ದೇವೇಗೌಡರ ಅಭಿಮಾನಿಯಿಂದ ಮಂಡ್ಯದಲ್ಲಿ ಅಪ್ಪಾಜಿ ಕ್ಯಾಂಟೀನ್
ಮಂಡ್ಯ, ಜನವರಿ 30: ಈಗಾಗಲೇ ಸರ್ಕಾರ ಇಂದಿರಾ ಕ್ಯಾಂಟೀನ್‍ನ್ನು ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ತೆರೆಯುತ್ತಿದ್ದರೆ, ಇದೀಗ ಜೆಡಿಎಸ್ ಅಭಿಮಾನಿಯೊಬ್ಬರು ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಅಪ್ಪಾಜಿ ಕ್ಯಾಂಟೀನ್ ತೆರೆಯುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.
ಚುನಾವಣೆ ಹತ್ತಿರ ಬರುತ್ತಿರುವ ಸಮಯದಲ್ಲೇ ಸರ್ಕಾರ ಇಂದಿರಾ ಮೊಬೈಲ್ ಕ್ಯಾಂಟೀನ್ ಸೇರಿದಂತೆ, ಜಿಲ್ಲಾ ಕೇಂದ್ರಗಳಲ್ಲಿ ಕ್ಯಾಂಟೀನ್ ತೆರೆಯುತ್ತಿದ್ದರೆ, ಜೆಡಿಎಸ್ ಪಕ್ಷದ ಮುಖಂಡರು ಕೂಡ ಅಪ್ಪಾಜಿ ಕ್ಯಾಂಟೀನ್ ಆರಂಭಿಸಿದೆ. ಬೆಂಗಳೂರಿನಲ್ಲಿ ವಿಧಾನಪರಿಷತ್ ಸದಸ್ಯ ಶರವಣ ಅವರು ತೆರೆದಿರುವ ಅಪ್ಪಾಜಿ ಕ್ಯಾಂಟೀನ್ ಉತ್ತಮವಾಗಿ ನಡೆಯುತ್ತಿದ್ದರೆ, ಪಾಂಡವಪುರ ಪಟ್ಟಣದಲ್ಲಿ ಸೋಮವಾರ(ಜ.29)ದಿಂದ ಅಪ್ಪಾಜಿ ಕ್ಯಾಂಟೀನ್ ಆರಂಭಗೊಂಡಿದೆ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಎದುರು ಕ್ಯಾಂಟೀನ್ ಆರಂಭಗೊಂಡಿದ್ದು, ಇದನ್ನು ದೇವೇಗೌಡರ ಅಭಿಮಾನಿ ಗೊರವಲೆ ನಾಗೇಶ್ ಅವರು ಆರಂಭಿಸಿದ್ದಾರೆ.

ಈ ಕುರಿತಂತೆ ಮಾತನಾಡಿದ ಅವರು, ನಾನು ಕಳೆದ 20 ವರ್ಷದಿಂದ ದೇವೇಗೌಡ ಅಭಿಮಾನಿಯಾಗಿ ಜೆಡಿಎಸ್ ಪಕ್ಷದಲ್ಲಿ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. ಹೀಗಾಗಿ ಎಚ್.ಡಿ.ದೇವೇಗೌಡರ ಹೆಸರಿನಲ್ಲಿ ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ಊಟ, ತಿಂಡಿ ನೀಡುತ್ತಿರುವುದಾಗಿ ಹೇಳಿದರಲ್ಲದೆ, 10 ರೂ.ಗೆ ಚೌಚೌಬಾತ್, ಪಲಾವ್, ಚಿತ್ರಾನ್ನ, ಬಿಸಿಬೇಳೆ ಬಾತ್, ಖಾಲಿ ದೋಸೆ, ಸೆಟ್‍ದೋಸೆ, ಚಪಾತಿ, ಮುದ್ದೆ, ಅನ್ನಸಾಂಬಾರ್ ಹಾಗೂ ಮೊಸರನ್ನ, ಒಂದು ಇಡ್ಲಿ, ಒಂದು ವಡೆ, ಎರಡು ಬಜ್ಜಿಯನ್ನು ಕೇವಲ 5 ರೂ.ಗೆ ನೀಡುತ್ತಿರುವುದಾಗಿ ಹೇಳಿದರು.
ಅಪ್ಪಾಜಿ ಕ್ಯಾಂಟಿನ್ ಗೆ ಸಂಸದ ಸಿ.ಎಸ್.ಪುಟ್ಟರಾಜು ಚಾಲನೆ ನೀಡಿ ಮಾತನಾಡಿ, ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಊಟ, ತಿಂಡಿ ಕೊಡುವುದಕ್ಕಾಗಿ ಜಿಲ್ಲೆಯಲ್ಲಿ ನಮ್ಮ ನಾಯಕರಾದ ಎಚ್.ಡಿ.ದೇವೇಗೌಡರ ಹೆಸರಿನಲ್ಲಿ ಅಪ್ಪಾಜಿ ಕ್ಯಾಂಟೀನ್ ಆರಂಭಿಸಿರುವುದು ಶ್ಲಾಘನೀಯ ವಿಚಾರವಾಗಿದೆ ಎಂದರು.

ಒಟ್ಟಾರೆ ಪಾಂಡವಪುರದಲ್ಲಿ ಅಪ್ಪಾಜಿ ಕ್ಯಾಂಟೀನ್ ಆರಂಭವಾಗಿರುವುದರಿಂದ ಬಡಜನತೆಗೆ ಹೆಚ್ಚಿನ ಅನುಕೂಲವಾಗಿದ್ದು, ಕ್ಯಾಂಟೀನ್ ಗೆ ಮೊದಲ ದಿನ ನೂಕುನುಗ್ಗಲಿದ್ದದ್ದು ಕಂಡುಬಂತು.












Click it and Unblock the Notifications