ಮದ್ದೂರು ತಾಲೂಕು ಕಚೇರಿಯಲ್ಲೇ ವ್ಯಕ್ತಿ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ
ಹಳೆ ದ್ವೇಷದ ಹಿನ್ನೆಲೆ ವ್ಯಕ್ತಿಯೊಬ್ಬರ ಮೇಲೆ ಕುಡುಗೋಲಿನಿಂದ ಮಾರಣಾಂತಿಕ ಹಲ್ಲೆಗೆ ಯತ್ನಿಸಿದ ಘಟನೆ ಮದ್ದೂರು ತಾಲೂಕು ಕಚೇರಿಯಲ್ಲಿ ನಡೆದಿದೆ. ಘಟನೆಯ ಹಿನ್ನೆಲೆಯನ್ನು ಇಲ್ಲಿ ತಿಳಿಯಿರಿ,
ಮಂಡ್ಯ, ಜನವರಿ, 24: ಹಳೆ ದ್ವೇಷದ ಹಿನ್ನೆಲೆ ವ್ಯಕ್ತಿಯೊಬ್ಬರ ಮೇಲೆ ಕುಡುಗೋಲಿನಿಂದ ಮಾರಣಾಂತಿಕ ಹಲ್ಲೆಗೆ ಯತ್ನಿಸಿದ ಘಟನೆ ಮದ್ದೂರು ತಾಲೂಕು ಕಚೇರಿಯಲ್ಲಿ ನಡೆದಿದೆ.

ಮರಳಿಗ ಗ್ರಾಮದ ಚನ್ನರಾಜು (45) ಎಂಬುವವರ ಮೇಲೆ ಅದೇ ಗ್ರಾಮದ ನಂದನ್ ಎಂಬುವವರು ಕುಡುಗೋಲಿನಿಂದ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಮದ್ದೂರು ತಾಲೂಕು ಕಚೇರಿಯ ಮೊದಲ ಮಹಡಿಯಲ್ಲಿ ಜಗಳ ತೆಗೆದ ನಂದನ್ ಚನ್ನರಾಜು ಮೇಲೆ ಕುಡುಗೋಲಿನಿಂದ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಸದ್ಯ ಹಲ್ಲೆಗೊಳಗಾದ ಚನ್ನರಾಜುನನ್ನು ಚಿಕಿತ್ಸೆಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಭಯಂಕರ ಘಟನೆ ಮದ್ದೂರು ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹಲ್ಲೆ ಘಟನೆಯ ಹಿನ್ನೆಲೆ
ಕಳೆದ ಎರಡು ವರ್ಷಗಳ ಹಿಂದೆ ಚನ್ನರಾಜು ತನ್ನ ಮಗಳನ್ನು ಬೇರೆಯವರಿಗೆ ಮದುವೆ ಮಾಡಿಸಿದ ಕಾರಣಕ್ಕೆ, ಇವರಿಬ್ಬರ ನಡುವೆ ಹಳೇ ದ್ವೇಷ ಬೆಳೆದಿತ್ತು. ಆಗಿನಿಂದ ಇವರಿಬ್ಬರು ಸಣ್ಣಪುಟ್ಟ ಜಗಳವಾಡುತ್ತಿದ್ದರು. ಇದೇ ವಿಚಾರವನ್ನಿಟ್ಟುಕೊಂಡು ನಂದನ್ ಇಂದು ಮದ್ದೂರು ತಾಲೂಕು ಕಚೇರಿ ಬಳಿ ಕಾದು ಮಚ್ಚೆನಿಂದ ಹಲ್ಲೆ ಮಾಡಿದ್ದು, ಈ ಹಲ್ಲೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಇನ್ನು ಘಟನೆ ಮದ್ದೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿದ ಸರ್ಕಲ್ ಇನ್ಸ್‌ಪೆಕ್ಟರ್ ಮನೋಜ್ ಪರಿಸ್ಥಿತಿಯನ್ನು ನಿಯಂತ್ರಿಸಲು ಬಿಗಿ ಬಂದೋ ಬಸ್ತ್ ಕಲ್ಪಿಸಿದ್ದಾರೆ.
ಅಲ್ಲಿನ ಸ್ಥಳೀಯರು ಮರಣಾಂತಿಕ ಹಲ್ಲೆ ನಡೆಸದಂತೆ ನಂದನ್‌ಗೆ ತಿಳಿ ಹೇಳಿದರೂ ಕೂಡ ಆತ ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಕೊನೆಗೆ ಅಲ್ಲಿದ್ದ ಸ್ಥಳೀಯರು ನಂದನ್ ಮೇಲೆ ಕಲ್ಲು ತೂರಿ ಮಾರಣಾಂತಿಕ ಹಲ್ಲೆಯನ್ನು ತಡೆದಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.












Click it and Unblock the Notifications