ಮಂಡ್ಯದಲ್ಲಿ ಪೇದೆಗೆ ಕೊರೊನಾ; ಸನ್ನಡತೆಯ ಕೈದಿಗಳ ಬಿಡುಗಡೆ?
ಮಂಡ್ಯ, ಮೇ 23: ಕೊರೊನಾ ಸೋಂಕು ಕೈದಿಗಳಿಗೆ ಮತ್ತು ಜೈಲು ಸಿಬ್ಬಂದಿಗೆ ಹರಡುವುದನ್ನು ತಪ್ಪಿಸುವ ಸಲುವಾಗಿ ಏಳು ವರ್ಷದೊಳಗೆ ಶಿಕ್ಷೆಗೊಳಗಾಗಿರುವ ಕೈದಿಗಳನ್ನು ಕಾನೂನಿನಡಿ ಜಾಮೀನಿನ ಮೇಲೆ ಬಿಡುಗಡೆ ಮಾಡಲು ಸರ್ಕಾರ ಚಿಂತನೆ ನಡೆಸಿರುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮದ್ದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಿನ್ನೆ ಜಿಲ್ಲಾ ಪೊಲೀಸ್ ವತಿಯಿಂದ ಗೌರವ ವಂದನೆ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, "ಕೊರೊನಾ ಸೋಂಕು ಇರುವ ಕಾರಣ ಹೊಸದಾಗಿ ವಿಚಾರಣಾಧೀನ ಕೈದಿಗಳು ಕಾರಾಗೃಹಕ್ಕೆ ಬರುವ ಹಿನ್ನಲೆಯಲ್ಲಿ ಹಾಲಿ ಕೈದಿಗಳು ಮತ್ತು ಪೊಲೀಸರಿಗೆ ಸೋಂಕು ತಗಲುವ ಭೀತಿ ಇರುವುದರಿಂದ 5 ರಿಂದ 7 ವರ್ಷಗಳೊಳಗೆ ಶಿಕ್ಷೆಗೊಳಗಾಗಿರುವ ಕೈದಿಗಳನ್ನು ಬಿಡುಗಡೆ ಮಾಡಲು ತೀರ್ಮಾನಿಸಿದ್ದೇವೆ.
ಕೊಲೆ ಪ್ರಯತ್ನ, ಮಾರಾಕಾಸ್ತ್ರಗಳಿಂದ ಹಲ್ಲೆ ಹಾಗೂ ಆಕಸ್ಮಿಕ ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿರುವ ಖೈದಿಗಳು ಏಳು ವರ್ಷಗಳೊಳಗೆ ಶಿಕ್ಷೆಗೊಳಗಾಗಿದ್ದರೆ, ಈ ಕೈದಿಗಳು ಈಗಾಗಲೇ 4 ರಿಂದ 5 ವರ್ಷ ಪೂರೈಸಿರುತ್ತಾರೆ. ಅಂತಹವರನ್ನು ಸನ್ನಡತೆ ಆಧಾರದ ಮೇಲೆ ಕಾನೂನು ಅಡಿಯಲ್ಲಿ ಜಾಮೀನಿನ ಮೇಲೆ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಈ ಬಗ್ಗೆ ಕಾನೂನು ಇಲಾಖೆಯ ಅನುಮತಿ ಪಡೆದು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಕೆ.ಆರ್. ಪೇಟೆ ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ಹರಡಿರುವ ಹಿನ್ನೆಲೆಯಲ್ಲಿ ಈಗಾಗಲೇ ಕ್ವಾರಂಟೈನ್ ನಲ್ಲಿರುವ ಎಲ್ಲ ಪೊಲೀಸ್ ಸಿಬ್ಬಂದಿಗೆ ಗಂಟಲದ್ರವ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಈಗಾಗಲೇ 967 ಪೊಲೀಸ್ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಇವರಲ್ಲಿ 490 ಮಂದಿಗೆ ಗಂಟಲದ್ರವ ಪರೀಕ್ಷೆಗೊಳಪಡಿಸಲಾಗಿದ್ದು, ಉಳಿದವರಿಗೆ ಶೀಘ್ರ ಪರೀಕ್ಷೆ ಮಾಡಲಾಗುವುದು ಎಂದರು.












Click it and Unblock the Notifications