ಇಂದು ನಾಮಪತ್ರ ಸಲ್ಲಿಕೆಗೆ ಕೊನೇ ದಿನ: ಅಂಬರೀಶ್ ಕತೆ ಏನು?
Recommended Video

ಮಂಡ್ಯ, ಏಪ್ರಿಲ್ 24: ಕರ್ನಾಟಕ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು(ಏ.24) ಕೊನೆಯ ದಿನವಾಗಿದ್ದು, ಬಹುತೇಕ ಎಲ್ಲ ಪಕ್ಷದ ಅಭ್ಯರ್ಥಿಗಳು ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ಉಳಿದ ಕೆಲವೇ ಕೆಲವರು ಮಾತ್ರ ನಾಮಪತ್ರ ಸಲ್ಲಿಸಬೇಕಾಗಿದೆ. ಆದರೆ ಇದೀಗ ಹಳೇ ಮೈಸೂರು ವ್ಯಾಪ್ತಿಯಲ್ಲಿ ವರುಣಾ ಕ್ಷೇತ್ರ ಬಿಜೆಪಿಗೆ ತಲೆನೋವು ತಂದಿದ್ದರೆ, ಮಂಡ್ಯ ಕ್ಷೇತ್ರ ಕಾಂಗ್ರೆಸ್ ಗೆ ಆತಂಕವನ್ನುಂಟು ಮಾಡಿದೆ.
ಮಂಡ್ಯದಲ್ಲಿ ಅಂಬರೀಶ್ ಅವರ ನಡೆ ಇನ್ನೂ ನಿಗೂಢವಾಗಿಯೇ ಇದೆ. ಹೀಗಾಗಿ ಇಡೀ ಕಾಂಗ್ರೆಸ್ ನಾಯಕರು ಅಂಬಿ ಸುತ್ತ ಗಿರಕಿ ಹೊಡೆಯುವಂತಾಗಿದೆ. ಬಿ ಫಾರಂ ಪಡೆಯಲು ಕೂಡ ಹೋಗದೆ ತನ್ನ ಬಳಿಗೆ ತರಿಸಿಕೊಂಡ ಅಂಬರೀಶ್ ಇದೀಗ ನಾಮಪತ್ರ ಸಲ್ಲಿಸದೆ, ನಾಯಕರನ್ನು ಹತ್ತಿರ ಬಿಟ್ಟುಕೊಳ್ಳದೆ ತಮ್ಮ ಆಟ ಆಡುತ್ತಿದ್ದಾರೆ.

ಕೆಲವು ಮೂಲದ ಪ್ರಕಾರ ಕೆಪಿಸಿಸಿ ಅಧ್ಯಕ್ಷ ಡಾ ಜಿ ಪರಮೇಶ್ವರ್ ನಿವಾಸದಲ್ಲಿ ಸಂಧಾನ ಸಭೆ ನಡೆಸಲಾಗಿದ್ದು ಇಲ್ಲಿ ಅಂಬರೀಶ್ ಅವರ ಮನವೊಲಿಸಲಾಗಿದ್ದು, ಹೀಗಾಗಿ ಮಂಗಳವಾರ (ಏ.24) ಅಂಬರೀಶ್ ಮಂಡ್ಯದಲ್ಲಿ ನಾಮಪತ್ರ ಸಲ್ಲಿಸುತ್ತಾರೆ ಎನ್ನಲಾಗಿತ್ತು. ಆದರೆ ಅಂಬರೀಶ್ ಅವರು ತಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಆದರೆ ತಾವು ಸೂಚಿಸುವ ಅಭ್ಯರ್ಥಿಗೇ ಟಿಕೆಟ್ ನೀಡಿ ಎನ್ನುತ್ತಿದ್ದಾರೆ ಎಂಬ ವದಂತಿಯೂ ಹರಡುತ್ತಿದೆ. ಆದ್ದರಿಂದ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರುವ ಇಂದು ಮಂಡ್ಯದಲ್ಲಿ ಏನಾಗಲಿದೆ ಎಂಬುದು ಕುತೂಹಲ ಸೃಷ್ಟಿಸಿದೆ.
ಅಂಬರೀಶ್ ಹೀಗೆ ನಡೆದುಕೊಳ್ಳುತ್ತಿರುವ ಹಿಂದೆ ಕಾರಣವೂ ಇಲ್ಲದಿಲ್ಲ. ಹಿಂದೆ ಅವರನ್ನು ವಸತಿ ಖಾತೆಯಿಂದ ತೆಗೆದು ಹಾಕಲಾಗಿತ್ತು. ಇದು ಅವರಿಗೆ ನೋವನ್ನುಂಟು ಮಾಡಿತ್ತು. ಅದರ ಸೇಡನ್ನು ಈ ರೀತಿ ತೀರಿಸಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇಷ್ಟರಲ್ಲೇ ನಾಮಪತ್ರ ಸಲ್ಲಿಕೆಯಾಗಬೇಕಿತ್ತು. ಆದರೆ ಇದುವರೆಗೆ ಯಾವ ನಿರ್ಧಾರವನ್ನು ಅಂಬರೀಶ್ ಕೈಗೊಂಡಿಲ್ಲ.












Click it and Unblock the Notifications