ಮಂಡ್ಯ : ಎಸ್‌ಬಿಐ ಬ್ಯಾಂಕ್ ಶಾಖಾ ವ್ಯವಸ್ಥಾಪಕಿ ನಾಪತ್ತೆ
ಮಂಡ್ಯ, ಜನವರಿ 07 : ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಎಸ್‌ಬಿಐ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕಿ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಹುಡುಕಾಟ ಮುಂದುವರೆದಿದೆ.
ಎಸ್‌ಬಿಐನ ಶಾಖಾ ವ್ಯವಸ್ಥಾಪಕಿ ಎಚ್.ಜೆ.ರಮಾ ಅವರು ಡಿಸೆಂಬರ್ 29ರಿಂದ ನಾಪತ್ತೆಯಾಗಿದ್ದಾರೆ. ಶಾಖೆಯ ಬೀಗದ ಕೀಗಳನ್ನು ಸಹೋದ್ಯೋಗಿಗಳಿಗೆ ನೀಡಿರುವ ಅವರು, ಮೊಬೈಲ್ ಫೋನ್ ಅನ್ನು ತಮ್ಮ ಡ್ರಾನಲ್ಲಿ ಇಟ್ಟು ಹೋಗಿದ್ದಾರೆ.
ಬೆಂಗಳೂರಿನ ಬನಶಂಕರಿಯಲ್ಲಿ ಎಚ್.ಜೆ.ರಮಾ ಅವರ ಪತಿ ಕೃಷ್ಣಮೂರ್ತಿ ವಾಸವಾಗಿದ್ದಾರೆ. ಕೆ.ಆರ್.ಪೇಟೆಯ ಟೌನ್‌ಕ್ಲಬ್ ಹಿಂಭಾಗ ರಮಾ ಅವರು ಬಾಡಿಗೆ ಮನೆಯಲ್ಲಿದ್ದರು. ಆದರೆ, ಬೆಂಗಳೂರಿಗೂ ಹೋಗದೇ, ಬಾಡಿಗೆ ಮನೆಗೂ ಹೋಗದೆ ಅವರು ನಾಪತ್ತೆಯಾಗಿದ್ದಾರೆ.

ಕಳೆದ 1 ವರ್ಷದಿಂದ ಎಸ್‌ಬಿಐನಲ್ಲಿ ಶಾಖಾ ವ್ಯವಸ್ಥಾಪಕಿಯಾಗಿ ಅವರು ಕೆಲಸ ಮಾಡುತ್ತಿದ್ದರು. ಪರಿಚಯಸ್ಥರು, ಸಂಬಂಧಿಕರು ಯಾರ ಮನೆಗೂ ಅವರು ತೆರಳಿಲ್ಲ. ಪತಿ ಕೃಷ್ಣಮೂರ್ತಿ ಅವರು ಕೆ.ಆರ್.ಪೇಟೆ ಪೊಲೀಸ್ ಠಾಣೆಗೆ ನಾಪತ್ತೆ ಬಗ್ಗೆ ದೂರು ನೀಡಿದ್ದಾರೆ.
ಜನವರಿ 3ರಂದು ಪತಿ ಕೃಷ್ಣಮೂರ್ತಿ ಅವರು ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಆರಂಭಿಸಿದ್ದಾರೆ. ಮೊಬೈಲ್ ಫೋನ್ ಸಹ ತೆಗೆದುಕೊಂಡು ಹೋಗಿಲ್ಲ. ಆದ್ದರಿಂದ, ಹುಡುಕಾಟ ಕಷ್ಟವಾಗಿದೆ.
ಪೊಲೀಸರು ಎಲ್ಲಾ ಪೊಲೀಸ್ ಠಾಣೆಗಳಿಗೂ ಮಾಹಿತಿ ರವಾನಿಸಿದ್ದಾರೆ. ಬೆಂಗಳೂರು ಪೊಲೀಸರಿಗೂ ಮಾಹಿತಿ ನೀಡಿದ್ದು, ಹುಡುಕಾಟಕ್ಕೆ ಅವರ ಸಹಕಾರವನ್ನು ಕೇಳಲಾಗಿದೆ.












Click it and Unblock the Notifications