• search
 • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಡ್ಯದಲ್ಲಿ ಸುಮಲತಾ ಬೆಂಬಲಕ್ಕೆ ನಿಂತ ಕಾಂಗ್ರೆಸ್ ಮುಖಂಡರು..?

|
   Lok Sabha Elections 2019 : ಸುಮಲತಾ ಬೆಂಬಲಕ್ಕೆ ನಿಂತ ಮಂಡ್ಯ ಕಾಂಗ್ರೆಸ್ ಕಾರ್ಯಕರ್ತರು | Oneindia Kannada

   ಮಂಡ್ಯ: ಮಾರ್ಚ್ 07: ಮಂಡ್ಯದ ಲೋಕಸಭಾ ಕ್ಷೇತ್ರದ ಕಣ ರಂಗೇರುವುದರೊಂದಿಗೆ ಕುತೂಹಲ, ಕಾತರ, ಜಟಾಪಟಿ, ಹಗ್ಗಜಗ್ಗಾಟ ಹೀಗೆ ಹತ್ತು ಹಲವು ಬೆಳವಣಿಗೆಯನ್ನು ಹುಟ್ಟುಹಾಕುತ್ತಿದ್ದು ರಾಜ್ಯದ ಜನರ ದೃಷ್ಠಿಯನ್ನು ತನ್ನತ್ತ ಸೆಳೆಯತೊಡಗಿದೆ. ಈ ಹಿಂದೆ ಚುನಾವಣೆಗಳು ನಡೆದಾಗಲೆಲ್ಲ ಯಾರು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಎಲ್ಲ ಕಡೆಗಳಲ್ಲಿ ಹೇಗೆ ನಡೆಯುತ್ತವೆಯೋ ಅದೇ ರೀತಿ ನಡೆಯುತ್ತಿತ್ತು. ಮಾಧ್ಯಮಗಳಾಗಲೀ, ಜನಪ್ರತಿನಿಧಿಗಳಾಗಲೀ ಅಷ್ಟೊಂದು ಗಮನಹರಿಸುತ್ತಿರಲಿಲ್ಲ.

   ನಟಿ ರಮ್ಯಾ ಕಣಕ್ಕಿಳಿದಾಗ, ಅಂಬರೀಶ್ ಅವರು ಸ್ಪರ್ಧೆಯಲ್ಲಿದ್ದಾಗ ಸ್ವಲ್ಪ ಮಟ್ಟಿಗೆ ಸುದ್ದಿಯಾಗಿತ್ತು. ಆದರೆ ಈ ಬಾರಿ ಮಾತ್ರ ಇಲ್ಲಿನ ಬೆಳವಣಿಗೆಗಳು ಎಲ್ಲರೂ ಕಾತರದಿಂದ ಕಾಯುವಂತೆ ಮಾಡಿದೆ. ಜೆಡಿಎಸ್ ವರಿಷ್ಠ ದೇವೇಗೌಡರು ಜಾರಿ ಬಿಟ್ಟ ರಾಜಕೀಯ ದಾಳ ಇದೀಗ ಮಂಡ್ಯದತ್ತ ಎಲ್ಲರ ಚಿತ್ತನೆಡುವಂತೆ ಮಾಡಿದೆ. ತನ್ನೊಂದಿಗೆ ಮೊಮ್ಮಕ್ಕಳನ್ನು ದೆಹಲಿಯ ಸಂಸತ್ತುಭವನದ ಮೆಟ್ಟಿಲು ಹತ್ತಿಸುವ ಗೌಡರ ಬಯಕೆ ಈ ಬಾರಿ ಕೆಲಸ ಮಾಡುತ್ತಿದ್ದು ಅದು ನೆರವೇರುತ್ತದೆಯಾ ಎಂಬುದೇ ಇದೀಗ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

   ಸುಮಲತಾ ಅವರು ಬಿಜೆಪಿ ಸೇರುವ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ:ಯಡಿಯೂರಪ್ಪ

   ಹಾಗೆ ನೋಡಿದರೆ ದೇವೇಗೌಡರ ಮೊಮ್ಮಕ್ಕಳ ಪೈಕಿ ಎಚ್.ಡಿ.ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರಿಗೆ ರಾಜಕೀಯದ ಬಗ್ಗೆ ಹೆಚ್ಚಿನ ಒಲವಿತ್ತು. ಕಳೆದ ಕೆಲ ವರ್ಷಗಳ ಹಿಂದೆಯೇ ರಾಜಕೀಯ ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಂಡಿದ್ದರಲ್ಲದೆ, ಸಂಘಟನಾ ಗುಣವೂ ಅವರಲ್ಲಿ ಕಂಡುಬರುತ್ತಿತ್ತು. ತಾನೊಬ್ಬನೇ ನಿಂತು ಒಂದಷ್ಟು ಕಾರ್ಯಕರ್ತರನ್ನು ಸೇರಿಸಿ ಸಭೆ ನಡೆಸುವ, ತೀರ್ಮಾನ ಕೈಗೊಳ್ಳುವ ನಾಯಕತ್ವ ಗುಣಗಳು ಅವರಲ್ಲಿ ಕಂಡು ಬಂದಿದ್ದವಲ್ಲದೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಾವುದಾದರೊಂದು ಕ್ಷೇತ್ರದಿಂದ ಸ್ಪರ್ಧಿಸುವ ಇರಾದೆಯನ್ನು ಹೊಂದಿದ್ದರು. ಆದರೆ ತಾತ ಎಚ್.ಡಿ.ದೇವೇಗೌಡರ ತಂತ್ರವೇ ಬೇರೆಯಾಗಿತ್ತು. ಹೀಗಾಗಿ ವಿಧಾನಸಭೆಗೆ ಸ್ಪರ್ಧಿಸಲು ಅವಕಾಶ ನೀಡಿರಲಿಲ್ಲ. ಮುಂದೆ ಓದಿ...

    ರಾಜಕೀಯ ಕಳೆ ನಿಖಿಲ್ ನಲ್ಲಿ ಕಾಣಿಸುತ್ತಿಲ್ಲ

   ರಾಜಕೀಯ ಕಳೆ ನಿಖಿಲ್ ನಲ್ಲಿ ಕಾಣಿಸುತ್ತಿಲ್ಲ

   ಕಳೆದ ಬಾರಿಯ ವಿಧಾನಸಭಾ ಚುನಾವಣೆ ವೇಳೆ ಪಕ್ಷ ಸಂಘಟನೆಯಲ್ಲಿ ಪ್ರಜ್ವಲ್ ತನ್ನದೇ ಆದ ಪಾತ್ರ ವಹಿಸಿದ್ದನ್ನು ಅಲ್ಲಗಳೆಯುವಂತಿಲ್ಲ. ಪ್ರಜ್ವಲ್ ರೇವಣ್ಣರಿಗೆ ಹೋಲಿಸಿದರೆ ರಾಜಕೀಯ ಕಳೆ, ನಾಯಕತ್ವ ಗುಣ ಯಾವುದೂ ನಿಖಿಲ್ ಕುಮಾರಸ್ವಾಮಿಯಲ್ಲಿ ಕಾಣಿಸುತ್ತಿಲ್ಲ. ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ಎಂಬ ಒಂದೇ ಕಾರಣಕ್ಕೆ ಜನ ಅವರನ್ನು ಒಪ್ಪಿಕೊಳ್ಳಬೇಕಿದೆ. ಸಿನಿಮಾ ರಂಗದತ್ತ ನಿಖಿಲ್ ಕುಮಾರಸ್ವಾಮಿಗೆ ಒಲವಿತ್ತು. ಹೀಗಾಗಿ ಅಲ್ಲಿ ಅವರನ್ನು ಬೆಳೆಸಲು ಎಲ್ಲ ರೀತಿಯ ಪ್ರಯತ್ನವನ್ನು ಕುಮಾರಸ್ವಾಮಿ ಮಾಡಿದರು. ಆದರೆ ಅಲ್ಲಿ ಗಟ್ಟಿಯಾಗಿ ನೆಲೆಯೂರುವ ಯಾವ ಲಕ್ಷಣಗಳು ಕಾಣದ್ದರಿಂದ ಇದೀಗ ರಾಜಕೀಯ ಕ್ಷೇತ್ರಕ್ಕೆ ಎಳೆದು ತರಲಾಗಿದೆ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗಿದೆ.

   ಎರಡು ದಿನದಲ್ಲಿ ನಿರ್ಧಾರ ಪ್ರಕಟಿಸುವೆ : ಸುಮಲತಾ ಅಂಬರೀಶ್‌

    ಸುಲಭ ಗೆಲುವಿನ ಲೆಕ್ಕಾಚಾರದಲ್ಲಿದ್ದ ಎಚ್ ಡಿಡಿ

   ಸುಲಭ ಗೆಲುವಿನ ಲೆಕ್ಕಾಚಾರದಲ್ಲಿದ್ದ ಎಚ್ ಡಿಡಿ

   ಕೆಲವು ಸಮಯಗಳ ಹಿಂದೆ ಜೆಡಿಎಸ್ ನಿಂದ ಯಾರು ಸ್ಪರ್ಧಿಸಿದರೂ ಮಂಡ್ಯದಲ್ಲಿ ಗೆಲವು ಕಾಣುತ್ತಾರೆ ಎಂಬ ಪರಿಸ್ಥಿತಿ ಇತ್ತು. ಅಂಬರೀಶ್ ನಿಧನರಾದ ನಂತರ ಸುಮಲತಾ ಮತ್ತು ಪುತ್ರ ಅಭಿಷೇಕ್ ತಮ್ಮದೇ ಕೆಲಸ ಕಾರ್ಯಗಳಲ್ಲಿ ನಿರತರಾಗಿದ್ದರು. ಅಂಬರೀಶ್ ಅವರ ನಂತರ ಕಾಂಗ್ರೆಸ್ ನಾಯಕರು ತೆರೆಯ ಮರೆಗೆ ಸರಿದಿದ್ದರು. ಬಿಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿತ್ತು. ಹೀಗಾಗಿ ಜೆಡಿಎಸ್ ಭದ್ರಕೋಟೆಯಲ್ಲಿ ನಿಖಿಲ್ ಕುಮಾರಸ್ವಾಮಿಯನ್ನು ಕಣಕ್ಕಿಳಿಸಿದರೆ ಸುಲಭವಾಗಿ ಗೆಲುವು ಪಡೆಯಬಹುದು. ಅಂಬರೀಶ್ ಅವರ ನಿಧನ ನಂತರ ಸುಮಲತಾರಾಗಲೀ, ಅಭೀಷೇಕ್ ಆಗಲೀ ರಾಜಕೀಯಕ್ಕೆ ಬರಲಾರರು ಎಂದೇ ದೇವೇಗೌಡರ ಕುಟುಂಬ ನಂಬಿತ್ತು. ಹೀಗಾಗಿಯೇ ನಿಖಿಲ್ ಕುಮಾರಸ್ವಾಮಿ ಮಂಡ್ಯದಲ್ಲಿ ಕಾಣಿಸಿಕೊಳ್ಳತೊಡಗಿದ್ದರು. ಅಷ್ಟೇ ಅಲ್ಲದೆ ಸುಲಭ ಗೆಲುವಿನ ಲೆಕ್ಕಾಚಾರದಲ್ಲಿದ್ದರು.

   ಸುಮಲತಾರನ್ನು ಬಿಜೆಪಿಗೆ ಸೆಳೆಯಲು ಅಮಿತ್ ಶಾ ಮಾಸ್ಟರ್ ಪ್ಲಾನ್

   ನಿಖಿಲ್ ಗೆ ಕಾಂಗ್ರೆಸ್ ಬೆಂಬಲ ನೀಡುವುದು ಅನಿವಾರ್ಯ

   ನಿಖಿಲ್ ಗೆ ಕಾಂಗ್ರೆಸ್ ಬೆಂಬಲ ನೀಡುವುದು ಅನಿವಾರ್ಯ

   ಯಾವಾಗ ಸುಮಲತಾ ಅಂಬರೀಶ್ ಕಣಕ್ಕಿಳಿಯುವ ಸೂಚನೆ ನೀಡಿದರೋ ದೇವೇಗೌಡರ ಕುಟುಂಬದಲ್ಲಿ ತಳಮಳ ಶುರುವಾಗಿದೆ. ಈಗ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ರಾಜ್ಯದಲ್ಲಿರುವುದರಿಂದ ಸುಮಲತಾ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಸಾಧ್ಯವಿಲ್ಲ. ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿಗೆ ಕಾಂಗ್ರೆಸ್ ಬೆಂಬಲ ನೀಡುವುದು ಅನಿವಾರ್ಯವಾಗಿದೆ. ಇದನ್ನು ಸ್ವತಃ ಸಿದ್ದರಾಮಯ್ಯ ಅವರೇ ಒಪ್ಪಿಕೊಂಡಿದ್ದಾರೆ. ಅದು ಅನಿವಾರ್ಯವೂ ಕೂಡ. ಇನ್ನೇನಿದ್ದರೂ ಸುಮಲತಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕಾಗಿದೆ. ಸುಮಲತಾ ಅವರನ್ನು ಕಣದಿಂದ ಹಿಂದಕ್ಕೆ ಸರಿಯುವಂತೆ ಮಾಡುವ ಎಲ್ಲ ಕಸರತ್ತುಗಳು ನಡೆಯುತ್ತಿದ್ದರೂ ಅವರು ಅದಕ್ಕೆ ಸೊಪ್ಪು ಹಾಕಿದಂತೆ ಕಾಣುತ್ತಿಲ್ಲ. ಇದು ರಾಜ್ಯದ ಕಾಂಗ್ರೆಸ್ ನಾಯಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸತೊಡಗಿದೆ.

   ಸುಮಲತಾ ಬೆನ್ನಿಗೆ ನಿಂತ ಕೈ ಕಾರ್ಯಕರ್ತರು

   ಸುಮಲತಾ ಬೆನ್ನಿಗೆ ನಿಂತ ಕೈ ಕಾರ್ಯಕರ್ತರು

   ಈಗಾಗಲೇ ಜೆಡಿಎಸ್ ನಿಂದ ಹೊರಬಂದು ಕಾಂಗ್ರೆಸ್‌ನತ್ತ ಒಲವು ತೋರಿರುವ ನಾಯಕರು ಮತ್ತು ಮೊದಲಿನಿಂದಲೂ ಕಾಂಗ್ರೆಸ್‌ನಲ್ಲೇ ಕೆಲಸ ಮಾಡುತ್ತಿರುವ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು, ಒಂದಷ್ಟು ರೈತ ನಾಯಕರು, ಮಹಿಳಾ ನಾಯಕಿಯರು ಸುಮಲತಾ ಅವರ ಬೆನ್ನಿಗೆ ನಿಂತಿದ್ದಾರೆ. ಭೇಟಿ ನೀಡಿದಲ್ಲೆಲ್ಲ ಜನ ಸಾಗರವೇ ಹರಿದು ಬರುತ್ತಿದೆ. ಇದು ಸುಮಲತಾ ಅವರಲ್ಲಿ ಇನ್ನಷ್ಟು ಧೈರ್ಯ ತುಂಬಿದೆ. ಇದೆಲ್ಲದರ ನಡುವೆ ಶ್ರೀರಂಗಪಟ್ಟಣದ ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ರಮೇಶ್ ಬಂಡಿಸಿದ್ದೇಗೌಡ ಅವರು ಕಾಂಗ್ರೆಸ್ ವರಿಷ್ಠರ ಕಟ್ಟಾಜ್ಞೆ ನಡುವೆಯೂ ಸುಮಲತಾ ಅವರಿಗೆ ಬೆಂಬಲ ನೀಡುವಂತೆ ಬಹಿರಂಗವಾಗಿಯೇ ಕರೆ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

   ಬೆಂಬಲಿಸಿ, ಅಂಬಿ ಅಭಿಮಾನ ನಿರೂಪಿಸಿ

   ಬೆಂಬಲಿಸಿ, ಅಂಬಿ ಅಭಿಮಾನ ನಿರೂಪಿಸಿ

   ಅರಕೆರೆ ಗ್ರಾಮದಲ್ಲಿರುವ ರಮೇಶ್ ಬಂಡಿಸಿದ್ದೇಗೌಡರ ನಿವಾಸಕ್ಕೆ ಸುಮಲತಾ ಅಂಬರೀಶ್ ಅವರು ಭೇಟಿ ನೀಡಿ ಬೆಂಬಲ ಕೋರಿದ ವೇಳೆ ಮಾತನಾಡಿದ ರಮೇಶ್ ಬಂಡಿಸಿದ್ದೇಗೌಡರವರು, ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ನಾನೇನು ಮಾಡಲಾಗದ ಸ್ಥಿತಿಯಲ್ಲಿದ್ದೇನೆ. ರಾಜ್ಯದ ಸನ್ನಿವೇಶ ಹೇಗಿದೆ ಎನ್ನುವುದು ನಿಮಗೇ ಗೊತ್ತಿದೆ. ಈ ಬಾರಿ ನೀವೆಲ್ಲವರೂ ಸುಮಲತಾ ಅವರನ್ನು ಬೆಂಬಲಿಸುವ ಮೂಲಕ ಅಂಬಿ ಅಭಿಮಾನ ಏನು ಅನ್ನೋದನ್ನ ನಿರೂಪಿಸಿ ಎಂದು ನೆರೆದಿದ್ದ ಕಾರ್ಯಕರ್ತರಿಗೆ ಕರೆನೀಡಿದ್ದಾರೆ.

    ಗೆಲುವಿಗಾಗಿ ದೇವರ ಮೊರೆ ಹೋದ ಸುಮಲತಾ

   ಗೆಲುವಿಗಾಗಿ ದೇವರ ಮೊರೆ ಹೋದ ಸುಮಲತಾ

   ಇನ್ನೊಂದೆಡೆ ಕೆಪಿಸಿಸಿ ಸದಸ್ಯ ಇಂಡುವಾಳು ಸಚ್ಚಿದಾನಂದ್ ಕಾಂಗ್ರೆಸ್‌ನ ನೋಟಿಸ್ ಗೂ ಜಗ್ಗಲ್ಲ, ವಜಾಕ್ಕೂ ಬಗ್ಗೊಲ್ಲ ಎಂದಿದ್ದಾರೆ. ಅರಕೆರೆ ಗ್ರಾಮಕ್ಕೆ ಸುಮಲತಾ ಅವರು ತೆರಳಿದ ವೇಳೆ ಗ್ರಾಮದ ಅಭಿಮಾನಿಗಳು ಎತ್ತಿನಗಾಡಿ ಮೆರವಣಿಗೆಯಲ್ಲಿ ಬರಮಾಡಿಕೊಂಡಿದ್ದು ನಿಮ್ಮೊಂದಿಗೆ ನಾವಿರುವುದಾಗಿ ಹೇಳಿರುವುದು ಇನ್ನಷ್ಟು ಶಕ್ತಿ ಬಂದಂತಾಗಿದೆ. ಇದೆಲ್ಲದರ ನಡುವೆ ಸುಮಲತಾ ಅಂಬರೀಶ್ ಅವರು ಶ್ರೀರಂಗಪಟ್ಟಣದ ಶ್ರೀ ನಿಮಿಷಾಂಭ ಹಾಗೂ ಶ್ರೀರಂಗನಾಥಸ್ವಾಮಿಯ ದರ್ಶನ ಪಡೆಯುವ ಮೂಲಕ ಚುನಾವಣಾ ಅಖಾಡದಲ್ಲಿ ತನ್ನನ್ನು ಗೆಲ್ಲಿಸುವಂತೆ ದೇವರಲ್ಲಿ ಮೊರೆಯಿಟ್ಟಿದ್ದಾರೆ. ಮುಂದಿನ ಎಲ್ಲ ಬೆಳವಣಿಗೆಗಳು ಕುತೂಹಲ ಕೆರಳಿಸುವತ್ತ ಸಾಗುತ್ತಿದೆ.

   English summary
   Nikhil Kumaraswamy is sure to compete in Mandya. Bot loyal Congress activists and leaders, some farmer leaders and women leaders supported to Sumalatha in Mandya. Here's a report on this.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X