Mandya: ಆಪರೇಷನ್ ಹಸ್ತ ಕಾರ್ಯಾಚರಣೆಗೆ ಬ್ರೇಕ್ ಹಾಕಿದ ಎಚ್‌ಡಿಕೆ; ಕಾಂಗ್ರೆಸ್‌ಗೆ ಹಿನ್ನಡೆ
ಆಪರೇಷನ್ ಹಸ್ತ ಕಾರ್ಯಾಚರಣೆ ನಡೆಸಿ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಸೇರಿದಂತೆ ಹಲವರನ್ನು ಸೆಳೆಯುವ ಕಾಂಗ್ರೆಸ್ ಯತ್ನಕ್ಕೆ ಬ್ರೇಕ್ ಬಿದ್ದಿದ್ದು, ಕಾಂಗ್ರೆಸ್ಸಿಗರ ಯೋಜನೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬ್ರೇಕ್ ಹಾಕಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿಯಿಂದಾಗಿ ಮುನಿಸಿಕೊಂಡಿದ್ದ ಮಾಜಿ ಸಚಿವ ಕೆ.ಸಿ. ನಾರಾಯಣಗೌಡ ಅವರು ಪಕ್ಷದ ಎಲ್ಲ ಚಟುವಟಿಕೆಗಳಿಂದಲೂ ದೂರವೇ ಉಳಿದಿದ್ದರು. ನೆಪಮಾತ್ರಕ್ಕೆ ಅಲ್ಲೊಂದು ಇಲ್ಲೊಂದು ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದ ನಾರಾಯಣಗೌಡ ಪಕ್ಷ ತೊರೆಯಲು ನಿರ್ಧರಿಸಿದ್ದಾರೆಂದೇ ಹೇಳಲಾಗಿತ್ತು.

ಲೋಕಸಭಾ ಚುನಾವಣಾ ಕಣ ರಂಗೇರುತ್ತಿದ್ದಂತೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿ ಮಂಡ್ಯದಿಂದಲೇ ಲೋಕ ಸಮರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಫಲಾನುಭವಿಗಳ ಸಮಾವೇಶದಲ್ಲಿ ರಣಕಹಳೆ ಊದಿದ್ದರು. ಆದರೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಆಯ್ಕೆ ಗೊಂದಲ ಮೂಡಿತ್ತು.
ಅಖಾಡಕ್ಕಿಳಿದ ಮಾಜಿ ಸಿಎಂ
ಸಂಸದೆ ಸುಮಲತಾ ಅಂಬರೀಶ್ ಅವರು ಕ್ಷೇತ್ರದಲ್ಲಿ ಮತ್ತೆ ನನಗೇ ಟಿಕೆಟ್ ಲಭಿಸುತ್ತದೆ. ಬಿಜೆಪಿಯೇ ಇಲ್ಲಿ ಪಾರುಪತ್ಯ ಮೆರೆಯುತ್ತದೆ ಎಂಬೆಲ್ಲಾ ಇತ್ಯಾದಿ ಹೇಳಿಕೆಗಳನ್ನು ನಿತ್ಯವೂ ನೀಡುತ್ತಿದ್ದುದರ ಜೊತೆಗೆ ದೆಹಲಿ ಮಟ್ಟದಲ್ಲಿ ಬಿಜೆಪಿ ಹೈಕಮಾಂಡ್ ಭೇಟಿ ಮಾಡಿ ಒತ್ತಡ ಹಾಕುತ್ತಿದ್ದರು.
ಬಿಜೆಪಿ ಹೈಕಮಾಂಡ್ ಸಹ ಸುಮಲತಾ ಸೇರಿದಂತೆ ಯಾರಿಗೂ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಕೇವಲ ಆಶ್ವಾಸನೆಯಲ್ಲೇ ಕಾಲ ನೂಕುತ್ತಿದ್ದರು. ಕೊನೇ ಗಳಿಗೆಯಲ್ಲಿ ಮಂಡ್ಯ, ಹಾಸನ ಹಾಗೂ ಕೋಲಾರ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡುವುದಾಗಿ ಘೋಷಣೆ ಮಾಡಿದರು. ಬಿಜೆಪಿ ಹೈಕಮಾಂಡ್ ಅಳೆದು ತೂಗಿ, ಘೋಷಣೆ ಮಾಡಿದ್ದರಿಂದಾಗಿ ಜೆಡಿಎಸ್ ಸಹ ತಾಳ್ಮೆಯಿಂದಲೇ ಕಾಯಬೇಕಾಗಿತ್ತು.
ಅಂತಿಮವಾಗಿ ಎಚ್.ಡಿ. ಕುಮಾರಸ್ವಾಮಿಯವರೇ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಣೆಯಾಗುವವರೆಗೂ ಸಹಜವಾಗಿ ಕುತೂಹಲ ಏರ್ಪಟ್ಟಿದ್ದಂತೂ ಸತ್ಯ. ಅಭ್ಯರ್ಥಿ ಘೋಷಣೆಯಾಗುತ್ತಿದ್ದಂತ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ.
ಸುಮಲತಾ ಅಥವಾ ನಿಖಿಲ್ ಕುಮಾರಸ್ವಾಮಿ, ಇಲ್ಲವೇ ಸಿ.ಎಸ್. ಪುಟ್ಟರಾಜು ಅಭ್ಯರ್ಥಿಯಾಗಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್ ವಲಯದಲ್ಲಿ ಕಂಡುಬಂದಿತ್ತು. ಇದೀಗ ಕುಮಾರಸ್ವಾಮಿಯೇ ಅಭ್ಯರ್ಥಿಯಾಗಿರುವುದು ಕಾಂಗ್ರೆಸ್‌ಗೆ ದೊಡ್ಡ ಹೊಡೆತ ಕೊಟ್ಟಿದೆ.
ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಮುನಿಸಿಕೊಂಡಿದ್ದ ಪ್ರಭಾವಿ ಮಾಜಿ ಸಚಿವ ಕೆ.ಸಿ. ನಾರಾಯಣಗೌಡರನ್ನು ಕಾಂಗ್ರೆಸ್‌ಗೆ ಸೆಳೆಯಲು ಮಂಡ್ಯ ಜಿಲ್ಲೆಯ ರಾಜಕೀಯ ಚಾಣಾಕ್ಷ ಎಂದೇ ಹೇಳಲಾಗುತ್ತಿರುವ ಚಲುವರಾಯಸ್ವಾಮಿ ಅವರು ಪ್ಲಾನ್ ಮಾಡಿದ್ದರು. ಕಾರ್ಯರೂಪಕ್ಕೂ ಇಳಿಸಿದ್ದರು. ಒಂದು ಹಂತದಲ್ಲಿ ಕೆ.ಸಿ. ನಾರಾಯಣಗೌಡ ಕಾಂಗ್ರೆಸ್ ಪಾಲಾದರೇ ಎಂಬ ವದಂತಿಗಳು ಹರಿದಾಡಲಾರಂಭಿಸಿತ್ತು. ಆದರೆ, ಅಷ್ಟರಲ್ಲಿ ಎಚ್.ಡಿ. ಕುಮಾರಸ್ವಾಮಿ ರಂಗಪ್ರವೇಶಿಸಿ ಕೆಸಿಎನ್ ನಿವಾಸಕ್ಕೆ ಭೇಟಿ ನೀಡಿ ಹಳೆಯದ್ದನ್ನೆಲ್ಲಾ ಮರೆತು ಬೆಂಬಲ ನೀಡುವಂತೆ ಮನವಿ ಮಾಡಿದ್ದರು.
ಕುಮಾರಸ್ವಾಮಿಯವರೊಟ್ಟಿಗೆ ಡಾ. ಸಿ.ಎನ್. ಅಶ್ವತ್ಥನಾರಾಯಣ, ಸಿ.ಎಸ್. ಪುಟ್ಟರಾಜು, ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಪಿ. ಉಮೇಶ್ ಇತರರು ಭೇಟಿ ನೀಡಿ ನಾರಾಯಣಗೌಡರ ಜೊತೆ ಮಾತುಕತೆ ನಡೆಸಿದರು. ಇದರಿಂದ ಕೆಸಿಎನ್ ಮುನಿಸು ದೂರಾಗಿ, ಸಕಾರಾತ್ಮಕವಾಗಿ ಸ್ಪಂದಿಸುವುದರ ಜೊತೆಗೆ ಮಾಜಿ ಸಿಎಂ ನಮ್ಮ ಮನೆಗೆ ಭೇಟಿ ನೀಡಿ ಬೆಂಬಲ ಕೋರಿರುವುದು, ಅವರ ಋಣ ನನ್ನ ಮೇಲಿರುವ ಕಾರಣ ಅವರನ್ನೇ ಈ ಬಾರಿ ಬೆಂಬಲಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆಂದು ಹೇಳಲಾಗಿದೆ.
ಕೆ.ಸಿ. ನಾರಾಯಣಗೌಡ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಾರೆಂಬ ಊಹಾಪೋಹಕ್ಕೆ ಸದ್ಯಕ್ಕೆ ತೆರೆ ಬಿದ್ದಿದೆ. ಇಷ್ಟಕ್ಕೇ ಕಾಂಗ್ರೆಸ್ ತನ್ನ ಪ್ರಯತ್ನ ಬಿಟ್ಟಿಲ್ಲ. ರಾಜಕೀಯ ಚಾಣಾಕ್ಷರಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಜೆಡಿಎಸ್‌ನಿಂದ ಬೇರ್ಪಟ್ಟು ಬಿಜೆಪಿ ಸೇರ್ಪಡೆಗೊಂಡಿರುವ ಎಲ್ಲ ಮುಖಂಡರಿಗೂ ಗಾಳ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ.












Click it and Unblock the Notifications