ಮಂಡ್ಯ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ: ಕಾಂಗ್ರೆಸ್ ತುಷ್ಟೀಕರಣದ ಫಲ ಎಂದ ಕುಮಾರಸ್ವಾಮಿ
ಮಂಡ್ಯ, ಸೆಪ್ಟೆಂಬರ್ 12: ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಯುವಕರ ಗುಂಪೊಂದು ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಮಂಡ್ಯದ ನಾಗಮಂಗಲ ಬದರಿಕೊಪ್ಪಲಿನಲ್ಲಿ ನಡೆದಿದೆ. ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ನಾಗಮಂಗಲದ ಮೈಸೂರು ರಸ್ತೆಯಲ್ಲಿರುವ ದರ್ಗಾ ಬಳಿ ಮೆರವಣಿಗೆ ಬಂದ ವೇಳೆ ಅನ್ಯಕೋಮಿನ ಯುವಕರು ಕಲ್ಲು ತೂರಾಟ ನಡೆಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಕಲ್ಲು ತೂರಾಟ ಆರಂಭವಾಗುತ್ತಿದ್ದಂತೆ ಹಿಂದೂ-ಮುಸ್ಲಿಂ ಯುವಕರ ನಡುವೆ ತಳ್ಳಾಟ ನೂಕಾಟ ನಡೆದಿದ್ದು, ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಆದರೆ ಹಬ್ಬದ ಆಚರಣೆ ವೇಳೆ ಈ ರೀತಿಯ ಕಿಡಿಗೇಡಿ ಕೃತ್ಯ ಮಾಡಿರುವ ಆರೋಪಿಗಳನ್ನು ಬಂಧಿಸುವಂತೆ ಪೊಲೀಸ್ ಠಾಣೆ ಎದುರು ಗಣಪತಿ ಮೂರ್ತಿ ನಿಲ್ಲಿಸಿ ಹಿಂದೂಗಳು ಪ್ರತಿಭಟನೆ ನಡೆಸಿದ್ದಾರೆ. ನಾಗಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಈ ಘಟನೆಯ ಬಗ್ಗೆ ಮಂಡ್ಯ ಸಂಸದ, ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಪಕ್ಷ ಮತ್ತು ರಾಜ್ಯ ಸರ್ಕಾರ ರಾಜಕೀಯ ಸ್ವಾರ್ಥಕ್ಕಾಗಿ ಒಂದು ನಿರ್ದಿಷ್ಟ ಸಮುದಾಯವನ್ನು ಅತಿಯಾಗಿ ಓಲೈಸಿ ತುಷ್ಟೀಕರಣ ಮಾಡಿದ ಫಲವೇ ಈ ಹೇಯ ಘಟನೆ ಎಂದಿದ್ದಾರೆ.
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, 'ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದಿರುವ ಘಟನೆಯನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ಗಣಪತಿ ದೇವರ ಮೆರವಣಿಗೆಯಲ್ಲಿ ಶಾಂತಿಯುತವಾಗಿ ತೆರಳುತ್ತಿದ್ದ ಭಕ್ತರನ್ನು ಗುರಿ ಮಾಡಿ ಒಂದು ಸಮುದಾಯದ ಪುಂಡರು ಉದ್ದೇಶ ಪೂರ್ವಕವಾಗಿಯೇ ದಾಂಧಲೆ ಎಬ್ಬಿಸಿದ್ದಾರೆ'.

'ಪುಂಡರು ಸಾರ್ವಜನಿಕರು-ಪೊಲೀಸರ ಮೇಲೆ ಕಲ್ಲು, ಚಪ್ಪಲಿ ಎಸೆದು ಪೆಟ್ರೋಲ್ ಬಾಂಬ್ ಸ್ಫೋಟಿಸಿ ತಲ್ವಾರ್ ಝಳಪಿಸುವ ದುಸ್ಸಾಹಸಕ್ಕೆ ಕೈ ಹಾಕಿರುವುದು ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆ ವೈಫಲ್ಯವಾಗಿರುವುದಕ್ಕೆ ಸಾಕ್ಷಿ. ಪೊಲೀಸ್ ಠಾಣೆ ಎದುರು ರಕ್ಷಣೆ ಕೊಡಿ ಎಂದು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದವರ ಮೇಲೆಯೇ ಆ ಕೋಮಿನ ಪುಂಡರು ದಬ್ಬಾಳಿಕೆ ನಡೆಸುತ್ತಾರೆ ಎಂದರೆ ನಾವು ಎಲ್ಲಿದ್ದೇವೆ ಎನ್ನುವ ಅನುಮಾನ ಬರುತ್ತದೆ. ಇಲ್ಲಿ ಸ್ಥಳೀಯ ಪೊಲೀಸರ ವೈಫಲ್ಯವೂ ಎದ್ದು ಕಾಣುತ್ತಿದೆ' ಎಂದು ಆರೋಪಿಸಿದರು.
'ಕಾಂಗ್ರೆಸ್ ಪಕ್ಷ ಮತ್ತು ರಾಜ್ಯ ಸರ್ಕಾರ ರಾಜಕೀಯ ಸ್ವಾರ್ಥಕ್ಕಾಗಿ ಒಂದು ನಿರ್ದಿಷ್ಟ ಸಮುದಾಯವನ್ನು ಅತಿಯಾಗಿ ಓಲೈಸಿ ತುಷ್ಟೀಕರಣ ಮಾಡಿದ ಫಲವಾಗಿ ನಾಗಮಂಗಲದಲ್ಲಿ ಈ ಹೇಯ ಘಟನೆ ನಡೆದಿದೆ. ಇಂತಹ ಓಲೈಕೆ, ತುಷ್ಟೀಕರಣ ರಾಜಕಾರಣ ನಿಲ್ಲಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ದಿನಗಳು ದೂರವಿಲ್ಲ' ಎಂದರು.
'ಸಾರ್ವಜನಿಕರು ಶಾಂತಿ ಕಾಪಾಡಬೇಕು ಎನ್ನುವುದು ನನ್ನ ಕಳಕಳಿಯ ಮನವಿ. ತಕ್ಷಣವೇ ಪಟ್ಟಣದಲ್ಲಿ ಶಾಂತಿ ಮರುಸ್ಥಾಪನೆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಅಲ್ಲದೇ, ಈ ಪ್ರಕರಣ ನೆಪದಲ್ಲಿ ವಿರೋಧ ಪಕ್ಷಗಳ ಮುಖಂಡರು, ಕಾರ್ಯಕರ್ತರ ಮೇಲೆ ಪೊಲೀಸರು ದರ್ಪ ತೋರಿದರೆ ಸಹಿಸುವ ಪ್ರಶ್ನೆ ಇಲ್ಲ' ಎಂದು ಹೆಚ್.ಡಿ ಕುಮಾರಸ್ವಾಮಿ ಖಡಕ್ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications