎಸ್‌ಗೆ ಬೆಂಬಲ ನೀಡುವ ಕುರಿತು ಹಲವು ಗೊಂದಲ ಉಂಟಾಗಿತ್ತು.
ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್‌ನ ಟ್ರಬಲ್ ಶೂಟರ್ ಸಿದ್ದರಾಮಯ್ಯ ಮಂಡ್ಯ ಭೇಟಿ ಕಾಂಗ್ರೆಸ್ ನಾಯಕರಲ್ಲಿ ಮಿಂಚಿನ ಸಂಚಲನ ಉಂಟು ಮಾಡಿದೆ. ಕಾಂಗ್ರೆಸ್‌ನ ಎಲ್ಲಾ ನಾಯಕರು ಪಕ್ಷಕ್ಕೆ ಬೆಂಬಲ ನೀಡಲಿದ್ದಾರೆ ಎಂದು ತಿಳಿದ ಮೇಲೆ ಜೆಡಿಎಸ್ ಪಕ್ಷದವರು ನಿಟ್ಟುಸಿರು ಬಿಟ್ಟಿದ್ದಾರೆ.
ನವೆಂಬರ್ 3ರಂದು ನಡೆಯಲಿರುವ ಲೋಕಸಭೆ ಉಪ ಚುನಾವಣೆಗೆ ಎಲ್.ಆರ್.ಶಿವರಾಮೇಗೌಡ ಕಾಂಗ್ರೆಸ್-ಜೆಡಿಎಸ್ ಒಮ್ಮತದ ಅಭ್ಯರ್ಥಿ. ಬಿಜೆಪಿಯಿಂದ ಡಾ.ಸಿದ್ದರಾಮಯ್ಯ ಅವರು ಕಣದಲ್ಲಿದ್ದಾರೆ. ನವೆಂಬರ್ 6ರಂದು ಫಲಿತಾಂಶ ಪ್ರಕಟವಾಗಲಿದೆ.
ಬುಧವಾರ ಮಂಡ್ಯಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಅವರು ಕಾಂಗ್ರೆಸ್ ನಾಯಕರ ಜೊತೆ ರಹಸ್ಯ ಸಭೆ ನಡೆಸಿದರು. ಹೈಕಮಾಂಡ್ ತೀರ್ಮಾನವನ್ನು ಜಿಲ್ಲಾ ನಾಯಕರಿಗೆ ತಿಳಿಸಿದರು. ಎಲ್ಲಾ ಕಾಂಗ್ರೆಸ್ ನಾಯಕರು ಜೆಡಿಎಸ್ ಅಭ್ಯರ್ಥಿ ಬೆಂಬಲಿಸಬೇಕು ಎಂದು ಸೂಚನೆ ನೀಡಿದರು.....

ಸಿದ್ದರಾಮಯ್ಯ ಮಂಡ್ಯ ಭೇಟಿ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಮಂಡ್ಯಕ್ಕೆ ಭೇಟಿ ನೀಡಿದ್ದರು. ಖಾಸಗಿ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಳಿಕ ಜೆಡಿಎಸ್ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ಅವರ ಜೊತೆ ಭೋಜನ ಸವಿದರು. ನಂತರ ಕನಕ ಭವನದಲ್ಲಿ ಮುಖಂಡರ ಸಭೆ ನಡೆಸಿದರು. ಕಾರ್ಯಕರ್ತರನ್ನು ಹೊರಗಿಟ್ಟು ಕೆಲವು ನಾಯಕರ ಜೊತೆ ಮಾತ್ರ ರಹಸ್ಯ ಸಭೆ ನಡೆಸಿ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದರು.

ಎಲ್ಲರೂ ಬೆಂಬಲ ನೀಡುತ್ತಾರೆ
ಮಂಡ್ಯದಲ್ಲಿ ಮಾಧ್ಯಮಗಳ ಜೊತೆ ಮಾಡನಾಡಿದ ಸಿದ್ದರಾಮಯ್ಯ ಅವರು, 'ಎಲ್ಲಾ ಕಾಂಗ್ರೆಸ್ ನಾಯಕರು ಮೈತ್ರಿ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ಪರವಾಗಿ ಉಪ ಚುನಾವಣೆಯಲ್ಲಿ ಪ್ರಚಾರ ನಡೆಸಲಿದ್ದಾರೆ' ಎಂದು ಹೇಳಿದರು. ಸಿದ್ದರಾಮಯ್ಯ ಜೊತೆ ಹಲವು ಸಚಿವರು ಮಂಡ್ಯಕ್ಕೆ ಭೇಟಿ ನೀಡಿದ್ದರು. ಸಿದ್ದರಾಮಯ್ಯ ಮಂಡ್ಯ ಭೇಟಿ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.

ಹಲವು ನಾಯಕರು ಭಾಗಿ
ಸಿದ್ದರಾಮಯ್ಯ ಅವರು ಜಿಲ್ಲಾ ಕಾಂಗ್ರೆಸ್ ನಾಯಕರ ಜೊತೆ ರಹಸ್ಯ ಸಭೆ ನಡೆಸಿದರು. ಸಭೆಯಲ್ಲಿ ಚಲುವರಾಯಸ್ವಾಮಿ, ನರೇಂದ್ರ ಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ಚಂದ್ರಶೇಖರ್, ರಾಮಕೃಷ್ಣ ಅವರು ಪಾಲ್ಗೊಂಡಿದ್ದರು.
ಸಭೆಯಲ್ಲಿ ಸಿದ್ದರಾಮಯ್ಯ ಅವರು ಪಕ್ಷದ ಹೈಕಮಾಂಡ್ ತೀರ್ಮಾನವನ್ನು ನಾಯಕರಿಗೆ ತಿಳಿಸಿದ್ದಾರೆ. ಪಕ್ಷದ ವರಿಷ್ಠರ ತೀರ್ಮಾನದಂತೆ ಲೋಕಸಭೆ ಉಪ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಚಲುವರಾಯಸ್ವಾಮಿ ಹೇಳಿದ್ದೇನು?
ಸಿದ್ದರಾಮಯ್ಯ ಜೊತೆಗಿನ ಸಭೆ ಬಳಿಕ ಮಾತನಾಡಿದ ನಾಗಮಂಗಲ ಕ್ಷೇತ್ರದ ಮಾಜಿ ಶಾಸಕ, ಕಾಂಗ್ರೆಸ್ ನಾಯಕ ಚಲುವರಾಯಸ್ವಾಮಿ ಅವರು, 'ಹೈಕಮಾಂಡ್ ನಿರ್ದೇಶನದಂತೆ ಮೈತ್ರಿ ಅಭ್ಯರ್ಥಿ ಪರವಾಗಿ ಚುನಾವಣೆಯಲ್ಲಿ ಪ್ರಚಾರ ಮಾಡುತ್ತೇವೆ' ಎಂದರು.

ಶಿವರಾಮೇಗೌಡ ಹೇಳಿಕೆ
ಸಿದ್ದರಾಮಯ್ಯ ಭೇಟಿ ಬಳಿಕ ಮಾತನಾಡಿದ ಉಪ ಚುನಾವಣೆ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ಅವರು, 'ಕಾಂಗ್ರೆಸ್ ನಾಯಕರು ಎಲ್ಲರೂ ಒಪ್ಪಿದ್ದಾರೆ, ನಮ್ಮ ಪರವಾಗಿ ಪ್ರಚಾರ ಮಾಡುತ್ತಾರೆ' ಎಂದು ಹೇಳಿದರು.












Click it and Unblock the Notifications