ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ ಕೆ.ಆರ್ ಪೇಟೆ ಬಾಲಕಿ
ಮಂಡ್ಯ, ಏಪ್ರಿಲ್ 05: ಆರು ವರ್ಷದ ಬಾಲಕಿಯೊಬ್ಬಳು ತನಗೆ ಚಾಕೋಲೇಟ್ ಗಾಗಿ ನೀಡಿದ್ದ ಹಣವನ್ನು ಕೂಡಿಟ್ಟು ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ್ದಾಳೆ.
ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲ್ಲೂಕು ಬಿ.ಸಿ.ಎಂ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ಕೆ.ಸವಿತಾ ಮತ್ತು ಆಸರೆ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ದಂಪತಿ ಅವರ ಆರು ವರ್ಷದ ಪುತ್ರಿ ಬೆಳ್ಳಿ ಹೆಗ್ಗಡೆ ತಾನು ಏಳು ತಿಂಗಳಿಂದ ಗೋಲಕದಲ್ಲಿ ಕೂಡಿಟ್ಟಿದ್ದ 1,100 ರೂ.ಗಳನ್ನು ದೇಣಿಗೆಯಾಗಿ ನೀಡಿದ್ದಾಳೆ.
ಕೊರೊನಾ ನಿಯಂತ್ರಣ ನಿಧಿಗೆ ಸದ್ಬಳಕೆ ಮಾಡಿಕೊಳ್ಳಬೇಕೆಂದು ಪಟ್ಟಣದ ಮಿನಿವಿಧಾನ ಸೌಧದಲ್ಲಿ ತನ್ನ ತಾಯಿಯೊಂದಿಗೆ ತೆರಳಿದ ಬಾಲಕಿ ತಹಸೀಲ್ದಾರ್ ಅವರಿಗೆ ಹಸ್ತಾಂತರ ಮಾಡಿರುವುದು ಇದೀಗ ಗಮನ ಸೆಳೆದಿದೆ.

ಬಾಲಕಿ ಬೆಳ್ಳಿ ಹೆಗ್ಗಡೆ ನೀಡಿದ ದೇಣಿಗೆಯನ್ನು ಸ್ವೀಕಾರ ಮಾಡಿದ ತಹಶೀಲ್ದಾರ್ ಎಂ.ಶಿವಮೂರ್ತಿ ಅವರು ಈ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವುದಾಗಿ ತಿಳಿಸಿದರು. ಅಲ್ಲದೆ ಈ ಪುಟ್ಟ ಬಾಲಕಿಯಂತೆ ಎಲ್ಲರೂ ಕೊರೊನಾ ನಿಯಂತ್ರಣಕ್ಕೆ ಕೈಲಾದಷ್ಟು ದೇಣಿಗೆಯನ್ನು ನೀಡುವ ಮೂಲಕ ಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಬಾಲಕಿ ಬೆಳ್ಳಿ ಹೆಗ್ಗಡೆ ಈ ಹಿಂದೆ ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿ ಉಂಟಾಗಿದ್ದ ಸಂದರ್ಭದಲ್ಲಿಯೂ ತಾನು ಗೋಲಕದಲ್ಲಿ ಕೂಡಿಟ್ಟಿದ್ದ 850 ರುಪಾಯಿಗಳನ್ನು ನೆರೆ ಪರಿಹಾರಕ್ಕೆ ನೀಡುವ ಮೂಲಕ ಸ್ಪೂರ್ತಿಯಾಗಿದ್ದಳು.












Click it and Unblock the Notifications