ಮಂಡ್ಯ: ಮೂವರು ಮಕ್ಕಳೊಂದಿಗೆ ಗೃಹಿಣಿ ಆತ್ಮಹತ್ಯೆ
ಮಂಡ್ಯ, ಡಿ.02 : ಗಂಡ ಮತ್ತೋಬ್ಬ ಮಹಿಳೆ ಜೊತೆಗೆ ಸಂಬಂಧವಿರಿಸಿಕೊಂಡಿದ್ದಾರೆ ಎಂದು ಪತ್ನಿ ತನ್ನ ಮೂವರು ಮಕ್ಕಳಿಗೆ ವಿಷಪ್ರಾಶನ ಮಾಡಿಸಿ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಮದ್ದೂರು ಪಟ್ಟಣದ ಹೊಳೆಬೀದಿಯ ಮನೆಯೊಂದರಲ್ಲಿ ಗುರುವಾರ ರಾತ್ರಿ ನಡೆದಿದೆ.
ಮೃತರನ್ನು ಉಸ್ನಾ ಕೌಸರ್ (30) ಎಂಬುವವರು ತನ್ನ ಮಕ್ಕಳಾದ ಹ್ಯಾರಿಸ್ ಅಹಮದ್ (8), ಪುತ್ರಿಯರಾದ ಅನಂ ಾತೀಮಾ (4), ಆಲೀಜಾ ಅಹಮದ್ (2) ಎಂದು ಗುರುತಿಸಲಾಗಿದೆ. ಆಕೆಯ ಗಂಡ ಅಖೀಲ್ ಅಹಮದ್ ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಕಾರ್ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಕುಟುಂಬ ಮಹಾವೀರ ಟಾಕೀಸ್ ಹಿಂಭಾಗದ ದರ್ಗಾ ಪಕ್ಕದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿತ್ತು.
ಪೋಕ್ಸೋ ಪ್ರಕರಣದಲ್ಲಿ ನಿರಪರಾಧಿಯ ಬಂಧನ: ಇಬ್ಬರು ಮಹಿಳಾ ಪೊಲೀಸರಿಗೆ ದಂಡ
ಮೃತ ಮಹಿಳೆಯ ತಾಯಿ ಬಿಬಿಜಾನ್ ದೂರು ನೀಡಿದ್ದಾರೆ. ದೂರಿನ ಹಿನ್ನೆಲೆ ಪೋಲೀಸರು ಉಸ್ನಾ ಕೌಸರ್ ಪತಿ ಅಖೀಲ್ ಅಹಮದ್ ಆತನ ತಾಯಿ ಮಕ್ಮುಲ್ ಜಾನ್ ತಂದೆ ಖಲೀಲ್ ಅಹಮದ್ ಅಣ್ಣ ಖೀಜಲ್ ಸಂಬಂಧಿಕರಾದ ಪಾಲ್ ಕಿನ್ ಹಾಗೂ ಸೈಯೀದಾ ಎಂಬುವವರ ಮೇಲೆ ಐಪಿಸಿ 302 ಹಾಗೂ 34 ರ ಅನ್ವಯ ಪ್ರಕರಣ ದಾಖಲಿಸಿದ್ದಾರೆ. ಆಕೆಯ ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ದಂಪತಿ ನಡುವೆ ಪದೇ ಪದೇ ಜಗಳ
ತುಮಕೂರು ಮೂಲದ ಉಸ್ನಾ ಕೌಸರ್‌ರನ್ನು ಅಖೀಲ್ ಅಹಮದ್ 9 ವರ್ಷಗಳ ಹಿಂದೆ ವಿವಾಹವಾಗಿದ್ದರು. ವಿವಾಹದ ನಂತರ ಉಸ್ನಾ ಮದ್ದೂರು ಮೆಡಿಕಲ್ ಸೆಂಟರ್‌ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು.
ಪತಿ ಪರಸಿಯೊಂದಿಗೆ ಅಕ್ರಮ ಸಂಬಂಧ ಹೊಂದಿದೆ ಎಂದು ಆರೋಪಿಸಿ ದಂಪತಿ ನಡುವೆ ಪದೇ ಪದೇ ಜಗಳ ನಡೆಯುತ್ತಿತ್ತು. ಇದೇ ಕಾರಣಕ್ಕೆ ಬೇಸತ್ತ ಉಸ್ನಾ ಕೌಸರ್ ನರ್ಸ್ ಕೆಲಸ ಬಿಟ್ಟಿದ್ದರು. ಆ ನಂತರ ಇಬ್ಬರು ಕುಟುಂಬದವರು ದಂಪತಿ ನಡುವಿನ ಮನಸ್ತಾಪ ಬಗೆಹರಿಸಿ ಒಂದುಗೂಡಿಸುವ ಪ್ರಯತ್ನ ಮಾಡಿದ್ದರು. ಅದು ವಿಫಲವಾಗಿತ್ತು.

ಮೂವರು ಮಕ್ಕಳಿಗೆ ವಿಷವಿಕ್ಕಿದ ತಾಯಿ
ಉಸ್ನಾ ಕೌಸರ್‌ನ ಮೂವರು ಮಕ್ಕಳಲ್ಲಿ ಹ್ಯಾರಿಸ್ ಅಹಮದ್ ಖಾಸಗಿ ಶಾಲೆಯಲ್ಲಿ 2 ನೇ ತರಗತಿ ಓದುತ್ತಿದ್ದನು. ಉಳಿದಿಬ್ಬರು ಮಕ್ಕಳು ಮನೆಯಲ್ಲೇ ಇದ್ದರು. ಗುರುವಾರ ಮಗ ಹ್ಯಾರಿಸ್ ಅಹಮದ್ ನನ್ನು ಶಾಲೆಗೆ ಕಳುಹಿಸದೆ ಮನೆಯಲ್ಲೇ ಉಳಿಸಿಕೊಂಡಿದ್ದ ಉಸ್ನಾ ಕೌಸರ್ ಸಂಜೆ 3 ಮಕ್ಕಳಿಗೆ ವಿಷಪ್ರಾಶನ ಮಾಡಿಸಿ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗುರುವಾರ ಸಂಜೆ ಉಸ್ನಾ ತಾಯಿ ಮನೆಗೆ ಬಂದಾಗ ತಾಯಿ ಮಕ್ಕಳು ಇಬ್ಬರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಪತ್ನಿ ಮತ್ತು ಮಕ್ಕಳು ಆತ್ಮಹತ್ಯೆ ವಿಚಾರ ತಿಳಿದು ಅಖೀಲ್ ಅಹಮದ್ ಸಹ ಚನ್ನಪಟ್ಟಣದಿಂದ ಮನೆಗೆ ಬಂದಿದ್ದಾನೆ. ಮೃತರ ಶವಗಳ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಘಟನಾ ಸ್ಥಳಕ್ಕೆ ಪೋಲಿಸ್ ವರಿಷ್ಠಾಧಿಕಾರಿ ಭೇಟಿ, ಪರಿಶೀಲನೆ
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಮದ್ದೂರು ಠಾಣೆಯ ಇನ್ಸ್‌ಪೆಕ್ಟರ್ ಸಂತೋಷ್, ಪಿಎಸ್‌ಐ ಆರ್.ಬಿ.ಉಮೇಶ್ ಹಾಗೂ ಸಿಬ್ಬಂದಿ ಮೃತರ ಶವಗಳನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ಸಾಗಿಸಲು ಕ್ರಮ ಕೈಗೊಂಡರು.
ಬಳಿಕ ಮಂಡ್ಯ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎನ್.ಯತೀಶ್ ಶುಕ್ರವಾರ ಮೃತರ ಮನೆ ಹಾಗೂ ಮಂಡ್ಯ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೈಸೂರಿನ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರಾದ ಕೃತಿಕ ಹಾಗೂ ಭಾರ್ಗವಿ, ಡಿವೈಎಸ್ಪಿ ನವೀನ್ ಕುಮಾರ್, ಮದ್ದೂರು ಠಾಣೆಯ ಪಿಎಸ್‌ಐ ಉಮೇಶ್, ಸಿದ್ದರಾಜು ಅವರುಗಳು ದುರಂತ ನಡೆದ ಮನೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಆತ್ಮಹತ್ಯೆಗೆ ಪತಿ ಅಖಿಲ್ ಕಾರಣ-ಆರೋಪ
ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಪಿ. ಎನ್.ಯತೀಶ್, ಮೃತಳ ತಾಯಿ ಬಿಬಿಜಾನ್ ಕೊಲೆ ಶಂಕೆ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ಮೃತರ ಮರಣೋತ್ತರ ಪರೀಕ್ಷೆ ಬಳಿಕ ವೈದ್ಯರಿಂದ ಸಾವಿನ ನಿಖರ ಮಾಹಿತಿ ಪಡೆದುಕೊಂಡು ಪ್ರಕರಣ ತನಿಖೆ ನಡೆಸಿದ ನಂತರ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
"ನನ್ನ ಅಕ್ಕ ಉಸ್ನಾ ಕೌಸರ್ ಮತ್ತು ಆಕೆಯ ಮಕ್ಕಳ ಆತ್ಮಹತ್ಯೆಗೆ ಪತಿ ಅಖೀಲ್ ಅಹಮದ್‌ಗೆ ಪರಸಿಯೊಂದಿಗಿನ ಅಕ್ರಮ ಸಂಬಂಧವೇ ಕಾರಣ" ಎಂದು ಉಸ್ನಾ ತಂಗಿ ರುಕ್ಸಾನ ಗಂಭೀರ ಆರೋಪ ಮಾಡಿದ್ದಾರೆ.
ತನ್ನ ಅಕ್ಕನ ಮದುವೆಗೂ ಮುನ್ನ ಅಖೀಲ್ ಅಹಮದ್ ಪ್ರೇಯಸಿಯೊಂದಿಗೆ ಅಕ್ರಮ ಸಂಬಂಧವಿತ್ತು. ಈ ಬಗ್ಗೆ ದಂಪತಿಗಳ ನಡುವೆ ಗಲಾಟೆ ಆಗುತ್ತಿತ್ತು. ಆತ ಆಕೆಯನ್ನು ಸರಿಯಾದ ರೀತಿಯಲ್ಲಿ ನೋಡಿ ಕೊಳ್ಳುತ್ತಿರಲಿಲ್ಲ. ತನ್ನ ಪ್ರೇಯಸಿಯನ್ನು ಮನೆಗೆ ಕರೆತರುವ ಉದ್ದೇಶದಿಂದ ಪತ್ನಿ ಮತ್ತು ಮಕ್ಕಳನ್ನು ಅಖೀಲ್ ಅಹಮದ್ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿದ್ದಾನೆ ಎಂದು ರುಕ್ಸಾನ ಆರೋಪ ಮಾಡಿದ್ದಾರೆ.