ಮಂಡ್ಯದಲ್ಲಿ ಭಾರಿ ಮಳೆ; ಕಾರಿನ ಮೇಲೆ ಮರ ಬಿದ್ದು ವ್ಯಕ್ತಿ ಸಾವು
ಭಾರಿ ಬಿರುಗಾಳಿ ಮಳೆಯಿಂದಾಗಿ ಮರವೊಂದು ಕಾರಿನ ಮೇಲೆ ಬಿದ್ದ ಪರಿಣಾಮ ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಡ್ಯ ನಗರದ ಜನರಲ್ ಆಸ್ಪತ್ರೆ ರಸ್ತೆಯಲ್ಲಿ ನಡೆದಿದೆ. ತಾಲೂಕಿನ ಜಿ. ಬೊಮ್ಮನಹಳ್ಳಿ ಗ್ರಾಮದ ಕಾರ್ತಿಕ್ (28) ಎಂಬಾತನೇ ಮೃತಪಟ್ಟ ದುರ್ದೈವಿಯಾಗಿದ್ದು, ಈತನ ಇನ್ನಿಬ್ಬರು ಸ್ನೇಹಿತರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಾಳೆ ಕಾರ್ತಿಕ್‌ನ ಹುಟ್ಟುಹಬ್ಬ ಇದ್ದ ಕಾರಣ ಮಾರುತಿ ಕಾರಿನಲ್ಲಿ ತನ್ನಿಬ್ಬರು ಸ್ನೇಹಿತರೊಂದಿಗೆ ನಗರಕ್ಕೆ ಬಟ್ಟೆ ಖರೀದಿಸಲು ಬಂದಿದ್ದರು. ಮಳೆ ಪ್ರಾರಂಭವಾದ ಕಾರಣ ರಸ್ತೆ ಬದಿಯ ಮರದ ಕೆಳಗೆ ಕಾರನ್ನು ನಿಲ್ಲಿಸಿದ್ದರು. ಭಾರಿ ಬಿರುಗಾಳಿ ಮಳೆಗೆ ಮರ ಕಾರಿನ ಮಧ್ಯ ಭಾಗಕ್ಕೆ ಬಿದ್ದಿತ್ತು. ಹಿಂದೆ ಕುಳಿತಿದ್ದ ಕಾರ್ತೀಕ್ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮುಂದಿನ ಸೀಟಿನಲ್ಲಿ ಕುಳಿತಿದ್ದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದರು. ಕಾರಿನೊಳಗಿದ್ದ ಕಾರ್ತೀಕ್‌ನ ಶವವನ್ನು ಹೊರತೆಗೆದು ಆಸ್ಪತ್ರೆಗೆ ರವಾನಿಸಿದರು.
ಮಂಡ್ಯದಲ್ಲಿ ಬಿರುಗಾಳಿ ಮಳೆ
ಸೋಮವಾರ ರಾತ್ರಿ 8.30ರ ಸಮಯದಲ್ಲಿ ಭಾರಿ ಬಿರುಗಾಳಿಯೊಂದಿಗೆ ಪ್ರಾರಂಭವಾದ ಮಳೆ ಬರುಬರುತ್ತಾ ಹೆಚ್ಚಾಗತೊಡಗಿತ್ತು. ಅದರೊಂದಿಗೆ ಗಾಳಿಯೂ ಅಧಿಕ ಪ್ರಮಾಣವಾಗಿದ್ದ ಕಾರಣ ರಸ್ತೆ ಬದಿಯಲ್ಲಿದ್ದ ಮರಗಳು ಉರುಳಿಬಿದ್ದವು.
ಅಶೋಕನಗರದ ವಿವೇಕಾನಂದ ರಸ್ತೆ, ಆಸ್ಪತ್ರೆ ರಸ್ತೆ, ನೂರಡಿ ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಮರಗಳು ಉರುಳಿಬಿದ್ದವು. ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದ ಪರಿಣಾಮ ವಿದ್ಯುತ್ ತಂತಿ ತುಂಡಾದವು.
ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದನ್ನು ಗಮನಿಸಿದ ಬಸ್ ಚಾಲಕ ತಕ್ಷಣ ಬಸ್ ನಿಲ್ಲಿಸಿ ಹಿಂದಕ್ಕೆ ಬಂದ ಕಾರಣ ಅನಾಹುತವಾಗಲಿಲ್ಲ. ಇದರೊಂದಿಗೆ ವಿದ್ಯುತ್ ಸಹ ಸ್ಥಗಿತಗೊಂಡಿತ್ತು. ಮಂಡ್ಯದಿಂದ ಬನ್ನೂರಿಗೆ ತೆರಳುತ್ತಿದ್ದ ಸಾರಿಗೆ ಬಸ್ಸಿನಲ್ಲಿ ತುಂಬಾ ಪ್ರಯಾಣಿಕರಿದ್ದು, ಬಿರುಗಾಳಿ ಮಳೆಗೆ ಮರ ಬಿದ್ದ ಕಾರಣ ಮುಂದಕ್ಕೆ ಹೋಗಲಾಗಲಿಲ್ಲ. ಹಿಂದೆಯೂ ಒಂದು ಮರ ಬಿದ್ದಿದ್ದರಿಂದ ಹಿಂದೆಯೂ ಚಲಿಸಲಾಗದಿ ಮಧ್ಯದಲ್ಲಿ ನಿಲ್ಲುವ ಪರಿಸ್ಥಿತಿ ಉಂಟಾಯಿತು. ಮತ್ತೊಂದು ಬಸ್ಸಿಗೂ ಇದೇ ರೀತಿಯ ತೊಂದರೆಯಾಗಿತ್ತು.
ಹೊಟೇಲ್ ಮುಂಭಾಗದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳು ಜಖಂಗೊಂಡಿವೆ. ಘಟನೆಯಿಂದಾಗಿ ಸಂಚಾರ ಅಸ್ತವ್ಯಸ್ತವಾಗಿತ್ತು. ದೂರದೂರುಗಳಿಗೆ ಹೋಗಬೇಕಾದ ಪ್ರಯಾಣಿಕರು ಪರದಾಡುವಂತಾಗಿತ್ತು. ಉಳಿದಂತೆ ನಗರದ ಬಹುತೇಕ ಕಡೆಗಳಲ್ಲಿ ಮರಗಳು ಬಿದ್ದಿವೆ, ವಿದ್ಯುತ್ ತಂತಿಗಳು ತುಂಡಾಗಿವೆ.
ಅಪಾರ ಬೆಳೆ ಹಾನಿ
ಭಾರೀ ಬಿರುಗಾಳಿಯೊಂದಿಗೆ ಸುರಿದ ಮಳೆಯಿಂದಾಗಿ ಮಳವಳ್ಳಿ ತಾಲ್ಲೂಕಿನ ಹಲಗೂರು ಹಲಗೂರು ಹೋಬಳಿ ವ್ಯಾಪ್ತಿಯ ಬಾಳೆಹೊನ್ನಿಗ ಗ್ರಾಮದ ನೂರಾರು ರೈತರಿಗೆ ಆಸರೆಯಾಗಿದ್ದ ವೀಳ್ಯೆದೆಲೆ ತೋಟ ನಾಶವಾಗಿ, ಕೋಟ್ಯಂತರ ರೂಪಾಯಿ ನಷ್ಟವಾಗಿದೆ.
ಭಾರೀ ಬಿರುಗಾಳಿಗೆ ನಲುಗಿದ ವೀಳ್ಯೆದೆಲೆ ತೋಟಕ್ಕೆ ಆಸರೆಯಾಗಿದ್ದ ಮರಗಿಡಗಳು ಮುರಿದುಬಿದ್ದು ಅಪಾರ ಪ್ರಮಾಣದ ನಷ್ಟವುಂಟಾಗಿದೆ. ಗ್ರಾಮದ ನೂರಾರು ಮಂದಿ ರೈತರು, ವೀಳ್ಯೆದೆಲೆ ಬೇಸಾಯವನ್ನೇ ನಂಬಿ ಜೀವನ ಸಾಗಿಸುತ್ತಿದ್ದರು. ಎಲೆ ಕಟಾವು ಹಂತಕ್ಕೆ ಬರಲು ಸುಮಾರು 2 ವರ್ಷಗಳ ಅವಧಿ ಬೇಕಾಗುತ್ತದೆ. ಫಸಲಿಗೆ ಬಂದಿದ್ದ ತೋಟ ನಾಶವಾಗಿರುವ ಹಿನ್ನೆಲೆಯಲ್ಲಿ ಪ್ರತಿ ರೈತನಿಗೆ ಲಕ್ಷಾಂತರ ರೂ. ನಷ್ಟ ಉಂಟಾಗಿದ್ದು, ತಲೆ ಮೇಲೆ ಕೈ ಹೊತ್ತು ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ.












Click it and Unblock the Notifications