ಕೆ.ಆರ್ ಪೇಟೆ ಚುನಾವಣೆ ಫಲಿತಾಂಶ 2023: ಜೆಡಿಎಸ್ ಅಭ್ಯರ್ಥಿ ಎಚ್.ಟಿ ಮಂಜು ಭರ್ಜರಿ ಗೆಲುವು
ಮಂಡ್ಯ, ಮೇ 13: ಕೆ.ಆರ್ ಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶದ ಮುಕ್ತಾಯಗೊಂಡಿದ್ದು, ಜೆಡಿಎಸ್ ಅಭ್ಯರ್ಥಿ ಎಚ್.ಟಿ ಮಂಜು ಗೆಲುವು ಸಾಧಿಸಿದ್ದಾರೆ.
ಕೆ.ಆರ್ ಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶದ ಮತ ಎಣಿಕೆ ನಡೆಯುತ್ತಿದ್ದು, ಬೆಳಗ್ಗೆ 10:20ರ ವೇಳೆಗೆ ಜೆಡಿಎಸ್ ಅಭ್ಯರ್ಥಿ ಎಚ್.ಟಿ ಮಂಜು 13,190 ಮತಗಳನ್ನು ಪಡೆದು ಮುನ್ನಡೆ ಸಾಧಿಸಿದ್ದಾರೆ.
ಕೃಷ್ಣರಾಜ ಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶದ ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದ್ದು, ಬೆಳಗ್ಗೆ 9:05 ಸಮಯಕ್ಕೆ ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್ ದೇವರಾಜು ಮುನ್ನಡೆ ಸಾಧಿಸಿದ್ದಾರೆ.
ತೀವ್ರ ಕುತೂಹಲ ಮೂಡಿಸಿದ್ದ ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಮತ ಎಣಿಕೆ ಇನ್ನೇನು ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದ್ದು, ಒಟ್ಟು 2,615 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.
ಕೃಷ್ಣರಾಜ ಪೇಟೆಯು ಮಂಡ್ಯ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಅತ್ಯಂತ ಹೈವೋಲ್ಟೇಜ್ ಕ್ಷೇತ್ರವಾಗಿದೆ. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿ ಪೈಪೋಟಿ ಏರ್ಪಟ್ಟಿದೆ. ಬಿಜೆಪಿ ಪಕ್ಷದ ಅಭ್ಯರ್ಥಿ ಕೆ.ಸಿ ನಾರಾಯಣಗೌಡ, ಜೆಡಿಎಸ್ ಅಭ್ಯರ್ಥಿ ಹೆಚ್.ಟಿ.ಮಂಜು ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಬಿ.ಎಲ್.ದೇವರಾಜು ನಡುವೆ ನೇರಾನೇರ ಹಣಾಹಣಿ ಇದ್ದು, ವಿಶೇಷವೆಂದರೆ ಅಭ್ಯರ್ಥಿಗಳು ಮೂರು ಪಕ್ಷಗಳಲ್ಲಿದ್ದರೂ ಅವರೆಲ್ಲರೂ ಮೂಲವಾಗಿ ಜನತಾ ಪರಿವಾರದವರಾಗಿದ್ದಾರೆ.

ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ನಿರ್ಧರಿಸಿದ್ದ ಕೆ.ಸಿ ನಾರಾಯಣಗೌಡ ಸ್ಥಳೀಯ ಕಾಂಗ್ರೆಸ್ ಮುಖಂಡರ ಆಕ್ರೋಶದ ಬಳಿಕ ಹಾಗೂ ಬಿಜೆಪಿ ಮುಖಂಡ ಸಮಾಧಾನದ ಬಳಿಕ ಪಕ್ಷದಲ್ಲೇ ಉಳಿದು ಬಿಜೆಪಿಯಿಂದ ಕಣದಲ್ಲಿದ್ದಾರೆ. ಇನ್ನು ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿ.ಎಲ್.ದೇವರಾಜು ಟಿಕೆಟ್ ಕೈ ತಪ್ಪಿದ್ದಕ್ಕೆ ಬಹಿರಂಗವಾಗಿ ಆಕ್ರೋಶ ಹೊರ ಹಾಕಿ ಪಕ್ಷದಿಂದ ಹೊರ ನಡೆದಿದ್ದರು.
ಈ ವೇಳೆ ಜೆಡಿಎಸ್‌ನಲ್ಲಿದ್ದ ಒಳಜಗಳವನ್ನು ಕಾಂಗ್ರೆಸ್ ಬಳಸಿಕೊಂಡಿದ್ದು, ಜೆಡಿಎಸ್ ಬಂಡಾಯ ಅಭ್ಯರ್ಥಿ ಬಿ.ಎಲ್.ದೇವರಾಜ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್ ಕೂಡ ನೀಡಿ ಕಣಕ್ಕಿಳಿಸಿತ್ತು. ಇನ್ನು ಜೆಡಿಎಸ್ ಅಭ್ಯರ್ಥಿ ಹೆಚ್.ಟಿ.ಮಂಜು ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಚುನಾವಣಾ ಪ್ರಚಾರ ಆರಂಭಿಸಿದ್ದರು.
ಕೆ.ಆರ್ ಪೇಟೆ ಕ್ಷೇತ್ರದ ರಾಜಕೀಯ ಹಿನ್ನೆಲೆ
ಸ್ವಾತಂತ್ರ್ಯ ಹೋರಾಟಗಾರರಾದ ಶೀಳನಕೆರೆಯ ಸಾಹುಕಾರ್ ಕುಟುಂಬದ ಕಾಂಗ್ರೆಸ್ ಅಭ್ಯರ್ಥಿ ಎಸ್.ಎಂ.ಲಿಂಗಪ್ಪ ಈ ಕ್ಷೇತ್ರದ ಪ್ರಥಮ ಶಾಸಕರು.ಎಂ.ಕೆ. ಕೆಂಪೇಗೌಡರು, ಎನ್.ನಂಜೇಗೌಡರು, ಎಂ.ಕೆ.ಬೊಮ್ಮೇಗೌಡ, ಬಳ್ಳೇಕೆರೆಯ ಎಂ.ಪುಟ್ಟಸ್ವಾಮಿಗೌಡ, ಕೆ.ಆರ್.ಪೇಟೆ ಕೃಷ್ಣ ಹಾಗೂ ಬಿ.ಪ್ರಕಾಶ್, ಕೆ.ಬಿ. ಚಂದ್ರಶೇಖರ್ 2004ರವರೆಗೆ ಶಾಸಕರಾಗಿ ಆಯ್ಕೆಯಾಗಿರುತ್ತಾರೆ.
2008ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಕೆ.ಬಿ.ಚಂದ್ರಶೇಖರ್ ಜಯಗಳಿಸಿ ಎರಡನೇ ಬಾರಿಗೆ ಶಾಸಕರಾಗುತ್ತಾರೆ. 2013ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಕೆ.ಸಿ.ನಾರಾಯಣಗೌಡ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗುತ್ತಾರೆ. 2018ರ ಚುನಾವಣೆಯಲ್ಲೂ ನಾರಾಯಣಗೌಡರೇ ಎರಡನೇ ಬಾರಿಗೆ ಮರು ಆಯ್ಕೆಯಾಗುತ್ತಾರೆ. ಆದರೆ ಮಧ್ಯಂತರದಲ್ಲಿ ಜೆಡಿಎಸ್ ತೊರೆದು ಬಿಜೆಪಿ ಸೇರುತ್ತಾರೆ. ಹೀಗಾಗಿ 2019ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಚಿಹ್ನೆಯೊಂದಿಗೆ ಸ್ಪರ್ಧಿಸಿ ಮತ್ತೆ ಗೆಲುವು ಸಾಧಿಸುತ್ತಾರೆ. ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರದಲ್ಲಿ ಸಚಿವರಾಗಿದ್ದರು.
ಸಂಖ್ಯಾವಾರು ಕೆ.ಆರ್ ಪೇಟೆ ಕ್ಷೇತ್ರದ ರಾಜಕೀಯ ವಿಶ್ಲೇಷಣೆ
ಜೆಡಿಎಸ್ ಭದ್ರಕೋಟೆಯಾಗಿದ್ದ ಕೆ.ಆರ್ ಪೇಟೆ ಕ್ಷೇತ್ರದಲ್ಲಿ 2013ರ ವಿಧಾನಸಭಾ ಚುನಾವಣೆಯಲ್ಲಿ ಅಂದಿನ ಜೆಡಿಎಸ್ ಅಭ್ಯರ್ಥಿಯಾಗಿದ್ದ ಕೆ.ಸಿ.ನಾರಾಯಣಗೌಡರು 56,784 ಮತಗಳನ್ನು ಪಡೆಯುವ ಮೂಲಕ 9,243 ಮತಗಳ ಅಂತರದಲ್ಲಿ ಕೆ.ಬಿ.ಚಂದ್ರಶೇಖರ್ ಅವರನ್ನು ಸೋಲಿಸಿದರು. 2018ರ ಚುನಾವಣೆಯಲ್ಲೂ ನಾರಾಯಣಗೌಡರೇ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ 88,016 ಮತಗಳನ್ನು ಪಡೆದು 17,119 ಮತಗಳ ಅಂತರದಲ್ಲಿ ಕೆ.ಬಿ.ಚಂದ್ರಶೇಖರ್ ಅವರನ್ನು ಸೋಲಿಸಿದರು. ಬಳಿಕ ಕ್ಷೇತ್ರದಲ್ಲಿ ನಡೆದ ರಾಜಕೀಯ ಬೆಳವಣಿಗೆಯಿಂದ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ನಾರಾಯಣಗೌಡ 66,094 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು.
ಕೆ.ಆರ್ ಪೇಟೆ ಕ್ಷೇತ್ರದ ಮತದಾರರ ವಿವರ
ಒಕ್ಕಲಿಗರು- 80,000
ದಲಿತರು- 36,000
ಕುರುಬರು- 35,000
ಲಿಂಗಾಯಿತರು- 18,000
ಮುಸ್ಲಿಂ- 8,000
ಕ್ರಿಶ್ಚಿಯನ್- 3,000
ಬ್ರಾಹ್ಮಣ- 2,000g












Click it and Unblock the Notifications