ಗಾಂಜಾ ಬೆಳೆಯಲು ಅವಕಾಶ ಕಲ್ಪಿಸಿ: ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತ ಈ ಬೇಡಿಕೆ ಇಟ್ಟಿದ್ದು ಏಕೆ?
ಮಂಡ್ಯ, ಸೆಪ್ಟೆಂಬರ್, 27: ಕಾವೇರಿ ಜಲಾನಯನ ಪ್ರದೇಶದ ಜನರ ವಿರೋಧದ ನಡುವೆಯೂ ತಮಿಳುನಾಡಿಗೆ ನೀರು ಬಿಡುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತ ಮೈಮೇಲೆ ಸಗಣಿ ಸುರಿದುಕೊಂಡು ವಿನೂತನ ಪ್ರತಿಭಟನೆ ನಡೆಸಿದರು. ಅಲ್ಲದೆ ಇದೇ ವೇಳೆ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಹಿನ್ನೆಲೆ ಜಲಾಶಯ ಬತ್ತಿಹೋಗುವ ಹಂತ ತಲುಪಿದ್ದು, ಈ ಪರಿಸ್ಥಿತಿಯಲ್ಲಿ ಬೇರೆ ಬೆಳೆ ಬೆಳೆಯಲು ಸಾಧ್ಯವಿಲ್ಲ. ಆದ್ದರಿಂದ ರೈತರಿಗೆ ಗಾಂಜಾ ಬೆಳೆಯಲು ಅನುಮತಿ ನೀಡಿ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಎದರು ಜಮಾಯಿಸಿದ ಪ್ರತಿಭಟನಾಕಾರರು, ರಾಜ್ಯ, ಕೇಂದ್ರ ಹಾಗೂ ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆಯನ್ನು ಮೊಳಗಿಸಿದರು. ಬಳಿಕ ಬಕೆಟ್‌ನಲ್ಲಿ ತಂದಿದ್ದ ಸಗಣಿ ನೀರನ್ನು ಬಿಜೆಪಿ ಕಾರ್ಯಕಕರ್ತ ಶಿವಕುಮಾರ್ ಆರಾಧ್ಯ ಮೈಮೇಲೆ ಸುರಿದುಕೊಂಡು ಪ್ರತಿಭಟಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಿದರು.

ನಂತರ ಮಾತನಾಡಿದ ಅವರು, ಕನ್ನಂಬಾಡಿ ಅಣೆಕಟ್ಟೆ ಸೇರಿದಂತೆ ರಾಜ್ಯದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸಿ ಜಲಾಶಯ ಬರಿದಾಗಿರುವುದರಿಂದ ರೈತರು ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಗಾಂಜಾ ಬೆಳೆಯಲು ಅವಕಾಶ ಕಲ್ಪಿಸಬೇಕು, ಇಲ್ಲವೇ ದಯಾ ಮರಣ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಕೆ.ಆರ್.ಎಸ್ ಜಲಾಶಯದ ಕಾವೇರಿ ನೀರನ್ನು ಸಂಪೂರ್ಣವಾಗಿ ತಮಿಳುನಾಡಿಗೆ ಹರಿಯಲು ಬಿಟ್ಟಿರುವುದರಿಂದ ಈಗಾಗಲೇ ಜಲಾಶಯ ಬರಿದಾಗಿದೆ. ಇಂತಹ ಸನ್ನಿವೇಶದಲ್ಲಿ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಪ್ರತಿನಿತ್ಯ 3 ಸಾವಿರ ಕ್ಯೂಸೆಕ್ ನೀರು ಬಿಡಲು ಸೂಚಿಸಿದೆ, ರೈತರಿಗೆ ಭತ್ತ, ರಾಗಿ, ಕಬ್ಬು ಬೆಳೆಯಲು ನೀರಿಲ್ಲದ ಕಾರಣ ಗಾಂಜಾ ಬೆಳೆಯಲು ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದರು.
ಗಾಂಜಾ ಬೆಳೆ ಬೆಳೆಯಲು ಕಾವೇರಿ ನೀರಿನ ಅವಶ್ಯಕತೆಯಿಲ್ಲ, ಮನೆಯ ತಿಪ್ಪೆಯ ಗುಂಡಿ ಸ್ನಾನ, ಪಾತ್ರೆ ತೊಳೆದ ನೀರು, ಸಸಿಯ ಕುಂಡಗಳಲ್ಲಿ, ಹಿತ್ತಲಿನ ಕೀರೆಮಡಿ, ಮತ್ತು ಕೈತೋಟದಲ್ಲಿ ಗಾಂಜಾ ಬೆಳೆ ಬೆಳೆಯಲು ಸಾಧ್ಯವಿದೆ. ಇದರಿಂದ ಸಂಕಷ್ಟ ಕಾಲದಲ್ಲಿ ರೈತರ ಬದುಕು ಮುನ್ನಡಲಿದೆ ಎಂದು ಹೇಳಿದರು. ಇನ್ನು ಗಾಂಜಾ ಬೆಳೆಗೆ ಅವಕಾಶ ಮಾಡಿಕೊಡದಿದ್ದರೆ ರಾಷ್ಟ್ರಪತಿಯವರ ಮೂಲಕ ದಯಾ ಮರಣ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಈ ವೇಳೆ ಸಾತನೂರು ಯೋಗೇಶ್, ನಂಜುಂಡಸ್ವಾಮಿ, ಹೊಸಹಳ್ಳಿ ಶಿವು, ಎಚ್.ಕೆ ಮಂಜುನಾಥ್,ಬಿ.ಟಿ ಶಿವಲಿಂಗಯ್ಯ, ಶಿವಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications