KRS Dam: ಜಲಮಟ್ಟ ಕ್ಷೀಣದಿಂದ ಕೆಆರ್‌ಎಸ್ ಒಡಲ ನೋಟ ಮತ್ತೆ ಗೋಚರಿಸುತ್ತಾ?
ಮಂಡ್ಯ, ಏಪ್ರಿಲ್ 02: ರಣ ಬಿಸಿಲು ಜಲಮೂಲಗಳನ್ನು ಆವಿಯಾಗುವಂತೆ ಮಾಡುತ್ತಿದ್ದು, ದಿನದಿಂದ ದಿನಕ್ಕೆ ಕೆರೆಗಳು ಬತ್ತಿ ಹೋಗುತ್ತಿವೆ. ಇನ್ನೊಂದೆಡೆ ಕಾವೇರಿ, ಲಕ್ಷ್ಮಣತೀರ್ಥ ಮತ್ತು ಹೇಮಾವತಿ ನದಿಗಳಲ್ಲಿ ನೀರು ಸಂಪೂರ್ಣ ಕಡಿಮೆಯಾದ ಕಾರಣ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್ ಎಸ್ ಜಲಾಶಯದಲ್ಲಿ ನೀರಿನ ಮಟ್ಟ ಇಳಿಕೆಯಾಗುತ್ತಲೇ ಇದ್ದು, ಮುಂದಿನ ದಿನಗಳಲ್ಲಿ ಸಂಪೂರ್ಣ ಪಾತಾಳ ಕಾಣುವುದರೊಂದಿಗೆ ಈ ನೀರನ್ನು ಆಶ್ರಯಿಸಿದವರು ಬಾಯಿ ಬಾಯಿ ಬಡಿದುಕೊಳ್ಳಬೇಕಾದ ಪರಿಸ್ಥಿತಿ ಎದುರಾದರೂ ಅಚ್ಚರಿಯಿಲ್ಲ.
ಈಗಾಗಲೇ ಬೆಂಗಳೂರು ಸೇರಿದಂತೆ ಕೆಆರ್ ಎಸ್ ಜಲಾಶಯದ ನೀರನ್ನು ಆಶ್ರಯಿಸಿದವರಿಗೆ ಸಂಕಷ್ಟ ಶುರುವಾಗಿದೆ. ನೀರಿಗಾಗಿ ದಿನನಿತ್ಯ ಹೋರಾಟ ಮಾಡಬೇಕಾದ ಅನಿವಾರ್ಯತೆ ಬಂದೊದಗಿದೆ. ಇಂತಹದೊಂದು ದುಸ್ಥಿತಿ ಬಂದೊದಗುತ್ತದೆ ಎನ್ನುವ ಸುಳಿವನ್ನು ಕಳೆದ ಮುಂಗಾರು ಸಮಯದಲ್ಲಿಯೇ ಪ್ರಕೃತಿ ನೀಡಿತ್ತು. ಆದರೆ ಸರ್ಕಾರ ನಿರ್ಲಕ್ಷ್ಯ ತಾಳಿದ್ದರಿಂದ ಪರಿಸ್ಥಿತಿ ಬಿಗಡಾಯಿಸಿದೆ. ಈಗ ಚುನಾವಣೆಯ ಒತ್ತಡದಲ್ಲಿರುವ ಆಡಳಿತರೂಢರಿಗೆ ನೀರಿನ ಸಮಸ್ಯೆ ಕಾಣದಂತಾಗಿದೆ. ಹೀಗಾಗಿ ಜನಸಾಮಾನ್ಯರು ಸಂಕಷ್ಟ ಅನುಭವಿಸುವುದು ಅನಿವಾರ್ಯವಾಗಿದೆ.

ಸಾಮಾನ್ಯವಾಗಿ ಹಿಂಗಾರು ಮಳೆ ನವೆಂಬರ್ ತನಕವೂ ಸುರಿಯುತ್ತಿತ್ತು, ಇನ್ನೊಂದೆಡೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಆಗಾಗ್ಗೆ ಮುಂಗಾರು ಪೂರ್ವ ಮಳೆ ಕೊಡಗಿನ ಭಾಗದಲ್ಲಿ ಸುರಿಯುತ್ತಿತ್ತು. ಆದರೆ ಕಳೆದ ವರ್ಷದಿಂದ ಬೇಸಿಗೆಯಲ್ಲಿ ಮಳೆಯೇ ಸುರಿಯದಂತಾಗಿದೆ. ಇದರಿಂದ ಕೊಡಗು ಭಾಗದಲ್ಲಿ ಉಷ್ಣಾಂಶ ಹೆಚ್ಚಾಗುತ್ತಿದ್ದು, ಕಾಫಿ ಮತ್ತು ಕರಿಮೆಣಸಿಗೆ ಈ ಸಂದರ್ಭ ಮಳೆಯ ಅಗತ್ಯತೆ ಇತ್ತಾದರೂ ಮಳೆಯಿಲ್ಲದೆ ಬೆಳೆಗಾರರು ಆಕಾಶ ನೋಡುವಂತಾಗಿದೆ. ಮಲೆನಾಡಿನ ಭಾಗದಲ್ಲಿ ಈ ಸಮಯದಲ್ಲಿ ಸ್ವಲ್ಪ ಮಟ್ಟಿಗೆ ಮಳೆಯಾದರೆ ನದಿ ನೀರು ಬಿಸಿಲಿಗೆ ಆವಿಯಾಗುವುದನ್ನು ತಡೆಯಲು ಸಾಧ್ಯವಾಗಲಿದೆ.
ದಶಕಗಳ ಹಿಂದೆಯೂ ದುಸ್ಥಿತಿ ಬಂದಿತ್ತು
ಈ ಬಾರಿಯ ರಣಬಿಸಿಲಿನಿಂದ ಕೆಆರ್ ಎಸ್ ಜಲಾಶಯ ಸಂಪೂರ್ಣ ಬರಿದಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ. ಪರಿಣಾಮ ತುಂಬಿ ತುಳುಕುತ್ತಿದ್ದ ಜಲಾಶಯವನ್ನಷ್ಟೆ ನೋಡಿದವರು ಈ ಬಾರಿ ಬರಿದಾದ ಜಲಾಶಯವನ್ನು ನೋಡುವಂತಹ ದೌರ್ಬಾಗ್ಯ ಒದಗಿ ಬರುತ್ತಾ? ಎಂದು ಜನ ಬೇಸರ ವ್ಯಕ್ತಪಡಿಸುತ್ತಿದ್ದಾರೆ. 2015 ರಿಂದ 2017ರವರೆಗೂ ಸಮರ್ಪಕವಾಗಿ ಮುಂಗಾರು ಮಳೆ ಸುರಿಯದೆ ಕೆಆರ್ ಎಸ್ ಜಲಾಶಯ ಭರ್ತಿಯಾಗದೆ ಸಂಕಷ್ಟ ಕಾಡಿತ್ತು. ಮತ್ತು ಅದರ ಮತ್ತೊಂದು ಮುಖವೂ ನಮಗೆ ಕಾಣಿಸಿತ್ತು.
ದಶಕಗಳ ಹಿಂದೆ ಅಂದರೆ 2013ರಲ್ಲಿ ಕೆ.ಆರ್.ಎಸ್ ಜಲಾಶಯ 65 ಅಡಿ ತಲುಪಿತ್ತು. ಆಗ ಕುಡಿಯುವುದಕ್ಕೂ ನೀರಿಲ್ಲದೆ ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಅಷ್ಟೇ ಅಲ್ಲದೆ, ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ ಕುಸಿದಾಗ ಹಿನ್ನೀರಿನಿಂದ ನಿಂತು ನೋಡಿದಾಗ ಗೋಚರಿಸಿದ ದೃಶ್ಯಗಳು ಇಂದಿಗೂ ಜನಮಾನಸದಲ್ಲಿ ಹಸಿರಾಗಿಯೇ ಉಳಿದಿದೆ. ಅವತ್ತಿನ ಪರಿಸ್ಥಿತಿ ಯಾವತ್ತೂ ಬರಬಾರದು ಎಂದು ಜನ ಮಾತಾಡಿಕೊಂಡಿದ್ದರು ಆದರೆ ಮತ್ತೆ ಅಂತಹ ಪರಿಸ್ಥಿತಿ ಈ ಬಾರಿ ಬರುತ್ತಾ? ಎಂಬ ಭಯವೂ ಇಲ್ಲದಿಲ್ಲ.

ಮುಳುಗಡೆಯಾದ ಗ್ರಾಮದ ಕುರುಹು ಕಂಡಿತ್ತು
ಈ ಹಿಂದೆ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆಯೇ ಮುಳುಗಡೆಯಾಗಿದ್ದ ಗ್ರಾಮಗಳು, ವೀರಗಲ್ಲು, ಮಾಸ್ತಿಗಲ್ಲಿನಂತಹ ಶಾಸನಗಳು, ದೇವಾಲಯಗಳು ಕಂಡಿದ್ದವು. ಆ ದೃಶ್ಯವನ್ನು ನೋಡಲು ಜನ ತಂಡೋಪ ತಂಡವಾಗಿ ಆಗಮಿಸಿ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ವೇಣುಗೋಪಾಲ ದೇಗುಲ, ನಾರಾಯಣಸ್ವಾಮಿ ದೇವಾಲಯ, ಸುಬ್ರಹ್ಮಣ್ಯೇಶ್ವರ ಗೋಪುರ, ಹಲವಾರು ಕಲ್ಲಿನ ಶಾಸನಗಳನ್ನು ನೋಡಿ ಅಚ್ಚರಿ ಪಟ್ಟಿದ್ದರು.
2000 ಇಸವಿಯಲ್ಲೊಮ್ಮೆ ಕೆಆರ್ ಎಸ್ ನಲ್ಲಿ ನೀರಿನ ಮಟ್ಟ ಇಳಿದಾಗ ಹಿನ್ನೀರಿನಲ್ಲಿ ವೇಣುಗೋಪಾಲಸ್ವಾಮಿ ದೇವಾಲಯ ಪತ್ತೆಯಾದಾಗ ದೇವಾಲಯವನ್ನು ಜಲಾಶಯದಿಂದ ಹೊರಭಾಗಕ್ಕೆ ಸ್ಥಳಾಂತರ ಮಾಡಿ ಸುಂದರವಾಗಿ ದೇವಾಲಯವನ್ನು ಖೋಡೆಸ್ ಕಂಪನಿ ನಿರ್ಮಿಸಿದ್ದು ಇತಿಹಾಸವಾಗಿದೆ.
2016ರಲ್ಲಿ ಕೂಡ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗ ರೈತರು ಹಿನ್ನೀರಿನಲ್ಲಿ ಉಳುಮೆ ಮಾಡಿ ಬೆಳೆ ಬೆಳೆದಿದ್ದರು. ಬೆಸ್ತರು ಗುಡಿಸಲು ಹಾಕಿಕೊಂಡು ಮೀನು ಹಿಡಿದಿದ್ದರು. ಅದಾದ ನಂತರ 2017ರ ಮುಂಗಾರು ಮಳೆ ಕ್ಷೀಣಿಸಿದರೂ ಹಿಂಗಾರು ಚೆನ್ನಾಗಿ ಸುರಿದಿದ್ದರಿಂದ ಜಲಾಶಯಕ್ಕೆ ನೀರು ಹರಿದು ಬಂದಿತ್ತಾದರೂ ಭರ್ತಿಯಾಗಿರಲಿಲ್ಲ. 2018ರ ನಂತರ 2022ರವರಗೆ ಜಲಾಶಯ ಭರ್ತಿಯಾಗುವುದರೊಂದಿಗೆ ಹೆಚ್ಚುವರಿ ನೀರು ಹರಿದು ಹೋಗಿದ್ದರಿಂದ ನೀರಿನ ಸಮಸ್ಯೆ ಎದುರಾಗಿರಲಿಲ್ಲ.

ಮಳೆಗಾಗಿ ಪ್ರಾರ್ಥನೆ ಮಾಡುವುದು ಅನಿವಾರ್ಯ
ಸದ್ಯ ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ 85 ಅಡಿಗೆ ತಲುಪಿದೆ. ಇನ್ನೆರಡು ತಿಂಗಳು ರಣ ಬಿಸಿಲು ಇರುವುದರಿಂದ ನೀರಿನ ಮಟ್ಟ ಗಣನೀಯ ಇಳಿಕೆಯಾಗುವ ಸಾಧ್ಯತೆ ಇರುವುದರಿಂದ ಮತ್ತೆ ಜಲಾಶಯದ ಒಳಗೆ ಅಡಗಿರುವ ದೇಗುಲ ಸೇರಿದಂತೆ ಎಲ್ಲ ಅವಶೇಷಗಳು ಹೊರ ಬರುವ ಸಾಧ್ಯತೆಯಿದೆ. ಆದರೆ ನೀರಿನ ಮಟ್ಟ ಅಲ್ಲಿಗೆ ತಲುಪುವ ಹೊತ್ತಿಗೆ ಜನ ನೀರಿಗಾಗಿ ಬಳಲುವ ಸ್ಥಿತಿ ಇಲ್ಲದಿಲ್ಲ. ಸದ್ಯ ನಿರ್ಮಾಣವಾಗುತ್ತಿರುವ ಬರಗಾಲದ ಈ ಪರಿಸ್ಥಿತಿಗೆ ಪರಿಹಾರ ಕೂಡ ಪ್ರಕೃತಿಯೇ ನೀಡಬೇಕಾಗಿದೆ. ಮುಂದಿನ ದಿನಗಳಲ್ಲಿ ಮಳೆ ಬಂದರಷ್ಟೇ ಸಂಕಷ್ಟ ನಿವಾರಣೆಯಾಗಲು ಸಾಧ್ಯವಾಗಲಿದೆ.
ನಾಲ್ಕೈದು ವರ್ಷಗಳ ಕಾಲ ತುಂಬಿ ತುಳುಕುತ್ತಿದ್ದ ಬಹುತೇಕ ಕೆರೆಗಳು ಒಣಗಿ ಮೈದಾನವಾಗಿವೆ. ಅವುಗಳಲ್ಲಿ ತುಂಬಿರುವ ಹೂಳು ತೆಗೆದು ಅವುಗಳಿಗೆ ಪುನರ್ಜೀವ ನೀಡಿದರೆ ಮುಂದಿನ ವರ್ಷಗಳಲ್ಲಿ ಮಳೆ ಸುರಿದರೆ ನೀರನ್ನು ಸಂಗ್ರಹಿಸಿಟ್ಟುಕೊಳ್ಳಲು ಸಾಧ್ಯೈವಾಗಲಿದೆ. ಆದರೆ ಸರ್ಕಾರಗಳು ಈ ನಿಟ್ಟಿನಲ್ಲಿ ಯಾವುದೇ ರೀತಿಯ ಕೆಲಸ ಕಾರ್ಯಗಳನ್ನು ಮಾಡದೇ ಇರುವುದರಿಂದಾಗಿಯೇ ಮಳೆ ಕಡಿಮೆಯಾದರೆ ಪರದಾಡುವಂತಹ ಕಠಿಣ ಪರಿಸ್ಥಿತಿ ಎದುರಾಗುವಂತಾಗಿದೆ. ಅದು ಏನೇ ಇರಲಿ ಮುಂದಿನ ದಿನಗಳು ಭೀಕರತೆ ಹೋಗುವ ಮುನ್ನ ವರುಣದೇವ ಕೃಪೆ ತೋರಲಿ ಎಂದು ಪ್ರಾರ್ಥನೆ ಮಾಡುವುದನ್ನು ಹೊರತು ಪಡಿಸಿ ಬೇರೇನು ಮಾರ್ಗವಿಲ್ಲದಂತಾಗಿದೆ.












Click it and Unblock the Notifications