ವಿದೇಶಿ ಹಕ್ಕಿ ಬೇಟೆಯಾಡಿದ ದೃಶ್ಯ ವೈರಲ್, ಓರ್ವ ಅಂದರ್

By: ಬಿಎಂ ಲವಕುಮಾರ್
Subscribe to Oneindia Kannada

ಮಂಡ್ಯ, ಆಗಸ್ಟ್ 21: ವಿದೇಶದಿಂದ ವಲಸೆ ಬಂದ ಪಕ್ಷಿಯೊಂದನ್ನು ಬೇಟೆಯಾಡಿ ಸುಟ್ಟು ತಿನ್ನುವ ದೃಶ್ಯವನ್ನು ಸೆರೆ ಹಿಡಿದು ತಮ್ಮ ಫೇಸ್ ಬುಕ್, ವಾಟ್ಸಪ್‍ಗಳಲ್ಲಿ ಹರಿಯಲು ಬಿಟ್ಟು ವಿಕೃತ ಮಜಾ ಅನುಭವಿಸಿದ ನಾಲ್ವರು ಆರೋಪಿಗಳ ಪೈಕಿ ಒಬ್ಬನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಪಟ್ಟಣದ ಶ್ರೀಕಂಠನಗರ ನಿವಾಸಿ ದಿವಂಗತ ನಾರಾಯಣಪ್ಪರವರ ಪುತ್ರ ನಾಗರಾಜು ಅಲಿಯಾಸ್ ಗೆಂಡೆ(35) ಬಂಧಿತ ಆರೋಪಿಯಾಗಿದ್ದಾನೆ.

Forest department officials arrested a man for hunting a foreign bird in Mandya

ಬೇಟೆಯ ಹುಚ್ಚು ಹೊಂದಿದ್ದ ನಾಗರಾಜು ಕೆ.ಆರ್.ಪೇಟೆ ತಾಲೂಕಿನ ವಳಗೆರೆ ಮೆಣಸ ಗ್ರಾಮದ ಕೆರೆಯತ್ತ ನಾಡ ಬಂದೂಕಿನೊಂದಿಗೆ ಗೆಳೆಯರಾದ ಪ್ರದೀಪ, ಚೇತನ್ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನೊಂದಿಗೆ ಆ.14ರಂದು ಹೋಗಿದ್ದನು. ಈ ವೇಳೆ ಕೆರೆಯ ದಡದಲ್ಲಿ ವಿದೇಶಿ ಹಕ್ಕಿಯೊಂದು ವಿಹರಿಸುತ್ತಿದ್ದದ್ದು ಕಂಡಿದೆ.

ಕೂಡಲೇ ನಾಗರಾಜು ಅದಕ್ಕೆ ಗುರಿಯಿಟ್ಟು ತನ್ನ ಬಳಿಯಿದ್ದ ಬಂದೂಕಿನಿಂದ ಗುಂಡು ಹಾರಿಸಿದ್ದಾನೆ. ಗುಂಡು ಅದಕ್ಕೆ ಬಡಿದು ಸಾವನ್ನಪ್ಪಿದೆ. ಬಳಿಕ ಸತ್ತು ಬಿದ್ದಿದ್ದ ಪಕ್ಷಿಯನ್ನು ಎತ್ತಿಕೊಂಡು ಹೋಗಿ ಕಾಂತರಾಜಪುರ ಗ್ರಾಮದ ತೋಟವೊಂದರಲ್ಲಿ ಶುಚಿಗೊಳಿಸಿ ಅಲ್ಲಿಯೇ ಸ್ಟೌವ್‍ನಲ್ಲಿ ಸುಟ್ಟು ತಿಂದಿದ್ದಾರೆ. ಈ ದೃಶ್ಯಗಳನ್ನೆಲ್ಲ ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು ತಾವೇನೋ ಮಹಾನ್ ಸಾಧನೆ ಮಾಡಿದ್ದೇವೆ ಎಂಬಂತೆ ಅದನ್ನು ಸಾಮಾಜಿಕ ತಾಣಗಳಿಗೆ ಅಪ್‍ಲೋಡ್ ಮಾಡಿ ವಿಕೃತ ಖುಷಿ ಅನುಭವಿಸಿದ್ದಾನೆ.

ಈ ಫೋಟೋ, ವೀಡಿಯೋಗಳು ವಾಟ್ಸಪ್, ಫೇಸ್ ಬುಕ್‍ನಲ್ಲಿ ವೈರಲ್ ಆಗುತ್ತಿದ್ದಂತೆಯೇ ಟೀಕೆಗಳು ಕೇಳಿ ಬಂದಿತ್ತಲ್ಲದೆ, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶವೂ ವ್ಯಕ್ತವಾಗಿತ್ತು. ಈ ಸಂದರ್ಭ ಎಚ್ಚೆತ್ತುಕೊಂಡ ನಾಗಮಂಗಲ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅನಂತರಾಮು, ತಾಲೂಕು ಅರಣ್ಯಾಧಿಕಾರಿ ರವೀಂದ್ರ, ಉಪ ಅರಣ್ಯಾಧಿಕಾರಿ ರಾಘವೇಂದ್ರ, ಶಿವಮೂರ್ತಿ, ಅರಣ್ಯ ವೀಕ್ಷಕರಾದ ರಮೇಶ್, ಮನೋಜ್, ಮಂಜೇಗೌಡ ಮತ್ತಿತರರಿದ್ದ ಅರಣ್ಯ ಸಿಬ್ಬಂದಿಗಳ ತಂಡ ಆರೋಪಿಗಳ ಬೆನ್ನು ಹತ್ತಿತ್ತು.

ಆರೋಪಿಗಳ ಫೇಸ್‍ಬುಕ್, ವಾಟ್ಸಪ್ ವಿಳಾಸವನ್ನಾಧರಿಸಿ ಹೊರಟ ತಂಡಕ್ಕೆ ಪಕ್ಷಿ ಬೇಟೆಯಾಡಿದ್ದ ಪ್ರಮುಖ ಆರೋಪಿ ಶ್ರವಣಬೆಳಗೊಳದ ನಾಗರಾಜು ಆ.18ರಂದು ಸಿಕ್ಕಿಬಿದ್ದಿದ್ದನು. ಆತನನ್ನು ವಶಕ್ಕೆ ಪಡೆದು ಆತನಿಂದ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವ ಪ್ರಕ್ರಿಯೆ ಆರಂಭಿಸಿ ಬೇಟೆಗೆ ಬಳಸಿದ ನಾಡಬಂದೂಕು, ಕಾಂತರಾಜಪುರ ಪಕ್ಕದ ತೋಟದಲ್ಲಿ ಪಕ್ಷಿಯನ್ನು ಸುಟ್ಟು ತಿಂದ ಸ್ಟೌವ್, ಸೌದೆ ಸೇರಿದಂತೆ ಪಕ್ಷಿಯ ಅವಶೇಷಗಳನ್ನು ವಶಪಡಿಸಿಕೊಳ್ಳಲಾಯಿತು. ನಾಗರಾಜುವನ್ನು ಬಂಧಿಸಿರುವ ವಿಚಾರ ತಿಳಿಯುತ್ತಿದ್ದಂತೆಯೇ ಇತರ ಮೂವರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಇವರ ಪತ್ತೆಗಾಗಿ ಬಲೆ ಬೀಸಲಾಗಿದೆ.

ವಿದೇಶಿಪಕ್ಷಿಯನ್ನು ಬೇಟೆಯಾಡಿದ್ದಲ್ಲದೆ, ಅದರ ದೃಶ್ಯಗಳನ್ನು ಸಾಮಾಜಿಕ ತಾಣಗಳಿಗೆ ಅಪ್‍ಲೋಡ್ ಮಾಡಿ ಸ್ವಯಂಕೃತ ಅಪರಾಧ ಎಸಗಿದ್ದನ್ನು ಆರೋಪಿ ನಾಗರಾಜು ಒಪ್ಪಿಕೊಂಡಿದ್ದಾನೆ. ಈತನನ್ನು ಕೆ.ಆರ್.ಪೇಟೆ ಪಟ್ಟಣದ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆಗೆ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Forest department officials arrested a man for hunting a foreign bird. Nagaraju, son of late Narayanappa, resident of Srikantanagar in Shravanabelagola town of Channarayapatna taluk in Hassan district, has been arrested.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ