ನ್ಯಾಷನಲ್ ಸ್ಕೂಲ್ ಆಫ್ ಗೇಮ್‌ಗೆ ಮಂಡ್ಯ ಕ್ರೀಡಾಪಟುಗಳು ಆಯ್ಕೆ
ಮಂಡ್ಯ, ಜೂನ್ 1: ದೆಹಲಿಯಲ್ಲಿ ಜೂ. 6ರಿಂದ 12ರ ವರೆಗೆ ನಡೆಯಲಿರುವ 66ನೇ ನ್ಯಾಷನಲ್ ಸ್ಕೂಲ್ ಗೇಮ್‌ಗೆ ಕರ್ನಾಟಕ ತಂಡದಿಂದ ಆಯ್ಕೆಯಾಗಿರುವ ಮಂಡ್ಯದ ಆಟಗಾರರನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್. ಉಮೇಶ್ ಅವರು ಸನ್ಮಾನಿಸಿ ಬೀಳ್ಕೊಟ್ಟರು.
ಈ ಸಂದರ್ಭ ಮಾತನಾಡಿದ ಎಸ್. ಉಮೇಶ್ ಅವರು, ಮಂಡ್ಯದಿಂದ ಖೋ ಖೋ ಪಂದ್ಯಾವಳಿಗೆ 6 ಮಂದಿ, ಬಾಸ್ಕೆಟ್ ಬಾಲ್‌ಗೆ ಒಬ್ಬರು ಹಾಗೂ ಕಬಡ್ಡಿಗೆ ಒಬ್ಬರು ಆಯ್ಕೆಯಾಗಿದ್ದು, ಶುಕ್ರವಾರ ಬೆಂಗಳೂರಿನಿಂದ ತೆರಳಿ 5ರಂದು ದೆಹಲಿ ತಲುಪಲಿದ್ದಾರೆ ಎಂದು ಹೇಳಿದರು.

ಮಂಡ್ಯದಿಂದಲೇ ಒಟ್ಟು 8 ಮಂದಿ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿರುವುದು ಬಹಳ ಖುಷಿಯ ವಿಷಯ. ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿರುವ ಇವರು ಜಯ ಗಳಿಸುವ ಮೂಲಕ ಕೀರ್ತಿ ತರಲಿ ಎಂದು ಹಾರೈಸಿದರು.
ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗದೆ ಪಠ್ಯೇತರ ಚಟುವಟಿಕೆಗಳ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಹೊರತರಬೇಕು. ಆಗಲೇ ತಮ್ಮ ಜೀವನ ಸಾರ್ಥಕವಾಗುತ್ತದೆ ಎಂದರು.
ಖೋ ಖೋ ಪಂದ್ಯಾವಳಿಗೆ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿ ವಿಶ್ವೇಶ್ವರಯ್ ಪ.ಪೂ. ಕಾಲೇಜಿನ ಕೆ. ಅಕ್ಷತಾ, ಕೆ.ಆರ್.ಚಂದನ, ಕೆ.ಪಿ. ವರಲಕ್ಷ್ಮಿ, ಜಿ.ಎಸ್. ಮಾನ್ಯಗೌಡ, ಕೆ.ಎಸ್. ಹಿಯಾನಿ, ಎಸ್.ಪ್ರಿಯ, ಬಾಸ್ಕೆಟ್ ಬಾಲ್ ಪಂದ್ಯಾವಳಿಗೆ ಮದ್ದೂರು ತಾಲ್ಲೂಕಿನ ಭಾರತೀನಗರ ಸ.ಪ.ಪೂ. ಕಾಲೇಜಿನ ಎಚ್.ಎಸ್. ಸಹನಾ, ಕಬಡ್ಡಿಗೆ ಮದ್ದೂರು ತಾಲೂಕಿನ ಕೊಪ್ಪದ ಸರ್ವೋದಯ ಪ.ಪೂ. ಕಾಲೇಜಿನ ಕೆ.ನಾಗೇಶ್ ಆಯ್ಕೆಯಾಗಿದ್ದು, ಇವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಕೆ.ರಾಮಸ್ವಾಮಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಕಚೇರಿ ಅಧೀಕ್ಷಕ ರಾಜೇಗೌಡ, ದೈಹಿಕ ಶಿಕ್ಷಣ ಉಪನ್ಯಾಸಕ ಎಂ.ಎಸ್.ಉಮೇಶ್, ಜಿ.ಕೆ.ನವೀನ್ ಹಾಜರಿದ್ದರು.












Click it and Unblock the Notifications