ಬಿಜೆಪಿ ಮುಖಂಡರಿಂದ ಒಕ್ಕಲಿಗರಿಗೆ ಮಸಿ ಬಳಿಯುವ ಕೆಲಸ-ಡಿ.ಕೆ.ಶಿವಕುಮಾರ್ ಆಕ್ರೋಶ
ಸಿ.ಟಿ.ರವಿ, ಅಶೋಕ್, ಅಶ್ವತ್ಥ್ ನಾರಾಯಣ್ ಹೊಸದಾಗಿ ಟಿಪ್ಪು ಹತ್ಯೆಯ ಸ್ಟೋರಿ ಬರೆಯುತ್ತಿದ್ದಾರೆ. ಸಿನಿಮಾ ತೆಗೆಯೋಕೆ ಇನ್ಯಾರೋ ಒಬ್ಬ ಮಹಾಶಯ ಮುಂದಾಗಿದ್ದ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಮಂಡ್ಯ, ಮಾರ್ಚ್ 22: ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಅಪ್ರತಿಮ ದೇಶ ಪ್ರೇಮಿ ಟಿಪ್ಪು ಸುಲ್ತಾನ್ ಹತ್ಯೆಗೈದಿದ್ದಾರೆಂದು ಉರಿಗೌಡ, ನಂಜೇಗೌಡ ಎಂಬ ಕಾಲ್ಪನಿಕ ಪಾತ್ರ ಗಳನ್ನು ಸೃಷ್ಟಿ ಮಾಡಿ ಬಿಜೆಪಿ ಮುಖಂಡರು ರಾಜ್ಯದ ಒಕ್ಕಲಿಗ ಸಮುದಾಯಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಮಂಡ್ಯ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಆದಿ ಚುಂಚನಗಿರಿಗೆ ಭೇಟಿ ನೀಡಿ ಕ್ಷೇತ್ರದ ದೈವ ಕಾಲಭೈರವೇಶ್ವರಸ್ವಾಮಿಗೆ ಅಮಾವಾಸ್ಯೆ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ.ರವಿ, ಅಶೋಕ್, ಅಶ್ವತ್ಥ್ ನಾರಾಯಣ್ ಹೊಸದಾಗಿ ಟಿಪ್ಪು ಹತ್ಯೆಯ ಸ್ಟೋರಿ ಬರೆಯುತ್ತಿದ್ದಾರೆ. ಸಿನಿಮಾ ತೆಗೆಯೋಕೆ ಇನ್ಯಾರೋ ಒಬ್ಬ ಮಹಾಶಯ ಮುಂದಾಗಿದ್ದ ಎಂದು ವ್ಯಂಗ್ಯ ಮಾಡಿದ್ದಾರೆ.

ನಾವ್ಯಾರೂ ಹೇಡಿಗಳಲ್ಲ. ಬಿಜೆಪಿಯವರ ಈ ಕೆಲಸವನ್ನು ಖಂಡಿಸುತ್ತೇವೆ. ನಮ್ಮ ಸ್ವಾಮೀಜಿಗಳು ಹೋರಾಟದ ನೇತೃತ್ವ ವಹಿಸಬೇಕು. ಅವನ್ಯಾವನನ್ನೋ ಕರೆದು ಸಿನಿಮಾ ಮಾಡಬೇಡ ಎಂದು ಕೂರಿಸಿ ಮಾತಾಡಬಾರದು. ನಮ್ಮ ಒಕ್ಕಲುತನಗಳ ಬಗ್ಗೆ ಬೇಕಿದ್ದರೆ ನೂರು ಸಿನಿಮಾ ಮಾಡಲಿ ಎಂದು ಹೇಳಿದರು.
ಉರಿಗೌಡ, ನಂಜೇಗೌಡ ವಿಚಾರವನ್ನು ಪಠ್ಯಕ್ಕೆ ಸೇರಿಸುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾವ ಪಠ್ಯನೂ ಇಲ್ಲ. ಅದನ್ನೆಲ್ಲ ಸ್ಕೂಲ್ ಮೇಷ್ಟ್ರು ಕೇಳಿ. ಅಶ್ವತ್ಥ್ ನಾರಾಯಣ್, ರವಿಗೆ ಪಾಠ ಹೇಳಿ ಕೊಟ್ಟ ಮೇಷ್ಟ್ರು ಕೇಳಿ. ಅವರೇನಾದ್ರೂ ಹೇಳಿಕೊಟ್ಟಿದ್ದರಾ? ಮೊದಲು 40% ಭ್ರಷ್ಟಾಚಾರ, ಕೊರೊನಾ ಸಂದರ್ಭದ ಭ್ರಷ್ಟಾಚಾರ ಬಗ್ಗೆ ಸಿನಿಮಾ ತೆಗೆಯಲಿ. ಈ ಎರಡು ಸಿನಿಮಾ ತೆಗೆದರೆ ಸಾಕು ಎಂದು ಬಿಜೆಪಿ ಮುಖಂಡರ ಕಾಲೆಳೆದರು.

ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಯಾವ ಕಾರಣಕ್ಕೂ ಬಿಡುವುದಿಲ್ಲ
ನಾವು ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಯಾವ ಕಾರಣಕ್ಕೂ ಬಿಡುವುದಿಲ್ಲ. ಇದರ ವಿರುದ್ಧ ಹೋರಾಟಕ್ಕೆ ಸ್ವಾಮೀಜಿಗಳು ನೇತೃತ್ವ ವಹಿಸಬೇಕು. ಹೋರಾಟದ ಸ್ವರೂಪ, ನಾಯಕತ್ವವನ್ನ ಸ್ವಾಮೀಜಿಗಳು ವಹಿಸಬೇಕು. ಇಲ್ಲವಾದರೆ ನಾನು ಒಂದು ಪಕ್ಷದ ಅಧ್ಯಕ್ಷನಾಗಿ ನಾನೇ ಹೋರಾಟ ಹಮ್ಮಿಕೊಳ್ಳುತ್ತೇನೆ. ಒಕ್ಕಲಿಗರಿಗೆ ಕಳಂಕ ತರಲು ಬಿಜೆಪಿಯವರು ಹೊರಟಿದ್ದಾರೆ. ಉರಿ ಗೌಡ, ನಂಜೇಗೌಡ ಅನ್ನೋರು ಯಾರೂ ಇಲ್ಲ. ಬಿಜೆಪಿ ಮುಖಂಡರೇ ಉರಿ ಗೌಡ, ನಂಜೇಗೌಡರು ಎಂದು ಕಿಡಿಕಾರಿದರು.
ಕಾಂಗ್ರೆಸ್ ಟಿಕೆಟ್ ಘೋಷಣೆಯ ಮೊದಲ ಪಟ್ಟಿ ಬಿಡುಗಡೆ ಯಾವಾಗ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಹಬ್ಬ ಹಬ್ಬ, ನಾವೆಲ್ಲರೂ ಮೊದಲು ಹಬ್ಬ ಮುಗಿಸೋಣ. ಇದು ನಮ್ಮ ಮಠ. ಹೊಸ ವರ್ಷದ ಅಮಾವಾಸ್ಯೆ, ಯುಗಾದಿ ಹಬ್ಬದ ಸಂದರ್ಭದಲ್ಲಿ ಶ್ರೀಮಠಕ್ಕೆ ಬಂದಿದ್ದೇನೆ. ನಾನು ನನ್ನ ಧರ್ಮ ಪತ್ನಿ ಅಮಾವಾಸ್ಯೆ ಪೂಜೆಯಲ್ಲಿ ಪಾಲ್ಗೊಂಡಿದ್ದೇವೆ. ನಾಡಿಗೆ ಎಲ್ಲರಿಗೂ ಒಳ್ಳೆಯದಾಗಲಿ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಮಹಿಳಾ ಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಡಾ.ಹೆಚ್.ಕೃಷ್ಣ, ಮನ್‌ಮುಲ್ ನಿರ್ದೇಶಕ ಉಮ್ಮಡಹಳ್ಳಿ ಶಿವಪ್ಪ, ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್, ಕೆಪಿಸಿಸಿ ಸದಸ್ಯ ಹೆಚ್. ತ್ಯಾಗರಾಜು, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್, ಮಾಜಿ ಅಧ್ಯಕ್ಷ ಚಿದಂಬರ್, ಮೇಲು ಕೋಟೆ ಉಸ್ತುವಾರಿ ಕೊತ್ತತ್ತಿ ರಾಜು ಉಪಸ್ಥಿತರಿದ್ದರು.
ಇನ್ನು ಉರಿಗೌಡ ಮತ್ತು ನಂಜೇಗೌಡ ವಿಚಾರದಲ್ಲಿ ಹಲವಾರು ಗೊಂದಲಗಳು ಸೃಷ್ಟಿಯಾದ ಹಿನ್ನೆಲೆಯಲ್ಲಿ ಈ ಸಿನಿಮಾ ಮಾಡಲು ಹೊರಟ ಸಚಿವ ಮುನಿರತ್ನ ಅವರನ್ನು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಭೇಟಿಯಾಗಿದ್ದು, ಸಿನಿಮಾ ಮಾಡದಂತೆ ಸೂಚನೆ ನೀಡಿದ್ದಾರೆ. ಸ್ವಾಮೀಜಿಗಳ ಸೂಚನೆ ಮೇರೆಗೆ ಮುನಿರತ್ನ ಈ ಯೋಜನೆಯನ್ನು ಕೈ ಬಿಟ್ಟಿದ್ದಾರೆ.












Click it and Unblock the Notifications