KRS Dam Water Level: ಕೃಷ್ಣರಾಜ ಸಾಗರ ಜಲಾಶಯದ ಪ್ರಸ್ತುತ ನೀರಿನ ಮಟ್ಟ, ಜುಲೈ 25ರ ವಿವರ
ಮಂಡ್ಯ, ಜುಲೈ, 25: ಕಾವೇರಿ ಜಲಾನಯನ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ 100 ಅಡಿಗೆ ತಲುಪಿದೆ. ಹೀಗೆ ಜಲಾಶಯದ ನೀರಿನ ಪ್ರಮಾಣ ಕ್ಷಣ ಕ್ಷಣಕ್ಕೂ ಹೆಚ್ಚಳವಾಗುತ್ತಿದೆ.
ಮಂಗಳವಾರ ಬೆಳಗ್ಗೆ 48,025 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯದ ಗರಿಮಟ್ಟ 124.80 ಇದ್ದರೆ, ಸೋಮವಾರ ಸಂಜೆ 97.50 ಅಡಿಗೆ ನೀರಿನ ಮಟ್ಟ ಹೆಚ್ಚಳವಾಗಿತ್ತು. ಮಂಗಳವಾರದ ಬೆಳಗ್ಗೆ ಜಲಾಶಯದಲ್ಲಿ ನೀರು 100 ಅಡಿಗೆ ತಲುಪಿದ್ದು, ಈ ಮೂಲಕ ಒಂದೇ ದಿನದಲ್ಲಿ 4 ಅಡಿಗೂ ಹಚ್ಚಿನ ನೀರು ಸಂಗ್ರಹವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಕೆ.ಆರ್.ಎಸ್. ಜಲಾಶಯದಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೂ ಹೆಚ್ಚಳವಾಗುತ್ತಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿದಂತಾಗಿದೆ. ಹಾರಂಗಿ ಜಲಾಶಯವೂ ಭರ್ತಿಯಾಗಿದ್ದು, ಹೆಚ್ಚಿನ ಪ್ರಮಾಣದ ನೀರು ಹೊರ ಬಿಡಲಾಗುತ್ತಿದೆ. ಹಾಗಾಗಿ ಕೃಷ್ಣರಾಜಸಾಗರ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಹೆಚ್ಚಳವಾಗಿದೆ. ಇನ್ನು ಹೇಮಾವತಿ ಜಲಾಶಯಕ್ಕೂ ಒಳ ಹರಿವು ಹೆಚ್ಚಾಗಿದೆ. ಅಲ್ಲಿಂದಲೋ ನೀರನ್ನು ಹೊರಕ್ಕೆ ಬಿಟ್ಟರೆ ಕೆಆರ್‌ಎಸ್ ಜಲಾಶಯಕ್ಕೆ ಮತ್ತಷ್ಟು ನೀರು ಹರಿದು ಬರಲಿದೆ.
ಮುಂಗಾರು ವೈಫಲ್ಯದಿಂದ ನೀರಿಲ್ಲದೆ ಸೊರಗಿದ್ದ ಜಲಾಶಯಕ್ಕೆ ಕಾವೇರಿ ತಾಯಿ ಹರಿದುಬರುತ್ತಿದ್ದಾಳೆ. ಈ ಮೂಲಕ ಕೃಷ್ಣರಾಜಸಾಗರ ಜಲಾಶಯ ನಿಧಾನವಾಗಿ ಮೈದುಂಬಿ ಕೊಳ್ಳುತ್ತಿರುವುದು ರೈತರ ಮೊಗದಲ್ಲಿ ಹರ್ಷ ತರಿಸಿದಂತಾಗಿದೆ. ಸಾಮಾನ್ಯವಾಗಿ ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ಭಿತ್ತನೆ ಕಾರ್ಯ ಪ್ರಾರಂಭವಾಗಬೇಕಿತ್ತು. ಆದರೆ ಮುಂಗಾರು ತಡವಾದ ಕಾರಣ ಇನ್ನೂ ಭಿತ್ತನೆ ಕಾರ್ಯ ಆರಂಭವಾಗಿಲ್ಲ. ಇದೀಗ ಮುಂಗಾರು ಚುರುಕಾಗಿರುವ ಕಾರಣ ಕೃಷಿ ಚಟುವಟಿಕೆಗಳು ಚುರುಕು ಪಡೆದುಕೊಳ್ಳಲಿವೆ.
ಕಾವೇರಿ ಜಲಾನಯನ ಪ್ರದೇಶ ಹಾಗೂ ಹಳೇ ಮೈಸೂರು ಪ್ರಾಂತ್ಯದಲ್ಲಿ ಮುಂಗಾರು ಕೈಕೊಟ್ಟಿದ್ದ ಕಾರಣ ಕೃಷಿ ಹಾಗೂ ನೀರಾವರಿ ಇಲಾಖೆಯಿಂದ ಈ ಬಾರಿ ಕೃಷ್ಣ ರಾಜಸಾಗರ ಜಲಾಶಯದಿಂದ ಕೃಷಿಗೆ ನೀರು ಕೊಡಲಾಗುವುದಿಲ್ಲ. ಬೋರ್‌ವೆಲ್ ಅಥವಾ ಸ್ವಂತ ನೀರಿನ ಸೌಲಭ್ಯ ಇರುವವರು ಮಾತ್ರ ಕೃಷಿ ಚಟುವಟಿಕೆ ಮಾಡಬಹುದು. ಜಲಾಶಯದ ನೀರನ್ನೇ ಅವಲಂಭಿಸಿರುವ ರೈತರು ಮುಂಗಾರು ಹಂಗಾಮಿನ ಭತ್ತ, ಕಬ್ಬು ಬೆಳೆಯದಂತೆ ಪ್ರಕಟಣೆ ಹೊರಡಿಸಲಾಗಿತ್ತು. ಕೃಷಿ ಸಚಿವರು ಸಹ ಯಾರೂ ಭತ್ತ, ಕಬ್ಬು ಬೆಳೆಯಬಾರದು ಎಂದು ಸೂಚನೆ ನೀಡಿದ್ದರು.
ಆದರೆ ಇದೀಗ ಕಾವೇರಿ ಕಣಿವೆಯಲ್ಲಿ ಮುಂಗಾರು ಚುರುಕು ಪಡೆದುಕೊಂಡಿದೆ. ಜೊತೆಗೆ ಕೇರಳದ ವೈನಾಡು ಪ್ರಾಂತ್ಯದಲ್ಲೂ ಎಡೆಬಿಡದೆ ಮಳೆ ಬರುತ್ತಿರುವುದರಿಂದ ತಮಿಳುನಾಡಿಗೂ ನೀರು ಹರಿಸಲು ಸಾಧ್ಯವಾಗುತ್ತಿದೆ. ಹೀಗಾಗಿ ಕೃಷಿ ಮತ್ತು ನೀರಾವರಿ ಇಲಾಖೆ ಮತ್ತೆ ಪ್ರಕಟಣೆ ಹೊರಡಿಸುವ ಸಾಧ್ಯತೆಗಳಿವೆ.
ಒಟ್ಟಾರೆ ಕೊಡಗಿನಾದ್ಯಂತ ವರುಣನ ಅಬ್ಬರ ಹೆಚ್ಚಿದ್ದು, ಕಾವೇರಿ ಕಣಿವೆ ವ್ಯಾಪ್ತಿಯ ಎಲ್ಲಾ ಜಲಾಶಯಗಳೂ ನಿಧಾನವಾಗಿ ಮೈದುಂಬುತ್ತಿರುವುದು ರೈತರು ಮತ್ತು ಸಾರ್ವಜನಿಕರಲ್ಲಿ ಸಂಸತ ಮೂಡಿಸಿದೆ.












Click it and Unblock the Notifications