ಮೋದಿ, ರಾಹುಲ್ ಗಾಂಧಿ ಎದುರು ತಲೆ ತಗ್ಗಿಸೋ ಹಾಗೆ ಮಾಡ್ಬೇಡಿ: ದೇವೇಗೌಡ
ಶ್ರೀರಂಗಪಟ್ಟಣ, ಮಾರ್ಚ್ 3: ಕಾವೇರಿ ಕೊಳ್ಳದಲ್ಲಿ ಬಿಜೆಪಿ, ಕಾಂಗ್ರೆಸ್ ಗೆಲ್ಲಬಾರದು. ಸಂಸತ್ ನಲ್ಲಿ ನಾನು ತಲೆ ಎತ್ತಿ ಮಾತನಾಡಬೇಕು. ಕಾವೇರಿ ಕೊಳ್ಳದ ಜನ ನಿಮಗೇನು ಕೊಟ್ಟಿದ್ದಾರೆ ಎಂದು ರಾಹುಲ್ ಗಾಂಧಿ, ನರೇಂದ್ರ ಮೋದಿ ಕೇಳಿದರೆ ನಾನು ಉತ್ತರ ಹೇಳುವಂತಿರಬೇಕು ಎಂದು ಎಚ್.ಡಿ.ದೇವೇಗೌಡ ಹೇಳಿದರು.
ಒಂದು ವೇಳೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗುವುದು ತಪ್ಪಿಹೋದರೆ ಇನ್ನು ಇಪ್ಪತ್ತು ವರ್ಷಗಳ ಕಾಲ ರೈತರು ಕಷ್ಟಪಡಬೇಕಾಗುತ್ತದೆ. ತಪ್ಪಿಹೋದರೆ ಎಂಬ ಪದ ಬಳಸಬೇಡಿ ಎಂದು ಇಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಶನಿವಾರ ಹೇಳಿದರು.
ಕುಮಾರಸ್ವಾಮಿ ಅವರು ಮಾತು ಕೊಟ್ಟಿರುವಂತೆ ರೈತರ ಸಾಲ ಮನ್ನಾ ಸೇರಿದ ಹಾಗೆ ವಿವಿಧ ಯೋಜನೆಗಳು ಜಾರಿಗೆ ಬರಬೇಕು ಅಂದರೆ ಜೆಡಿಎಸ್ ಸ್ವತಂತ್ರವಾಗಿ ಅಧಿಕಾರ ಹಿಡಿಯಬೇಕು. ಮತ್ತೊಬ್ಬರ ಹಂಗಿನಲ್ಲಿ ಅಧಿಕಾರ ಹಿಡಿಯುವಂತಾದರೆ ಈ ಯೋಜನೆಗಳನ್ನು ಜಾರಿಗೆ ತರುವುದಕ್ಕೆ ಕಷ್ಟ ಆಗುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಿ ಎಂದರು.

ಕರ್ನಾಟಕದ ಭೂ ಪಟದಿಂದಲೇ ಜೆಡಿಎಸ್ ಅನ್ನು ತೆಗೆದುಹಾಕಬೇಕು ಎಂದು ಸಿದ್ದರಾಮಯ್ಯ ಅವರು ನಮ್ಮ ಪಕ್ಷದ ಏಳು ಜನರನ್ನು ಸೆಳೆದುಕೊಂಡಿದ್ದಾರೆ. ಆದರೆ ಅದಕ್ಕೆ ಯಾವ ಕಾರಣಕ್ಕೂ ಅವಕಾಶ ಕೊಡುವುದಿಲ್ಲ ಎಂದರು.
ಸಿದ್ದರಾಮಯ್ಯ ಅವರು ನಮ್ಮ ರಾಜ್ಯ ನಂಬರ್ ಒನ್ ಮಾಡಿದ್ದೇನೆ ಅಂತಾರೆ. ಹಾಗಿದ್ದ ಮೇಲೆ ಇದೇಕೆ ಸ್ವಾಮಿ ದಿನಕ್ಕೊಂದು ನಿಯಮ ಮಾಡ್ತೀರಿ. ಈ ಐದು ವರ್ಷದಲ್ಲಿ ಎಲ್ಲಿ ಹೋಗಿತ್ತು ಬುದ್ಧಿ ಎಂದು ದೇವೇಗೌಡರು ಪ್ರಶ್ನೆ ಮಾಡಿದರು. ನಮ್ಮ ಪಕ್ಷವನ್ನು ಮುಗಿಸಲು ಪ್ರಯತ್ನ ಮಾಡುತ್ತಿರುವವರಿಗೆ ಸಿಡಿದೆದ್ದು ನಿಲ್ಲುತ್ತೇವೆ ಅನ್ನೋದನ್ನು ತೋರಿಸಿಕೊಟ್ಟಿದ್ದೇವೆ ಎಂದರು.












Click it and Unblock the Notifications