ಕೆರಗೋಡು ಧ್ವಜ ವಿವಾದ: ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ಆರೋಪ; ಸಿ.ಟಿ.ರವಿ ವಿರುದ್ಧ ದೂರು ದಾಖಲು
ಮಂಡ್ಯ, ಜನವರಿ 31: ಕೆರಗೋಡಿನ ಹನುಮ ಧ್ವಜ ವಿವಾದ ರಾಜಕೀಯ ಸ್ವರೂಪ ಪಡೆದಿದೆ. ಇದೇ ವೇಳೆ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡ ಹಾಗೂ ಮಳವಳ್ಳಿ ಶಾಸಕ ಪಿಎಂ ನರೇಂದ್ರ ಸ್ವಾಮಿ ಅವರು ಬಿಜೆಪಿ ನಾಯಕ ಸಿಟಿ ರವಿ ವಿರುದ್ಧ ಮಂಗಳವಾರ ದೂರು ದಾಖಲಿಸಿದ್ದಾರೆ.
ಕೆರಗೋಡಿನಲ್ಲಿ ಧ್ವಜಸ್ತಂಭದಿಂದ ಹನುಮ ಧ್ವಜವನ್ನು ಮಂಡ್ಯ ಜಿಲ್ಲಾ ಅಧಿಕಾರಿಗಳು ತೆಗೆದಿರುವ ಬಗ್ಗೆ ಸೋಮವಾರ ಪ್ರತಿಕ್ರಿಯಿಸಿದ್ದ ಮಾಜಿ ಸಚಿವ ಸಿ.ಟಿ.ರವಿ, "ಇಂದು ಕಾಂಗ್ರೆಸ್ ಹನುಮ ಧ್ವಜವನ್ನು ತೆಗೆದು ತಾಲಿಬಾನ್ ಧ್ವಜವನ್ನು ಸ್ಥಾಪಿಸಲು ಬಯಸಿದೆ. ನಾವು ಇಂದು ಹನುಮ ಧ್ವಜವನ್ನು ಮತ್ತೆ ಹಾರಿಸುತ್ತೇವೆ, ತಾಲಿಬಾನ್ ಧ್ವಜಗಳ ಕಾಲ ಮುಗಿದಿದೆ" ಎಂದು ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು.

ಸಿಟಿ ರವಿ ವಿರುದ್ಧ ಮಳವಳ್ಳಿ ಶಾಸಕರ ದೂರು!
ಸಿ.ಟಿ.ರವಿ ಅವರ 'ತಾಲಿಬಾನ್ ಧ್ವಜ' ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಸೋಮವಾರಮಂಡ್ಯದ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಅವರಿಗೆ ದೂರು ಸಲ್ಲಿಸಿದ್ದಾರೆ. ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.
ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ 108 ಅಡಿ ಎತ್ತರದ ಧ್ವಜಸ್ತಂಭದಲ್ಲಿದ್ದ ಹನುಮಂತನ ಚಿತ್ರವಿರುವ ಕೇಸರಿ ಧ್ವಜವನ್ನು ಭಾನುವಾರ ತೆಗೆಸಿದ್ದರು. ಧ್ವಜಸ್ತಂಭ ನಿರ್ಮಿಸಿದ ಶ್ರೀ ಗೌರಿ ಶಂಕರ ಸೇವಾ ಟ್ರಸ್ಟ್‌ಗೆ ರಾಷ್ಟ್ರ ತ್ರಿವರ್ಣ ಧ್ವಜ ಅಥವಾ ಕನ್ನಡ ಧ್ವಜಾರೋಹಣ ಮಾಡಲು ಮಾತ್ರ ಅನುಮತಿ ನೀಡಲಾಗಿದೆ ಎಂದು ಸ್ಥಳೀಯ ಗ್ರಾಮ ಪಂಚಾಯಿತಿ ತಿಳಿಸಿತ್ತು. ಆದರೆ, ಹನುಮ ಧ್ವಜವನ್ನು ಮತ್ತೆ ಹಾರಿಸಬೇಕು ಎಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಜನತಾ ದಳ-ಜಾತ್ಯತೀತ (ಜೆಡಿಎಸ್) ಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ್ದರು.
ಬಿಜೆಪಿ, ಆರ್‌ಎಸ್‌ಎಸ್ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ
ಈ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಮಂಗಳವಾರ ಬಿಜೆಪಿ ನಾಯಕರು ಮತ್ತು ಆರ್‌ಎಸ್‌ಎಸ್ ಧರ್ಮ ಮತ್ತು ಪಕ್ಷವನ್ನು ರಾಷ್ಟ್ರಕ್ಕಿಂತ ಹೆಚ್ಚು ಎನ್ನುತ್ತಾರೆ ಎಂದು ಆರೋಪಿಸಿದ್ದಾರೆ. "ಬಿಜೆಪಿ ಮತ್ತು ಅವರ ಯಜಮಾನ ಆರ್‌ಎಸ್‌ಎಸ್‌ಗೆ ಅದು ಯಾವಾಗಲೂ ಸ್ವಯಂ, ಸಂಘಟನೆ, ಪಕ್ಷ ಮತ್ತು ಧರ್ಮವು ರಾಷ್ಟ್ರಕ್ಕಿಂತ ಹೇಚ್ಚು ಎಂಬುದು ಅತ್ಯಂತ ಸ್ಪಷ್ಟವಾಗಿದೆ" ಎಂದು ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ.

"ಸಂವಿಧಾನ ಸಭೆಯ ಅಂತಿಮ ಭಾಷಣದಲ್ಲಿ, ಬಾಬಾಸಾಹೇಬ್ ಅಂಬೇಡ್ಕರ್ ಅವರು ರಾಷ್ಟ್ರಕ್ಕಿಂತ ಧರ್ಮಕ್ಕೆ ಆದ್ಯತೆ ನೀಡುವ ಬಗ್ಗೆ ಮಾತನಾಡಿದರು. ಈ ಬಗ್ಗೆ ನಮಗೆ ಎಚ್ಚರಿಕೆ ನೀಡಿದರು" ಎಂದು ಪ್ರಿಯಾಂಕ್ ಖರ್ಗೆ ತಮ್ಮ ಪೋಸ್ಟ್‌ನಲ್ಲಿ ಡಾ. ಬಿ.ಅರ್ ಅಂಬೇಡ್ಕರ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.
ರಾಷ್ಟ್ರ ಧ್ವಜದ ಬದಲು ಭಗವಾ ಧ್ವಜ ಹಾರಿಸುವುದು ಸರಿಯಲ್ಲ;ಸಿಎಂ
ಘಟನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಭಾರತದ ರಾಷ್ಟ್ರ ಧ್ವಜದ ಬದಲು ಭಗವಾ ಧ್ವಜ ಹಾರಿಸುವುದು ಸರಿಯಲ್ಲ ಎಂದು ಹೇಳಿದ್ದರು. ಕೆರೆಗೋಡು ಗ್ರಾಮದಲ್ಲಿ ಜನರನ್ನು ಬೆದರಿಸುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯವರು ಸಂಚು ರೂಪಿಸುತ್ತಿದ್ದಾರೆ ಎಂದು ಆರೋಪಿಸಿದ ಮುಖ್ಯಮಂತ್ರಿ, ಉದ್ದೇಶಪೂರ್ವಕವಾಗಿ ನಿಯಮ ಉಲ್ಲಂಘಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ರಾಷ್ಟ್ರಧ್ವಜ ಹಾರಿಸಬೇಕಾದ ಕಡೆ ಹನುಮ ಧ್ವಜ ಹಾರಿಸಿರುವುದು ಆಕಸ್ಮಿಕವಲ್ಲ ಎಂದು ದೂರಿದ್ದರು.
''ಈ ಘಟನೆ ಬಿಜೆಪಿ ಹಾಗೂ ಸಂಘಪರಿವಾರದ ಪೂರ್ವ ನಿಯೋಜಿತ ಕೃತ್ಯವಾಗಿದ್ದು, ರಾಜ್ಯ ಸರಕಾರದ ವಿರುದ್ಧ ವ್ಯವಸ್ಥಿತವಾಗಿ ಜನರನ್ನು ಎತ್ತಿಕಟ್ಟುವ ಉದ್ದೇಶದಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಂಡ್ಯದಲ್ಲಿ ಕೋಮುಗಲಭೆ ಸೃಷ್ಟಿಸಲು ಸಂಚು ರೂಪಿಸಿದ್ದರಲ್ಲಿ ಸಂಶಯವಿಲ್ಲ. ಲೋಕಸಭೆ ಚುನಾವಣೆಗೆ ಬಿಜೆಪಿ ನಾಯಕರು ಸಿದ್ಧತೆ ನಡೆಸುತ್ತಿದ್ದಾರೆ. ಆದರೆ, ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ತಮ್ಮ ಸರ್ಕಾರ ಬದ್ಧವಾಗಿದೆ" ಎಂದು ಸಿದ್ದರಾಮಯ್ಯ ಹೇಳಿದ್ದಾರೆ.












Click it and Unblock the Notifications