ಸುಮಲತಾ ಗೆಲ್ಲುವ ಆಸೆಯನ್ನು ಹೊಸಕಿ ಹಾಕಿದರೇ ಡಿಕೆ ಶಿವಕುಮಾರ್?
Recommended Video

ಮಂಡ್ಯ, ಮಾರ್ಚ್ 11: ಮಂಡ್ಯ ರಾಜಕಾರಣ ಪ್ರತಿ ದಿನ ಹೊಸ-ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಲೇ ಇದೆ. ನಿನ್ನೆ ಡಿ.ಕೆ.ಶಿವಕುಮಾರ್ ಅವರು ಮಂಡ್ಯ ರಾಜಕಾರಣಕ್ಕೆ ಎಂಟ್ರಿ ನೀಡಿ ಈ ವರೆಗೆ ಇದ್ದ ಚಿತ್ರಣವನ್ನು ಬದಲಾಯಿಸಿ ಬಿಟ್ಟಿದ್ದಾರೆ.
ಕಾಂಗ್ರೆಸ್ ಹಾಗೂ ಕುಮಾರಸ್ವಾಮಿ ಅವರ ವೈಯಕ್ತಿಕ ಒತ್ತಾಯದ ಮೇರೆಗೆ ಮಂಡ್ಯಕ್ಕೆ ತೆರಳಿದ್ದ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅವರು ಸುಮಲತಾ ಬೆನ್ನಿಗೆ ನಿಂತಿದ್ದ ಮಂಡ್ಯ ಸ್ಥಳೀಯ ಕಾಂಗ್ರೆಸ್ ಮುಖಂಡರನ್ನು ತಮ್ಮ ಕಡೆಗೆ ವಾಲಿಸಿಕೊಂಡು ಬಿಟ್ಟಿದ್ದಾರೆ.
ಕಾಂಗ್ರೆಸ್ ಟಿಕೆಟ್ ಸಿಗದ ಪಕ್ಷದಲ್ಲಿ ಪಕ್ಷೇತರವಾಗಿಯಾದರೂ ಚುನಾವಣೆಗೆ ನಿಲ್ಲುತ್ತೇನೆ ಎಂದು ತಯಾರಾಗಿರುವ ಸುಮಲತಾ ಅವರಿಗೆ ಮಂಡ್ಯದ ಹಲವು ಕಾಂಗ್ರೆಸ್ ಮುಖಂಡರು ಬೆಂಬಲ ನೀಡಿದ್ದರು. ಇದು ಜೆಡಿಎಸ್ ಪಾಳಯದಲ್ಲಿ ವಿಶೇಷವಾಗಿ ಕುಮಾರಸ್ವಾಮಿ ಅವರಿಗೆ ಆತಂಕ ಉಂಟು ಮಾಡಿತ್ತು.
ಆದರೆ ನಿನ್ನೆ ಮಂಡ್ಯಕ್ಕೆ ತೆರಳಿದ್ದ ಡಿ.ಕೆ.ಶಿವಕುಮಾರ್ ಅವರು, ಸ್ಥಳೀಯ ಕಾಂಗ್ರೆಸ್ ಮುಖಂಡರ ಜೊತೆ ಸಭೆ ನಡೆಸಿ ಸುಮಲತಾ ಅವರಿಗೆ ಬೆಂಬಲ ನೀಡಬಾರದೆಂದು ಠರಾವ್ ಹೊರಡಿಸಿದ್ದಾರೆ. ಒಂದೇ ಸಭೆಯಲ್ಲಿ ಸುಮಲತಾ ಅವರ ಬೆನ್ನಿಗೆ ನಿಂತಿದ್ದ ಬಹುತೇಕ ಕಾಂಗ್ರೆಸ್ ಮುಖಂಡರನ್ನು ತಮ್ಮತ್ತ ಸೆಳೆದುಕೊಂಡು ಬಿಟ್ಟಿದ್ದಾರೆ.

ಬೆಂಬಲ ವಾಪಸ್ ಪಡೆದ ಕೈ ಮುಖಂಡರು?
ನಿನ್ನೆ ರಾತ್ರಿಯೇ ಕಾಂಗ್ರೆಸ್‌ನ ಹಲವು ಮುಖಂಡರು ಸುಮಲತಾ ಅವರನ್ನು ಭೇಟಿ ಮಾಡಿ ತಾವು ಅವರಿಗೆ ಬೆಂಬಲ ನೀಡಲಾಗುವುದಿಲ್ಲ ಎಂದು ಹೇಳಿದ್ದಾರೆ. ಇದು ಸುಮಲತಾ ಅವರಿಗೆ ಭಾರಿ ಪೆಟ್ಟು ನೀಡಿದ್ದು, ಸುಮಲತಾ ಅವರು ತಮ್ಮ ಮುಂದಿನ ನಡೆಯಲ್ಲಿ ಇಂದು ಸಂಜೆ ತಿಳಿಸಲಿದ್ದಾರೆ.

ನಿಖಿಲ್ ಗೆಲ್ಲಿಸಲು ಎಚ್‌ಡಿಕೆ ಕಸರತ್ತು
ಜೆಡಿಎಸ್‌ನಿಂದ ನಿಖಿಲ್ ಕುಮಾರಸ್ವಾಮಿ ಕಣಕ್ಕೆ ಇಳಿಯುತ್ತಿದ್ದು, ಮಗನ ಸುಲಭ ಗೆಲುವಿಗಾಗಿ ತಂದೆ ಕುಮಾರಸ್ವಾಮಿ ಹಲವು ರೀತಿಯಲ್ಲಿ ಯತ್ನಗಳನ್ನು ಮಾಡುತ್ತಿದ್ದಾರೆ. ನಿನ್ನೆ ಡಿ.ಕೆ.ಶಿವಕುಮಾರ್ ಅವರು ಮಂಡ್ಯಕ್ಕೆ ಭೇಟಿ ನೀಡಲು ಮುಖ್ಯ ಕಾರಣವೇ ಕುಮಾರಸ್ವಾಮಿ ಎನ್ನಲಾಗಿದೆ.

ಬಿಜೆಪಿಯೂ ಸುಮಲತಾ ಅವರಿಗೆ ಕೈ ಕೊಡಲಿದೆ
ಸುಮಲತಾ ಅವರಿಗೆ ಬಿಜೆಪಿಯೂ ಕೈ ಕೊಡುವ ಸಾಧ್ಯತೆ ಇದೆ. ಕಾಂಗ್ರೆಸ್‌ನಿಂದ ಟಿಕೆಟ್ ಸಿಗದಿದ್ದಲ್ಲಿ ಪಕ್ಷೇತರವಾಗಿ ಅಥವಾ ಬಿಜೆಪಿಯಿಂದಾದರೂ ಸ್ಪರ್ಧಿಸುವ ಉಮೇದನ್ನು ಸುಮಲತಾ ಹೊಂದಿದ್ದರು. ಆದರೆ ಬಿಜೆಪಿ ಈವರೆಗೂ ಸುಮಲತಾ ಅವರನ್ನು ಸಂಪರ್ಕಿಸಿಲ್ಲ, ಅಲ್ಲದೆ ಬಿಜೆಪಿಯು ತಮ್ಮದೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಎಲ್ಲ ಸಾಧ್ಯತೆಯೂ ಇದೆ.

ಅನುಕಂಪದ ಅಲೆ ಕರಗಿಲ್ಲ
ಮಂಡ್ಯದ ಜನರಲ್ಲಿ ಅಂಬರೀಶ್ ಅವರ ಬಗ್ಗೆ ಇದ್ದ ಗೌರವ ಕಡಿಮೆ ಆಗಿಲ್ಲ, ಆ ಗೌರವ, ಅನುಕಂಪದಿಂದ ಹುಟ್ಟುವ ಮತಗಳು ಸುಮಲತಾ ಅವರನ್ನು ಗೆಲ್ಲಿಸುತ್ತವೆಯೋ ನೋಡಬೇಕು. ರೇವಣ್ಣ ಅವರ ಕೀಳು ಮಟ್ಟದ ಹೇಳಿಕೆಯ ನಂತರವಂತೂ ಸುಮಲತಾ ಅವರ ಬಗೆಗೆ ಅನುಕಂಪ ಹೆಚ್ಚಾಗಿದೆ. ಹಾಗಾಗಿ ಸುಮಲತಾ ಅವರಿಗೆ ಇನ್ನೂ ಅವಕಾಶಗಳು ಇವೆ.












Click it and Unblock the Notifications