'ಅಜ್ಜಿ' ಎಂದಿದಕ್ಕೆ ವಿದ್ಯಾರ್ಥಿನಿಯ ಕೆನ್ನೆಗೆ ಬಾರಿಸಿದ KSRTC ಬಸ್ ನಿರ್ವಾಹಕಿ
ಮಂಡ್ಯ, ಜನವರಿ 12: ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕಿ ವಿದ್ಯಾರ್ಥಿನಿಗೆ ಕ್ಷುಲ್ಲಕ ಕಾರಣಕ್ಕೆ ಕಪಾಳಮೋಕ್ಷ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಟಿಕೆಟ್ ಪಡೆಯುವಾಗ ಅಜ್ಜಿ ಎಂದಿದಕ್ಕೆ ಬಸ್ ನಿರ್ವಾಹಕಿ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ ಕೇಲಿ ಬಂದಿದೆ.
ಕಾವ್ಯಶ್ರೀ ಎನ್ನುವ ವಿದ್ಯಾರ್ಥಿನಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕೆ.ಎಂ.ದೊಡ್ಡಿಯಿಂದ ಮಂಡ್ಯಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕಾವ್ಯಶ್ರೀ ಟಿಕೆಟ್ ಪಡೆಯುವಾಗ ನಿರ್ವಾಹಕಿ ಸೌಭಾಗ್ಯರನ್ನು ಅಜ್ಜಿ ಟಿಕೆಟ್ ಕೊಡಿ ಎಂದು ಕೇಳಿದ್ದಾಳೆ ಎನ್ನಲಾಗಿದೆ. ಇದರಿಮದ ಕೋಪಗೊಂಡ ನಿರ್ವಾಹಕಿ ಸೌಭಾಗ್ಯ ನಾನು ನಿನಗೆ ಅಜ್ಜಿಯಂತೆ ಕಾಣುತ್ತೀದ್ದೀನಾ ಎಂದು ಬೈಯಲು ಆರಂಭಿಸಿದ್ದಾರೆ.

ವಿದ್ಯಾರ್ಥಿನಿ ಅಜ್ಜಿ ಎಂದಿದ್ದೇ ತಪ್ಪು ಎಂದು ಕೋಪಗೊಂಡ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕಿ ಸೌಭಾಗ್ಯ ಬಸ್‌ನಲ್ಲಿ ಇತರ ಪ್ರಯಾಣಿಕರ ನಡುವೆಯೇ ವಿದ್ಯಾರ್ಥಿನಿಯ ಕೆನ್ನೆಗೆ ಬಾರಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ನಿರ್ವಾಹಕಿ ಸೌಭಾಗ್ಯ ಅತಿರೇಖದ ವರ್ತನೆ ಕಂಡು ಸಹ ಪ್ರಯಾಣಿಕರು ಹಲ್ಲೆಗೊಳಗಾದ ವಿದ್ಯಾರ್ಥಿನಿಗೆ ನೆರವಿಗೆ ಬಂದಿದ್ದಾರೆ.
ಕೂಡಲೇ ವಿದ್ಯಾರ್ಥಿನಿ ಸ್ಥಳದಲ್ಲೇ ಬಸ್ ನಿಲ್ಲಿಸುವಂತೆ ಹೇಳಿ ಸಮೀಪಕದ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಗೆ ತೆರಳಿ ನಿರ್ವಾಹಕಿ ಸೌಭಾಗ್ಯ ವಿರುದ್ಧ ದೂರು ನೀಡಿದ್ದಾಳೆ. ಘಟನೆ ಸಂಬಂಧ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ನಿರ್ವಾಹಕಿ ಸೌಭಾಗ್ಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಎನ್ನಲಾಗಿದೆ.
ಖಾಸಗಿ ಶಾಲೆ ಬಸ್ ಅಪಘಾತ: ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ
ಹತ್ತಾರು ಮಕ್ಕಳಿದ್ದ ಖಾಸಗಿ ಶಾಲೆಯ ಬಸ್ ಹಳ್ಳಕ್ಕೆ ಕುಸಿದ ಘಟನೆ ಮಂಡ್ಯ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ನಡೆದಿದೆ. ಶಾಲೆಗೆಂದು ಮಕ್ಕಳನ್ನು ಹತ್ತಿಸಿಕೊಂಡು ಗ್ರಾಮದ ಹೊರವಲಯದಲ್ಲಿ ಬರುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.
ರಾಗಿಮುದ್ದನಹಳ್ಳಿ ಗ್ರಾಮದಿಂದ ಸ್ವಲ್ಪ ದೂರದಲ್ಲಿ ದೊಡ್ಡ ಹಳ್ಳವಿದ್ದು, ಈ ರಸ್ತೆಯ ಮಧ್ಯೆ ಪೈಪ್‌ಗಳನ್ನು ಹಾಕಿ ಮಣ್ಣಿನಿಂದ ಮುಚ್ಚಲಾಗಿದೆ. ಈ ಹಿನ್ನೆಲೆಯಲ್ಲಿ ಬಸ್ ಸಂಚರಿಸಿದಾಗ ಪೈಪ್ ಹಾಗೂ ಚಪ್ಪಡಿ ಕಲ್ಲು ಸಮೇತ ಹಿಂಬದಿ ಚಕ್ರ ಸಿಲುಕಿ ವಾಲಿಕೊಂಡಿದೆ. ಚಾಲಕ ಕೃಷ್ಣ ಸಮಯ ಪ್ರಜ್ಞೆ ಮೆರೆದು ತಕ್ಷಣ ಬಸ್ ನಿಲ್ಲಿಸಿ ಮಕ್ಕಳನ್ನು ಹೊರಗಡೆ ಇಳಿಸಿದ್ದಾರೆ. ಅದೃಷ್ಟವಶಾತ್ ಬಸ್‌ನಲ್ಲಿದ್ದ ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ.
ಈ ರಸ್ತೆಯು ಹಿಂದಿನಿಂದಲೂ ಸಮಸ್ಯೆ ಇದೆ. ಇಲ್ಲಿ ಸಾಲು ಸಾಲು ಅಪಘಾತಗಳು ಸಂಭವಿಸುತ್ತಲೇ ಇದೆ.ಮಳೆಗಾಲದಲ್ಲಿಯಂತೂ ವಾಹನ ಚಾಲಕರು ಜೀವ ಕೈಯಲ್ಲಿಡಿದು ಹೋಗುವ ದುಸ್ಥಿತಿ ಇದೆ. ಹೀಗಾಗಿ ಈ ಪ್ರದೇಶದಲ್ಲಿ ಸೇತುವೆ ನಿರ್ಮಾಣಕ್ಕೆ ಗ್ರಾಮಸ್ಥರು ಒತ್ತಾಯ ಮಾಡುತ್ತಲೇ ಬಂದಿದ್ದಾರೆ. ಆದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕ್ಯಾರೇ ಎನ್ನುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications