SeaPlane: ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿ ಕೆಆರ್‌ಎಸ್ ಹಿನ್ನೀರಿನಲ್ಲಿ ಜಲ ವಿಮಾನ ಹಾರಾಟ- ಯಾವಾಗ & ಉದ್ದೇಶ ಏನು?
Sea Plane: ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ಜಲ ವಿಮಾನದ ಪ್ರಾಯೋಗಿಕ ಹಾರಾಟ ನಡೆಸಲು ರಾಜ್ಯದ ಸರ್ಕಾರ ನಿರ್ಧರಿಸಿದೆ. ಹಾಗಾದರೆ ಯಾವ ಜಿಲ್ಲೆಯಲ್ಲಿ, ಸಮಯ ದಿನಾಂಕಗಳ ವಿವರ, ಇದು ಹೇಗೆ ಕಾರ್ಯನಿರ್ವಹಿಸಲಿದೆ ಹಾಗೂ ಉದ್ದೇಶ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನಯ ಇಲ್ಲಿ ನೀಡಲಾಗಿದೆ ಗಮನಿಸಿ.
ಸಾಮಾನ್ಯವಾಗಿ ಆಕಾಶದಲ್ಲಿ ಹಾರಾಟ ನಡೆಸುವ ವಿಮಾನವನ್ನು ನಾವು ನೋಡಿದ್ದೇವೆ. ಇದೀಗ ನೀರಿನ ಮೇಲೆಯೇ ಹಾರಾಟ ನಡೆಸುವ ವಿಮಾನವನ್ನು ಕೆಆರ್‌ಎಸ್ ಹಿನ್ನೀರಿನಲ್ಲಿ ಕಾಣಬಹುದಾಗಿದೆ.

ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರ (ಕೆಆರ್‌ಎಸ್) ಅಣೆಕಟ್ಟಿನ ಹಿನ್ನೀರಿನ ವೇಣುಗೋಪಾಲಸ್ವಾಮಿ ದೇವಸ್ಥಾನದ ಬಳಿ ಸೀ ವಿಮಾನ ಹಾರಾಟಕ್ಕೆ ಸರ್ಕಾರ ಸ್ಥಳ ನಿಗದಿ ಮಾಡಿದೆ. ಕೇಂದ್ರ ಸರ್ಕಾರದ ವಿಮಾನಯಾನದ ನಿರ್ದೇಶನದಂತೆ, ರಾಜ್ಯದ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮವು ವಿವಿಧ ಇಲಾಖೆಗಳ ಸಹಯೋಗದಲ್ಲಿ ನವೆಂಬರ್ 10ರಂದು ಇದರ ಪ್ರಾಯೋಗಿಕ ಹಾರಾಟ ನಡೆಸಲು ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ ಎಂದು ತಿಳಿದುಬಂದಿದೆ
ಉದ್ದೇಶ ಏನು.?: ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಜಲ ವಿಮಾನದ ಪ್ರಾಯೋಗಿಕ ಹಾರಾಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇನ್ನು 12 ಪ್ರವಾಸಿಗರನ್ನು ಹೊತ್ತ ಮೊದಲ ಸೀ ಪ್ಲೇನ್ ಕೆಆರ್‌ಎಸ್ ಹಿನ್ನೀರಿನಲ್ಲಿ 4 ಬಾರಿ ಹಾರಾಟ ನಡೆಸಲಿದೆ. ನೀರಿನ ಮೇಲೆಯೇ ಹಾರಾಟ ನಡೆಸುವ ಮತ್ತು ಇಳಿಯುವ ಈ ಪ್ಲೇನ್‌ಗಳು, ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣವನ್ನು ಸಾರಿಗೆ ಕೇಂದ್ರವಾಗಿ ಬಳಲೆ ಮಾಡಿಕೊಳ್ಳಲಿವೆ.
2020ರಲ್ಲಿ ಗುಜರಾತ್‌ನ ನರ್ಮದಾ ಜಿಲ್ಲೆಯ ಸಬರಮತಿ ನದಿಯಲ್ಲಿ ಮೊದಲನೇ ಜಲವಿಮಾನ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಕೇರಳ, ಆಂಧ್ರಪ್ರದೇಶದಲ್ಲೂ ಯಶಸ್ವಿಯಾಗಿ ಪರಿಚಯಿಸಿದ ಬಳಿಕ, ಈಗ ರಾಜ್ಯದಲ್ಲಿ ಅವಕಾಶ ಕಲ್ಪಿಸಲಾಗಿದೆ. ಭವಿಷ್ಯದಲ್ಲಿ ಉಡಾನ್ ಯೋಜನೆಯಡಿ ಸೇವೆ ಸೇರ್ಪಡೆ ಆಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಪ್ರಯಾಣಿಕರು ವಿಮಾನ ಹತ್ತಲು ಹಾಗೂ ಇಳಿಯಲು ಕೆಆರ್‌ಎಸ್ ಜಲಾಶಯದಲ್ಲಿ ತೇಲು ಸೇತುವೆ ವ್ಯವಸ್ಥೆಯನ್ನು ಕರ್ನಾಟಕ ಜಲಸಾರಿಗೆ ಮಂಡಳಿ ಮಾಡಲಿದೆ. ಸಂಪರ್ಕ ರಸ್ತೆ, ಪಾರ್ಕಿಂಗ್ ಮತ್ತು ಸುರಕ್ಷತೆ ಜವಾಬ್ದಾರಿಯನ್ನು ಲೋಕೋಪಯೋಗಿ ಇಲಾಖೆಗೆ ನೀಡಲಾಗಿದೆ. ವಿಮಾನ ಲ್ಯಾಂಡಿಂಗ್, ಇಂಧನ ಮತ್ತು ಇತರ ಲಾಜಿಸ್ಟಿಕ್ ಜವಾಬ್ದಾರಿಯನ್ನು ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕರು ನೋಡಿಕೊಳ್ಳಲಿದ್ದಾರೆ ಎಂದು ಕೆಎಸ್‌ಐಐಡಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಸೀಪ್ಲೇನ್ ಸಾರಿಗೆ ತಂತ್ರಜ್ಞರನ್ನು ಒಳಗೊಂಡ ತಂಡವು ಈಗಾಗಲೇ ದೋಣಿ ಮೂಲಕ ವೇಣುಗೋಪಾಲಸ್ವಾಮಿ ದೇವಸ್ಥಾನ ಮತ್ತು ಆನಂದೂರು ಬಳಿ ಎರಡು ಸ್ಥಳಗಳನ್ನು ಪರಿಶೀಲನೆ ನಡೆಸಲಿದೆ. ಕಾರ್ಯಾಚರಣೆಗಳಿಗೆ ಅಗತ್ಯವಾದ, 10 ಅಡಿ ಆಳದೊಂದಿಗೆ 1.5 ಕಿಲೋ ಮೀಟರ್ ಉದ್ದದ ನೀರಿನ ಪರಿಸ್ಥಿತಿ, ಆಳ ಮತ್ತು ತಾಂತ್ರಿಕ ಅಂಶಗಳ ಕುರಿತು ಕಾವೇರಿ ನೀರಾವರಿ ನಿಗಮದ ಇಂಜಿನಿಯರ್‌ಗಳಿಂದ ಮಾಹಿತಿ ಪಡೆದಿದೆ.
ಕಾರ್ಯಾಚರಣೆ ಯಶಸ್ವಿ ಆದರೆ, ಆರಂಭವಾದ ಜಲವಿಮಾನ ಸೇವೆಯಿಂದ ಸ್ಥಳೀಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸಹಕಾರಿ ಆಗುತ್ತದೆ. ವಿಶ್ವಪ್ರಸಿದ್ಧ ಬೃಂದಾವನ ಉದ್ಯಾನವು ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಮತ್ತಷ್ಟು ಆಕರ್ಷಕ ಆಗಲಿದೆ ಎಂದು ಪಾಂಡವಪುರ ತಹಶೀಲ್ದಾರ್ ಎಸ್.ಸಂತೋಷ್ ತಿಳಿಸಿದರು.












Click it and Unblock the Notifications