ಮಂಡ್ಯ ಜಿಲ್ಲೆಯ ಮಳೆ ಸಂತ್ರಸ್ತರಿಗೆ ತಕ್ಷಣವೇ ಅಗತ್ಯ ಪರಿಹಾರ: ಸಚಿವ ಕೆ ಗೋಪಾಲಯ್ಯ
ಮಂಡ್ಯ, ಸೆಪ್ಟೆಂಬರ್ 03: ಮಂಡ್ಯ ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾದ ಪ್ರದೇಶಗಳ ಸಂತ್ರಸ್ತರಿಗೆ ತಕ್ಷಣವೇ ಪರಹಾರವನ್ನು ಒದಗಿಸುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ತಿಳಿಸಿದರು.
ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಗೆ ಮೈಸೂರು- ಬೆಂಗಳೂರು ದಶಪಥ ರಸ್ತೆ ಕಾಮಗಾರಿ ಹಾನಿಯಾಗಿದೆ. ಈ ಕಾಮಗಾರಿಯನ್ನು ವೀಕ್ಷಿಸಿದ ಸಚಿವರು, ಮಾಧ್ಯಮಗಳ ಜೊತೆಗೆ ಮಾತನಾಡಿದರು. ಮಂಡ್ಯ ಜಿಲ್ಲೆಯಲ್ಲಿ ಬೆಳೆಹಾನಿ, ಜಾನುವಾರು ಸಾವು, ಮನೆಗಳ ಹಾನಿಗಳಿಗೆ ತಕ್ಷಣವೇ ಪರಹಾರದ ಹಣವನ್ನು ಬಿಡುಗಡೆ ಮಾಡಿಸಲಾಗುತ್ತಿದೆ ಎಂದು ಹೇಳಿದರು.
ಕೆ.ಆರ್.ಪೇಟೆ, ಮದ್ದೂರುಗಳಲ್ಲಿ ಸಾಕಷ್ಟು ಹಾನಿಯಾಗಿದೆ.ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಹಾಳಾಗಿರುವ ರಸ್ತೆ, ಕೆರೆ ಒಡೆದು ಹೋಗಿರುವುದು ಸೇರಿದಂತೆ ಇತ್ಯಾದಿ ಹಾನಿಯ ಅಂದಾಜನ್ನು ಮಳೆ ನಿಂತ ಮೇಲೆ ಮಾಡಲು ಸಾಧ್ಯವಾಗುತ್ತದೆ ಎಂದು ಸಚಿವರು ತಿಳಿಸಿದರು.

ನುಡಿದಂತೆ ನಡೆದ ಸರ್ಕಾರ:
ಮಂಡ್ಯ ಜಿಲ್ಲೆಯ ಜನರ ಜೀವನಾಡಿ ಎನಿಸಿರುವ ಮೈ ಶುಗರ್ ಸಕ್ಕರೆ ಕಾರ್ಖಾನೆ ಪುನಾರಂಭದ ವಿಚಾರದಲ್ಲಿ ಬಿಜೆಪಿ ಸರ್ಕಾರವು ನುಡಿದಂತೆ ನಡೆದಿದೆ. ಕಾರ್ಖಾನೆ ಆರಂಭ ಕುರಿತು ಸಂಸದರಾದ ಸುಮಲತಾ ಅಂಬರೀಶ್ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದರು.ಇದಕ್ಕೆ ಸರ್ಕಾರ ಸ್ಪಂದಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ತಿಳಿಸಿದರು. ಈ ಸಂದರ್ಭದಲ್ಲಿ ಸಂಸದೆ ಸುಮಲತಾ ಅಂಬರೀಶ್ ಇತರರು ಉಪಸ್ಥಿತರಿದ್ದರು.

ಮಂಡ್ಯ ಜಿಲ್ಲೆಯ ಬಗ್ಗೆ ಸಿಎಂಗೆ ಅಪಾರ ಕಾಳಜಿ:
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮಂಡ್ಯ ಜಿಲ್ಲೆಯ ಬಗ್ಗೆ ವಿಶೇಷ ಕಾಳಜಿ ಇದೆ. ಈ ಜಿಲ್ಲೆಗೆ ಅಗತ್ಯವಾದ ಅನುದಾನ ಬಿಡುಗಡೆ ಮಾಡುವ ಭರವಸೆಯೂ ಇದೆ ಎಂದು ಸಚಿವ ಕೆ ಗೋಪಾಲಯ್ಯ ಮಾಹಿತಿ ನೀಡಿದರು. ಇದೇ ವೇಳೆ ಹಾನಿಯ ವರದಿಯನ್ನು ಅಧಿಕಾರಿಗಳಿಂದ ತರಿಸಿಕೊಂಡು ಸರ್ಕಾರಕ್ಕೆ ನೀಡಿ ಅನುದಾನ ತರಿಸಿಕೊಡುವ ಕೆಲಸ ಮಾಡಲಾಗುವುದು ಎಂದು ಭರವಸೆ ಕೊಟ್ಟರು.












Click it and Unblock the Notifications