ಮುಡಾ 107 ನಿವೇಶನ ಪ್ರಕರಣ: ಜನಪ್ರತಿನಿಧಿಗಳು ಸಲ್ಲಿಸಿದ್ದ ಅರ್ಜಿ ವಜಾ

ಮಂಡ್ಯ, ಜನವರಿ 20 :ಮುಡಾದಲ್ಲಿ ನಡೆದಿದ್ದ 107 ನಿವೇಶನ ಪ್ರಕರಣ ಸಂಬಂಧ ಸಿಬಿಐ ಸಲ್ಲಿಸಿದ್ದ ದೋಷಾರೋಪಣಾ ಪಟ್ಟಿಯನ್ನು ರದ್ದುಪಡಿಸಿ ತಮ್ಮ ಮೇಲಿನ ಆರೋಪಗಳಿಂದ ಬಿಡುಗಡೆಗೊಳಿಸುವಂತೆ ಅರ್ಜಿ ಸಲ್ಲಿಸಿದ್ದ 22 ಮಂದಿ ಆರೋಪಿತರ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ.

ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ವಿದ್ಯಾನಾಗೇಂದ್ರ ಅಧ್ಯಕ್ಷರಾಗಿದ್ದ 2009ರ ಅವಧಿಯಲ್ಲಿ 107 ಬಿಡಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ನಿವೇಶನಗಳನ್ನು ಹಂಚಿಕೆ ಮಾಡುವ ಸಮಯದಲ್ಲಿ ನಿಯಮಾವಳಿಗಳನ್ನು ಉಲ್ಲಂಘಿಸಿ ಸಾರ್ವಜನಿಕ ಪ್ರಕಟಣೆ ಹೊರಡಿಸದೆ ಅಂದಿನ ಆಡಳಿತ ಮಂಡಳಿ ತಮ್ಮ ಶಾಸಕರು, ನೌಕರ ವರ್ಗ ಮತ್ತು ಇವರುಗಳ ಸಂಬಂಧಿಕರಿಗೆ ನಿವೇಶನಗಳನ್ನು ಹಂಚಿಕೆ ಮಾಡಲಾಗಿದ್ದ ಆರೋಪ ಕೇಳಿ ಬಂದಿತ್ತು. ಈ ಹಗರಣದ ವಿರುದ್ಧ 2011ರಲ್ಲಿ ವಕೀಲ ಟಿ.ಎಸ್.ಸತ್ಯಾನಂದ ಸಂಪೂರ್ಣ ದಾಖಲಾತಿಗಳೊಂದಿಗೆ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.

ಪ್ರಕರಣ ಮಂಡ್ಯ ಜಿಲ್ಲಾ ನ್ಯಾಯಾಲಯ ಮತ್ತು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದು ಅಂತಿಮವಾಗಿ ಎಫ್‌ಐಆರ್ ದಾಖಲಿಸಿ ವಿಚಾರಣೆ ನಡೆಸಲು ನ್ಯಾಯಾಲಯ ಆದೇಶಿಸಿತ್ತು. ನ್ಯಾಯಾಲಯದ ಆದೇಶದಂತೆ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದರು.

ಪ್ರಕರಣ ಸಿಬಿಐಗೆ ವಹಿಸಿದ ಸರ್ಕಾರ

ಪ್ರಕರಣ ಸಿಬಿಐಗೆ ವಹಿಸಿದ ಸರ್ಕಾರ

ಈ ಹಂತದಲ್ಲಿ ಮುಡಾದಲ್ಲಿ ಐದು ಕೋಟಿ ರೂಪಾಯಿ ಹಣ ದುರುಪಯೋಗ ಪ್ರಕರಣ ಪತ್ತೆಯಾಗಿದ್ದರಿಂದ 107 ನಿವೇಶನ ಹಂಚಿಕೆ ಪ್ರಕರಣವನ್ನು ಸರ್ಕಾರ ಸಿಬಿಐಗೆ ವಹಿಸಿತ್ತು. 2013ರಲ್ಲಿ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಮೇಲುಕೋಟೆ ಶಾಸಕರಾಗಿದ್ದ ಕೆ.ಎಸ್.ಪುಟ್ಟಣ್ಣಯ್ಯರವರು 5 ಕೋಟಿ ರೂ. ಹಗರಣದ ಜೊತೆಗೆ 107 ನಿವೇಶನಗಳ ಹಗರಣವನ್ನು ಸಿಬಿಐ ವಿಚಾರಣೆಗೆ ವಹಿಸುವಂತೆ ವಿಧಾನಮಂಡಲ ಅಧಿವೇಶನದಲ್ಲಿ ಪ್ರಸ್ತಾಪಿಸಿದಾಗ ಸರ್ಕಾರ ಈ ಹಗರಣವನ್ನು ಸಿಬಿಐ ತನಿಖೆಗೆ ವಹಿಸಿ ಆದೇಶಿಸಿತ್ತು.

24 ಜನ ಆರೋಪಿತರ ವಿರುದ್ಧ ದೋಷಾರೋಪಣಾ ಪಟ್ಟಿ

24 ಜನ ಆರೋಪಿತರ ವಿರುದ್ಧ ದೋಷಾರೋಪಣಾ ಪಟ್ಟಿ

ಮೂರು ವರ್ಷಗಳ ಸುದೀರ್ಘ ವಿಚಾರಣೆಯ ನಂತರ ಮುಡಾ ಮೇಲೆ ದಾಳಿ ಮಾಡಿ ಸಿಬಿಐ ಹಲವು ದಾಖಲೆಗಳನ್ನು ವಶಪಡಿಸಿ ತನಿಖೆ ನಡೆಸಿ 24 ಜನ ಆರೋಪಿತರ ವಿರುದ್ಧ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿತ್ತು.

ಸಿಬಿಐ ದೋಷಾರೋಪಣಾ ಪಟ್ಟಿ ವಿರುದ್ಧ ಆರೋಪಿಗಳಾದ ವಿದ್ಯಾ ನಾಗೇಂದ್ರ, ನೌಕರ ಮುರಳೀಧರ್, ಶಾಸಕ ಸಿ.ಎಸ್.ಪುಟ್ಟರಾಜು ಅವರು ಉಚ್ಛ ನ್ಯಾಯಾಲಯ ಮತ್ತು ಸರ್ವೋಚ್ಛ ನ್ಯಾಯಾಲಯದಲ್ಲಿ ತಮ್ಮ ಮೇಲಿನ ಆರೋಪಗಳನ್ನು ವಜಾಗೊಳಿಸುವಂತೆ ಅರ್ಜಿ ಸಲ್ಲಿಸಿದ್ದರು. ಎರಡೂ ನ್ಯಾಯಾಲಯಗಳಲ್ಲಿ ಇವರುಗಳ ಅರ್ಜಿ ವಿಚಾರಣೆ ನಡೆದು 30.1.2021ರಲ್ಲಿ ಉಚ್ಛ ನ್ಯಾಯಾಲಯ ಸುದೀರ್ಘ ತೀರ್ಪು ನೀಡಿ ಪ್ರಕರಣವನ್ನು ವಜಾಗೊಳಿಸಲು ನಿರಾಕರಿಸಿತು.

ಆರೋಪಿಗಳ ವಿರುದ್ಧ ದೋಷಾರೋಪಣೆ ಹೊರಿಸಲು ಆದೇಶ

ಆರೋಪಿಗಳ ವಿರುದ್ಧ ದೋಷಾರೋಪಣೆ ಹೊರಿಸಲು ಆದೇಶ

ತಮ್ಮ ಮೇಲಿನ ಆರೋಪಗಳ ಬಗ್ಗೆ ವಿಚಾರಣಾ ನ್ಯಾಯಾಲಯದಲ್ಲೇ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿತ್ತು. ಉಚ್ಛ ನ್ಯಾಯಾಲಯ ಮತ್ತು ಸವೋಚ್ಛ ನ್ಯಾಯಾಲಯದ ಆದೇಶದಂತೆ ಪ್ರಕರಣದ 24 ಜನ ಆರೋಪಿಗಳಲ್ಲಿ 22 ಜನ ಆರೋಪಿಗಳು ವಿಚಾರಣಾ ನ್ಯಾಯಾಲಯದಲ್ಲಿ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿ ಪ್ರಕರಣವನ್ನು ವಜಾಗೊಳಿಸುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ (ವಿಚಾರಣಾ ನ್ಯಾಯಾಲಯ)ದಲ್ಲಿ ಅರ್ಜಿ ಸಲ್ಲಿಸಿದ್ದರು.

ನಾಲ್ಕು ತಿಂಗಳ ಸುದೀರ್ಘ ವಿಚಾರಣೆಯ ನಂತರ ನ್ಯಾಯಾಧೀಶ ಬಿ.ಜಯಂತಕುಮಾರ್ ಅವರು ಜನವರಿ 17ರಂದು 22 ಜನ ಆರೋಪಿತರ ಅರ್ಜಿಗಳನ್ನು ವಜಾಗೊಳಿಸಿದ್ದು, ಪ್ರಕರಣದ ವಿಚಾರಣೆ ನಡೆಸಲು ಬೇಕಾದ ಎಲ್ಲಾ ಅಂಶಗಳು ತನಿಖಾ ವರದಿಯಲ್ಲಿದ್ದು, ಆರೋಪಿಗಳು ವಿಚಾರಣೆಯನ್ನು ಎದುರಿಸುವುದು ಅವಶ್ಯವಾಗಿದೆ. ಸಿಬಿಐ ಸಲ್ಲಿಸಿರುವ ದೋಷಾರೋಪಣಾ ಪಟ್ಟಿಯಂತೆ ಆರೋಪಿಗಳ ವಿರುದ್ಧ ದೋಷಾರೋಪಣೆ ಹೊರಿಸಲು ಆದೇಶಿಸಿದೆ.

ತೀರ್ಪಿನ ಮೇಲೆ ನಿಂತ ಸಿ.ಎಸ್.ಪುಟ್ಟರಾಜು ರಾಜಕೀಯ ಭವಿಷ್ಯ

ತೀರ್ಪಿನ ಮೇಲೆ ನಿಂತ ಸಿ.ಎಸ್.ಪುಟ್ಟರಾಜು ರಾಜಕೀಯ ಭವಿಷ್ಯ

ಪ್ರಕರಣದ ವಿಚಾರಣೆ ಜನವರಿ 30ರಂದು ನಿಗದಿಯಾಗಿದ್ದು, ನ್ಯಾಯಾಲಯದ ಆದೇಶದಂತೆ ಆರೋಪಿತರ ವಿರುದ್ಧ ದೋಷಾರೋಪಣೆ ಹೊರಿಸಿ ವಿಚಾರಣೆ ಆರಂಭಿಸುವುದರಿಂದ ಪ್ರಕರಣದ ಅಂತಿಮ ತೀರ್ಪು ಅತ್ಯಂತ ಮಹತ್ವ ಪಡೆದುಕೊಂಡಿದೆ. ಈಗಾಗಲೇ ಉಚ್ಛ ನ್ಯಾಯಾಲಯ ಮತ್ತು ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಕರಣವನ್ನು ಕೈಬಿಡಲು ನಿರಾಕರಿಸಿರುವುದರಿಂದ ವಿಚಾರಣಾ ನ್ಯಾಯಾಲಯದಲ್ಲಿನ ಮುಂದಿನ ವಿಚಾರಣೆ ಹಲವು ನಾಯಕರ ರಾಜಕೀಯ ಭವಿಷ್ಯದ ಮೇಲೆ ಕಪ್ಪು ಛಾಯೆ ಮೂಡಿಸಿದೆ.

ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆಯಲ್ಲಿರುವ ಸಿ.ಎಸ್.ಪುಟ್ಟರಾಜು, ಎಂ.ಶ್ರೀನಿವಾಸ್, ರಮೇಶ್ ಬಂಡಿಸಿದ್ದೇಗೌಡ, ವಿದ್ಯಾನಾಗೇಂದ್ರ ಅವರ ರಾಜಕೀಯ ಭವಿಷ್ಯ ಮುಡಾ ಹಗರಣದ ತೀರ್ಪಿನ ಮೇಲೆ ನಿಂತಿದೆ.

ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇದೆ. ಸಿಬಿಐ ಕೂಲಂಕುಷವಾಗಿ ತನಿಖೆಗೆ ಒಳಪಡಿಸಿರುವುದರಿಂದ ನ್ಯಾಯಾಲಯದಲ್ಲೂ ತಪ್ಪಿತಸ್ಥರಿಗೆ ಶಿಕ್ಷೆಯಾಗಿ ನಮ್ಮ ಹೋರಾಟಕ್ಕೆ ಜಯ ಸಿಗುವ ವಿಶ್ವಾಸವಿದೆ ಎಂದು ವಕೀಲರಾದ ಟಿ.ಎಸ್.ಸತ್ಯಾನಂದ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+