ನೀರಿನ ಸಂರಕ್ಷಣೆ ಬಗ್ಗೆ ಚಿಂತಿಸುವುದು ಅಗತ್ಯ: ತಿವೇಣಿ ಸಂಗಮ ಕುಂಭಮೇಳದಲ್ಲಿ ಡಾ. ವೀರೇಂದ್ರ ಹೆಗ್ಗಡೆ
ಮಂಡ್ಯ, ಅಕ್ಟೋಬರ್ 15: ಜೀವನಾಡಿಯಾಗಿರುವ ನೀರನ್ನು ಪೂಜಿಸಿ ಸಂರಕ್ಷಿಸುವುದರ ಜೊತೆಗೆ ನೀರಿನ ಬೆಲೆಯನ್ನೂ ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ರಾಜ್ಯಸಭಾ ಸದಸ್ಯ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವಿರೇಂದ್ರ ಹೆಗ್ಗಡೆ ಸಲಹೆ ನೀಡಿದರು.
ಜಿಲ್ಲಾಡಳಿತದ ವತಿಯಿಂದ ಕೆ.ಆರ್. ಪೇಟೆ ತಾಲೂಕು ಅಂಬಿಗರಹಳ್ಳಿಯ ತ್ರಿವೇಣಿ ಸಂಗಮದಲ್ಲಿ ಆಯೋಜಿಸಲಾಗಿದ್ದ ಮಹಾ ಕುಂಭಮೇಳ ಉದ್ಘಾಟಿಸಿ ಮಾತನಾಡಿದ ಅವರು, "ನೀರನ್ನು ಕೃಷಿ, ಕೈಗಾರಿಕೆ, ಪ್ರತಿನಿತ್ಯದ ಕೆಲಸಕ್ಕೆ ಬೇಕು. ಅನಾವೃಷ್ಠಿಯನ್ನು ಅನುಭವಿಸಿದ ಸಂದರ್ಭದಲ್ಲಿ ಪ್ರತಿ ಹನಿ ನೀರಿನ ಬೆಲೆ ತಿಳಿದಿದೆ. ಪ್ರತಿ ದಿನ ನಲ್ಲಿಯಲ್ಲಿ ಸದಾ ಸರಬರಾಜು ಆಗುತ್ತಿದ್ದ ನೀರು ನಿಗಧಿತ ಸಮಯಕ್ಕೆ ಸೀಮಿತವಾಗುತ್ತಿದೆ. ಇದು ನೀರನ್ನು ಉಳಿಸಿ ಎಂದು ಪರಿಸರ ನಮಗೆ ನೀಡಿರುವ ಎಚ್ಚರಿಕೆ ಗಂಟೆ. ಈ ಬಗ್ಗೆ ಗಂಭೀರ ಚಿಂತನೆ ನಡೆಸುವುದು ಅಗತ್ಯ," ಎಂದು ಪ್ರತಿಪಾದಿಸಿದರು.
ಬಹಳಷ್ಟು ವಸ್ತುಗಳು ನಮ್ಮ ಜೀವನದಲ್ಲಿ ಸಹಕರಿಯಾಗಿರುತ್ತದೆ. ಆಯುಧ ಪೂಜೆಯಲ್ಲಿ ಆಯುಧಗಳು ಹಾಗೂ ಮನೆಯಲ್ಲಿ ಉಪಯೋಗಿಸುವ ವಸ್ತುಗಳಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ಅದೇ ರೀತಿ ನೀರಿಗೂ ವಿಶೇಷ ಮಾನ್ಯ ನೀಡಿ ಸಂರಕ್ಷಿಸುವ ಕೆಲಸ ಆಗಬೇಕು. ಕೆ.ಆರ್.ಪೇಟೆಯಲ್ಲಿ ಕಾವೇರಿ, ಲಕ್ಷ್ಮಣ ತೀರ್ಥ ಹಾಗೂ ಹೇಮಾವತಿ ನದಿಗಳು ಸೇರಿ ತ್ರಿವೇಣಿ ಸಂಗಮವಾಗಿದೆ. ಇಲ್ಲಿ ನೀರನ್ನು ಪೂಜಿಸಿ, ಅರಾಧಿಸಲು ಕುಂಭ ಮೇಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಲ್ಲಿ ಪುಣ್ಯ ಸ್ನಾನ ಮಾಡಿ ಕರೆ ನೀಡಿದರು.

ಇದೇ ವೇಳೆ ರೇಷ್ಮೆ, ಯುಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಚಿವ ಡಾ.ಕೆ.ಸಿ. ನಾರಾಯಣ ಗೌಡ ಅವರು ಮಾತನಾಡಿ, ಕಾವೇರಿ, ಹೇಮಾವತಿ, ಲಕ್ಷ್ಮಣತೀರ್ಥ ಮೂರು ನದಿಗಳು ಸಮಾಗಮವಾಗುವ ಈ ತ್ರಿವೇಣಿ ಸಂಗಮದಲ್ಲಿ ಜಗದ್ಗುರುಗಳ ದಿವ್ಯ ಸಾನಿಧ್ಯ ದಲ್ಲಿ ಮಹಾ ಕುಂಭಮೇಳ ಆಚರಣೆಯನ್ನು ಮಾಡುತ್ತಿದ್ದೇವೆ ಎಂದರು.
ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಹಾಗೂ ಇನ್ನಿತರ ಜಿಲ್ಲೆಗಳಿಂದ ಭಕ್ತಾಧಿಗಳು ಮಹಾ ಕುಂಭ ಮೇಳದಲ್ಲಿ ಪಾಲ್ಗೊಂಡು ಶ್ರೀ ಮಲೈ ಮಹದೇಶ್ವರ ಸ್ವಾಮಿಗೆ ಪೂಜೆಯನ್ನು ಸಲ್ಲಿಸಿ ಪುಣ್ಯ ಸ್ನಾನವನ್ನು ಮಾಡಿ ಅದರ ಲಾಭವನ್ನು ಭಕ್ತಾಧಿಗಳು ಪಡೆದುಕೊಳ್ಳಿ ಎಂದು ತಿಳಿಸಿದರು.

ದಕ್ಷಿಣ ಕರ್ನಾಟಕದಲ್ಲಿ ಮೂರು ನದಿಗಳು ಸಂಗಮವಾಗಿದೆ ಎಂದರೆ ಅದು ಕೆ.ಆರ್.ಪೇಟೆಯ ತ್ರಿವೇಣಿ ಸಂಗಮದಲ್ಲಿ. ಹಾಗಾಗಿ ಈ ಸ್ಥಳ ಮುಂದಿನ ದಿನಮಾನದಲ್ಲಿ ದೊಡ್ಡ ತೀರ್ಥ ಸ್ಥಾನವಾಗಿ ಬೆಳೆಯಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದೆ. ಇದಕ್ಕೆ ಜಗದ್ಗುರುಗಳ ಸಹಕಾರ ನೀಡಬೇಕು. ಮಹಾ ಕುಂಭಮೇಳ ಮಹೋತ್ಸವಕ್ಕೆ ಆಗಮಿಸಿರುವ ಎಲ್ಲಾ ಭಕ್ತಾದಿಗಳಿಗೂ ಧನ್ಯವಾದಗಳನ್ನು ತಿಳಿಸಿದರು.












Click it and Unblock the Notifications