ಸೀಟು ಹಂಚಿಕೆ ಸಮಯ ಮೊದಲು ಕೇಳುವುದೇ ಮಂಡ್ಯ ಕ್ಷೇತ್ರ: ಪುಟ್ಟರಾಜು
ಮಂಡ್ಯ, ಫೆಬ್ರವರಿ 22: ಲೋಕಸಭೆ ಚುನಾವಣೆಗೆ ಜೆಡಿಎಸ್-ಕಾಂಗ್ರೆಸ್ ಸೀಟು ಹಂಚಿಕೆ ಸಮಯದಲ್ಲಿ ಜೆಡಿಎಸ್ ಪಕ್ಷವು ಮೊದಲು ಕೇಳುವ ಕ್ಷೇತ್ರವೇ ಮಂಡ್ಯ ಎಂದು ಸಚಿವ ಪುಟ್ಟರಾಜು ಹೇಳಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್ ಅವರು ಸ್ಪರ್ಧಿಸಬೇಕು ಎಂಬ ಒತ್ತಾಯ ಕೇಳಿಬಂದಿದ್ದು, ಸುಮಲತಾ ಅವರು ಸಹ ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಕೇಳಿದ್ದಾರೆ. ಆದರೆ ಇದಕ್ಕೆ ಜೆಡಿಎಸ್ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿರುವ ಜೆಡಿಎಸ್ ಸಚಿವ ಪುಟ್ಟರಾಜು ಅವರು, ಸೀಟು ಹಂಚಿಕೆ ಸಂದರ್ಭ ನಾವು ಮೊದಲು ಕೇಳುವ ಕ್ಷೇತ್ರವೇ ಮಂಡ್ಯ ಎಂದು ಹೇಳಿದ್ದಾರೆ. ಪುಟ್ಟರಾಜು ಅವರ ಮಾತನ್ನು ಪರಿಗಣಿಸುವುದಾದರೆ ಮಂಡ್ಯ ಕ್ಷೇತ್ರ ವಿಚಾರವಾಗಿ ಜೆಡಿಎಸ್-ಕಾಂಗ್ರೆಸ್ ನಡುವೆ ಭಿನ್ನಮತ ಉಂಟಾಗುವ ಸಾಧ್ಯತೆ ದಟ್ಟವಾಗಿದೆ.
ಮಂಡ್ಯ ಲೋಕಸಭೆ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಜೆಡಿಎಸ್ ಶಾಸಕರಿದ್ದಾರೆ, ಮೂವರು ಸಚಿವರಿದ್ದೇವೆ ಹಾಗಿದ್ದ ಮೇಲೆ ಈ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಹೇಗೆ ಬಿಟ್ಟುಕೊಡಲು ಸಾಧ್ಯ ಎಂದು ಪುಟ್ಟರಾಜು ಪ್ರಶ್ನೆ ಮಾಡಿದ್ದಾರೆ.

ಮಂಡ್ಯದಿಂದ ನಿಖಿಲ್ ಅಥವಾ ದೇವೇಗೌಡರು ಸ್ಪರ್ಧೆ
ಸುಮಲತಾ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ವಿಚಾರ ಪ್ರತಿಕ್ರಿಯಿಸಲು ನಿರಾಕರಿಸಿದ ಪುಟ್ಟರಾಜು, ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ನಿಖಿಲ್ ಕುಮಾರಸ್ವಾಮಿ ಅಥವಾ ದೇವೇಗೌಡ ಅವರನ್ನು ಕರೆತರಬೇಕು ಎಂಬ ಒತ್ತಡ ಇದೆ, ಇದನ್ನು ಜೆಡಿಎಸ್ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಣಯ ಮಾಡಲಾಗುವುದು ಎಂದು ಹೇಳಿದ್ದಾರೆ.

ಸುಮಲತಾ ರಾಜಕೀಯ ಪ್ರವೇಶದಿಂದ ಎಚ್‌ಡಿಕೆಗೆ ಪೆಟ್ಟು
ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಅವರನ್ನು ಮಂಡ್ಯ ಲೋಕಸಭೆ ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಇಳಿಸಬೇಕು ಎಂಬುದು ಕುಮಾರಸ್ವಾಮಿ ಅವರ ಇಂಗಿತವಾಗಿದೆ. ಆದರೆ ಸುಮಲತಾ ಅವರ ರಾಜಕೀಯ ಪ್ರವೇಶದಿಂದ ಇದಕ್ಕೆ ಪೆಟ್ಟು ಬೀಳುತ್ತಿದೆ.

ಮಂಡ್ಯದಲ್ಲಿ ಫೇಸ್‌ಬುಕ್ ವಾರ್
ಮಂಡ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಫೇಸ್‌ಬುಕ್ ವಾರ್ ಶುರುವಾಗಿದ್ದು, ಶಕ್ತಿ ಇದ್ದರೆ ಸುಮಲತಾ ಎದುರು ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಿಕೊಳ್ಳಿ ಪುಟ್ಟರಾಜು ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಸವಾಲು ಹಾಕುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಕ್ಷೇತ್ರದ ಎಂಟೂ ವಿಧಾನಸಭೆ ಜೆಡಿಎಸ್ ಇದೆ, ಲೋಕಸಭೆಯಲ್ಲೂ ಜೆಡಿಎಸ್‌ನದ್ದೇ ಹವಾ ಇರಲಿದೆ ಎನ್ನುತ್ತಿದ್ದಾರೆ.

ಸಿದ್ದರಾಮಯ್ಯರ ಭೇಟಿ ಆಗಿದ್ದ ಸುಮಲತಾ
ಮೊನ್ನೆ ಸಿದ್ದರಾಮಯ್ಯ ಅವರನ್ನು ಭೇಟಿ ಆಗಿದ್ದ ಸುಮಲತಾ ಅಂಬರೀಶ್ ಅವರು ಮಂಡ್ಯ ಕ್ಷೇತ್ರವನ್ನು ಕಾಂಗ್ರೆಸ್ ಉಳಿಸಿಕೊಳ್ಳಬೇಕೆಂದು ಹಾಗೂ ಆ ಟಿಕೆಟ್ ತಮಗೆ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಸುಮಲತಾ ಅವರು ಚುನಾವಣೆಗೆ ಸ್ಪರ್ಧಿಸಬೇಕು ಎಂಬ ಒತ್ತಡ ಹೆಚ್ಚಾಗಿದ್ದು, ಕಾಂಗ್ರೆಸ್ ಟಿಕೆಟ್ ಸಿಗದೇ ಹೋದಲ್ಲಿ ಪಕ್ಷೇತರವಾಗಿಯಾದರೂ ಸ್ಪರ್ಧಿಸುವ ಸಾಧ್ಯತೆ ಇದೆ.












Click it and Unblock the Notifications