ಮಂಡ್ಯ: ನಾಮಪತ್ರ ಹಿಂಪಡೆಯದ ಪಕ್ಷೇತರ ಅಭ್ಯರ್ಥಿ ಸುಮಲತಾ
ಮಂಡ್ಯ, ಮಾರ್ಚ್ 30: ಮಂಡ್ಯ ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ ಸುಮಲತಾ ಹೆಸರಿನ ನಾಲ್ವರು ಅಭ್ಯರ್ಥಿಗಳು ಅಂತಿಮವಾಗಿ ಸ್ಪರ್ಧೆಗೆ ಉಳಿದುಕೊಳ್ಳುವುದು ನಿಶ್ಚಿತವಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಪ್ರಬಲ ಪೈಪೋಟಿ ನೀಡುತ್ತಿರುವ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರಲ್ಲದೆ ಸುಮಲತಾ ಹೆಸರಿನ ಇನ್ನೂ ಮೂವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು.
ಇದು ಕುತೂಹಲ ಮತ್ತು ವಿವಾದಕ್ಕೆ ಕಾರಣವಾಗಿತ್ತು. ಸುಮಲತಾ ಅಂಬರೀಷ್ ಅವರಿಗೆ ಬರಬೇಕಾದ ಮತಗಳು ಹಂಚಿಹೋಗಲಿ ಎಂಬ ಕಾರಣಕ್ಕೆ ಈ ರೀತಿ ಸುಮಲತಾ ಹೆಸರಿನವರಿಂದ ನಾಮಪತ್ರ ಸಲ್ಲಿಸಲಾಗಿದೆ ಎಂದು ಆರೋಪಿಸಲಾಗಿತ್ತು.

ಇದರೆ ಬೆನ್ನಲ್ಲೇ, ಅಭ್ಯರ್ಥಿಗಳಲ್ಲಿ ಒಬ್ಬರಾದ ಗೊರವಿ ಗ್ರಾಮದ ಸುಮಲತಾ ಮಂಜೇಗೌಡ ಎಂಬುವವರು ನಾಮಪತ್ರ ಹಿಂದಕ್ಕೆ ಪಡೆದುಕೊಳ್ಳುವುದಾಗಿ ತಿಳಿಸಿದ್ದರು.
'ಯಾರದ್ದೋ ಮಾತು ಕೇಳಿ ನನ್ನ ಪತ್ನಿ ನಾಮಪತ್ರ ಸಲ್ಲಿಸಿದ್ದಾಳೆ. ನಾನು ಅಪ್ಪಟ ದರ್ಶನ್ ಅಭಿಮಾನಿ. ನನ್ನ ಪತ್ನಿಯೊಂದಿಗೆ ತೆರಳಿ ನಾಮಪತ್ರ ಹಿಂದಕ್ಕೆ ಪಡೆಯುತ್ತೇನೆ. ಸುಮಲತಾ ಅವರನ್ನು ಬೆಂಬಲಿಸುತ್ತೇನೆ' ಎಂದು ಮಂಜೇಗೌಡ ಹೇಳಿದ್ದರು.
ಆದರೆ, ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನವಾಗಿದ್ದ ಶುಕ್ರವಾರ, ಅವರು ನಾಮಪತ್ರ ಹಿಂದಕ್ಕೆ ಪಡೆದುಕೊಂಡಿಲ್ಲ. ಇದರಿಂದ ಕಣದಲ್ಲಿ ನಾಲ್ವರು ಸುಮಲತಾ ಉಳಿದುಕೊಳ್ಳುವಂತಾಗಿದೆ.
ಅಭ್ಯರ್ಥಿಗಳ ಪಟ್ಟಿಯಲ್ಲಿ ಸುಮಲತಾ ಅಂಬರೀಷ್ ಅವರ ಹೆಸರು ಎ. ಸುಮಲತಾ ಎಂದಿದೆ. ಅವರಿಗೆ ಕಹಳೆ ಓದುವ ವ್ಯಕ್ತಿಯ ಚಿತ್ರದ ಚಿಹ್ನೆ ನೀಡಲಾಗಿದೆ. ಎಂ. ಸುಮಲತಾ ಹೆಸರಿನ ಸುಮಲತಾ ಮಂಜೇಗೌಡ ಅವರಿಗೆ ಬೇಬಿ ವಾಕರ್ ಚಿಹ್ನೆ ನೀಡಲಾಗಿದೆ. ಇನ್ನಿಬ್ಬರು ಸುಮಲತಾ ತಳ್ಳುವ ಗಾಡಿ ಮತ್ತು ಬ್ಯಾಟ್ ಚಿಹ್ನೆಯನ್ನು ಪಡೆದುಕೊಂಡಿದ್ದಾರೆ.












Click it and Unblock the Notifications