KRS Dam: ಕೆಆರ್‌ಎಸ್ ಜಲಾಶಯ ವ್ಯಾಪ್ತಿಯಲ್ಲಿ ಟ್ರಯಲ್ ಬ್ಲಾಸ್ಟ್ ಮುಂದೂಡಿಕೆ: ಸಚಿವ
ಕೆಆರ್‌ಎಸ್ ಜಲಾಶಯ ವ್ಯಾಪ್ತಿಯಲ್ಲಿ ಟ್ರಯಲ್ ಬ್ಲಾಸ್ಟ್ ಮಾಡುವ ಕ್ರಮವನ್ನು ಮುಂದೂಡಲಾಗಿದೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಮಂಡ್ಯದಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕೈದು ದಿನಗಳ ಹಿಂದೆ ಟ್ರಯಲ್ ಬ್ಲಾಸ್ಟ್ ಬಗ್ಗೆ ಚರ್ಚೆ ನಡೆಸಲು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ರೈತ ಮುಖಂಡರೊಂದಿಗೆ ಚರ್ಚೆ ನಡೆಸಲಾಗಿತ್ತು. ಅಲ್ಲದೆ, ಮುಖ್ಯಮಂತ್ರಿಗಳ ಜೊತೆಗೆ ರೈತ ಮುಖಂಡರ ಸಭೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ ಎಂದರು.

ಮೊನ್ನೆ ನಡೆದ ಸಿಎಂ ನೇತೃತ್ವದ ಸಭೆಯಲ್ಲಿ ಟ್ರಯಲ್ ಬ್ಲಾಸ್ಟ್ ಬಗ್ಗೆ ಚರ್ಚೆ ನಡೆದಿದ್ದು, ಜು.15ರಂದು ನ್ಯಾಯಾಲಯದಲ್ಲಿ ವಿಚಾರಣೆ ಇರುವುದರಿಂದ ನಮ್ಮ ಅಡ್ವೋಕೇಟ್ ಜನರಲ್ ಮುಖಾಂತರ ಸಮರ್ಥ ಕಾರಣ ನೀಡಿ ಸಮಯಾವಕಾಶ ಕೇಳಲಿದ್ದೇವೆ. ಆ ಸಮಯದಲ್ಲಿ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಮಾಡಿ, ತಾಂತ್ರಿಕ ಹಾಗೂ ಅಣೆಕಟ್ಟೆ ಸುರಕ್ಷತಾ ಸಮಿತಿಯ ಜೊತೆ ಸಭೆ ನಡೆಸಿ ಟ್ರಯಲ್ ಬ್ಲಾಸ್ಟ್ ಬಗ್ಗೆ ತೀರ್ಮಾನಿಸಲಾಗುವುದು. ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಅಕ್ರಮ ಗಣಿಗಾರಿಕೆಯ ಬಗ್ಗೆ ಲೋಕಾಯುಕ್ತ ವರದಿ ನೀಡಿದ್ದು, ಅದರಲ್ಲಿ 13 ಮಂದಿ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ತಿಳಿಸಲಾಗಿದೆ. ಅದರ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿ ತನಿಖೆಗೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಪುಟ್ಟರಾಜು ಹೇಳಿಕೆಗೆ ವ್ಯಂಗ್ಯ
ಲೋಕಸಭಾ ಚುನಾವಣೆಯಲ್ಲಿ ಸೋತಿದ್ದರಿಂದ ನಮಗೆ ತುಂಬಾ ಭಯವಾಗುತ್ತಿದೆ ಎಂದು ಪುಟ್ಟರಾಜು ಹೇಳಿಕೆಗೆ ವ್ಯಂಗ್ಯವಾಡಿದ ಅವರು, ಪಾಪ, ಪುಟ್ಟರಾಜು ಕೈಗೆ ನಾವು ಸಿಕ್ಕಿದರೆ ನಮ್ಮನ್ನು ಬಿಡುತ್ತಾರಾ?, ನಾವು ರೈತರ ಮಕ್ಕಳು, ಅವರು ದೊಡ್ಡ ಬಿಸಿನೆಸ್‌ಮನ್ ಮಕ್ಕಳು, ಅಲ್ಲದೆ, ಕೇಂದ್ರದ ಮಂತ್ರಿ ಪಕ್ಕದಲ್ಲಿಯೇ ಇರುತ್ತಾರೆ. ಅದಕ್ಕೆ ಭಯವಾಗುತ್ತಿದೆ ಎಂದು ವ್ಯಂಗ್ಯವಾಡಿದರು.
ನಿಖಿಲ್‌ಕುಮಾರಸ್ವಾಮಿ ಬಂಧನಕ್ಕೆ ಸಚಿವರೊಬ್ಬರಿಂದ ಷಡ್ಯಂತ್ರ ನಡೆದಿತ್ತು ಎಂಬ ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದ ಅವರು, ಅದರ ಬಗ್ಗೆ ಗೊತ್ತಿಲ್ಲದೆ ಮಾತನಾಡಲು ಹೋಗಲ್ಲ. ನಮಗೂ ಅದಕ್ಕೂ ಸಂಬಂದ ಇಲ್ಲ. ಪ್ಲಾನ್ ಮಾಡುವಂತದು ಯಾವುದು ಇಲ್ಲ. ನಿನ್ನೆ ವಿಜಯೇಂದ್ರ ಅವರನ್ನು ಬಂಧಿಸಿ ಬಿಡುಗಡೆ ಮಾಡಲಿಲ್ಲವೇ ಎಂದರು.
ದೇವೇಗೌಡರ ಕುಟುಂಬವನ್ನು ಮುಗಿಸಲು ಹೊರಟವರು ಯಾರು, ರೇವಣ್ಣ ಕುಟುಂಬದ ವಿಚಾರವನ್ನು ಯಾರು ಹೆಚ್ಚು ಮಾಧ್ಯಮದ ಮುಂದೆ ಚರ್ಚೆ ಮಾಡಿದ್ದು ಅವರ ಕುಟುಂಬದವರೇ, ಅವರು ಜೈಲಿಗೆ ಹೋದಮೇಲೆ ಮಾತನಾಡುತ್ತಿಲ್ಲ. ಇದು ಯಾರ ಪ್ಲಾನ್ ಇದೆ ಗೊತ್ತಿಲ್ಲ. ಅವರ ಕುಟುಂಬದ ಮೇಲೆ ನಮಗೂ ಅನುಕಂಪ ಇದೆ. ಕಾನೂನು ಏನು ಮಾಡಕ್ಕಾಗಲ್ಲ ಎಂದರು.
ಮುಡಾ ಹಗರಣದ ಬಗ್ಗೆ ಹೇಳಿದ್ದೇನು?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಅವರು ಅವರ ಅಣ್ಣನಿಂದ ಜಮೀನು ಪಡೆದುಕೊಂಡಿದ್ದರು. ಆದರೆ ಮುಡಾದವರು ಅನಧಿಕೃತವಾಗಿ ಅನುಮತಿ ಇಲ್ಲದೆ ನೋಟಿಸ್ ನೀಡದೆ ಜಮೀನನ್ನು ವಶಪಡಿಸಿಕೊಂಡಿದ್ದಾರೆ. ಕಾನೂನು ಪ್ರಕಾರ ಪರ್ಯಾಯವಾಗಿ ಇವರು ಜಮೀನು ಕೊಡುವಂತೆ ಅರ್ಜಿ ಕೊಟ್ಟಿದ್ದಾರೆ. ಆಗ ಮುಡಾ ರೆಗ್ಯುಲೇಷನ್ ತಪ್ಪಾಗಿದ್ದರೆ ಅಥವಾ ಇವರಿಗೆ ಹೆಚ್ಚು ಜಮೀನು ಕೊಟ್ಟಿದ್ದರೆ ಮುಡಾದವರದ್ದೇ ತಪ್ಪು. ಆಗ ಇದ್ದದ್ದು, ಬಿಜೆಪಿ ಆಡಳಿತ, ಮುಡಾ ಅಧ್ಯಕ್ಷ ಕೂಡ ಬಿಜೆಪಿ ಪಕ್ಷದವರೇ ಇದ್ದರು. ವಿಜಯೇಂದ್ರ, ಅಶೋಕ ಇಬ್ಬರು ಬಸವರಾಜ ಬೊಮ್ಮಾಯಿ ವಿರುದ್ಧ ಪ್ರತಿಭಟನೆ ಮಾಡಬೇಕಾಗಿತ್ತು. ಬಿಜೆಪಿಯವರು ತಮ್ಮ ತಪ್ಪು ಮುಚ್ಚಿ ಹಾಕುಲು ಬಿಜೆಪಿ ಸಿದ್ದರಾಮಯ್ಯ ಅವರ ಹೆಸರು ತರುತ್ತಿದ್ದಾರೆ ಎಂದರು.
ಸಿದ್ದರಾಮಯ್ಯ ಅವರೇ ಮುಡಾ ಗಲೀಜನ್ನು ಸಂಪೂರ್ಣವಾಗಿ ತೊಳೆಯುತ್ತೇನೆ ಎಂದು ಹೇಳಿದ್ದಾರೆ. ಇಡೀ ಬಿಜೆಪಿಯವರಿಂದಲೇ ತಪ್ಪಾಗಿದೆ. ಅಂದು ಯಾರ ಸಹಕಾರ ಇತ್ತೋ ಗೊತ್ತಿಲ್ಲ ಎಂದು ದೂರಿದರು.












Click it and Unblock the Notifications