ಸುಮಲತಾ ಗೆದ್ದಿದ್ದೇ ಕಾಂಗ್ರೆಸ್ ಮತಗಳಿಂದ; ಮೈತ್ರಿ ಅಭ್ಯರ್ಥಿ ಸೋಲಿಸಿ ಎಂದ ಸಿಎಂ ಸಿದ್ದರಾಮಯ್ಯ
ಸುಮಲತಾ ಅವರು ಕಳೆದ ಬಾರಿ ಕಾಂಗ್ರೆಸ್ ಮತಗಳಿಂದಲೇ ಗೆದ್ದಿದ್ದಾರೆ. ಈ ಬಾರಿ ಸುಮಲತಾ, ಕುಮಾರಸ್ವಾಮಿ ಆಗಲೀ, ಅಪವಿತ್ರ ಮೈತ್ರಿ ಅಭ್ಯರ್ಥಿಯನ್ನು ಸೋಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತದಾರರಿಗೆ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ನಗರದ ಮಂಡ್ಯ ವಿವಿ ಆವರಣದಲ್ಲಿ ನಡೆದ ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅನ್ನಭಾಗ್ಯದ ಏಳು ಕೆ.ಜಿ. ಅಕ್ಕಿಯನ್ನು ಐದು ಕೆಜಿಗೆ ಇಳಿಸಿದ ಯಡಿಯೂರಪ್ಪ ಅವರನ್ನು ಪ್ರಶ್ನೆ ಕೇಳಿದರೂ ಏರಿಕೆ ಮಾಡಲಿಲ್ಲ. ಇಂತಹವರನ್ನು ಗೆಲ್ಲಿಸಬೇಕೆ ಎಂದು ಪ್ರಶ್ನಿಸಿದರು.

ವಿಧಾನಸಭೆ, ಲೋಕಸಭೆ ಚುನಾವಣೆ ಯಾವುದೇ ಇರಲಿ, ಇಲ್ಲಿನ ಜನ ಬಹಳ ಉತ್ತಮವಾದ ತೀರ್ಮಾನ ಮಾಡುತ್ತಾರೆ. ಹಾಗಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಒಂದು ಕ್ಷೇತ್ರದಲ್ಲಿ ಸೋಲನ್ನು ಅನುಭವಿಸಿದ್ದೇವೆ. ರಾಜ್ಯದ ಜನ ನಿರೀಕ್ಷೆಗೂ ಮೀರಿ ಆಶೀರ್ವಾದ ಮಾಡಿ 136 ಸ್ಥಾನಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಕರ್ನಾಟಕದ ಮತದಾರರು ಪ್ರಬುದ್ಧವಾದ ತೀರ್ಮಾನ ಕೊಡುತ್ತಾರೆ. ಹಾಗಾಗಿ ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎಂದರು.
ಜನ ಸರಿಯಾದ ತೀರ್ಮಾನ ಮಾಡ್ತಾರೆ
ಯಾರು ಎಷ್ಟೇ ಸುಳ್ಳು ಹೇಳಿದರೂ, ಭರವಸೆ ಕೊಟ್ಟರು, ದಾರಿ ತಪ್ಪಿಸಿದರೂ ಸಹ ಮಂಡ್ಯ ಜನ ಸರಿಯಾದ ತೀರ್ಮಾನ ಮಾಡುತ್ತಾರೆ. ಯಾರು ನುಡಿದಂತೆ ನಡೆಯುತ್ತಾರೆ. ಯಾರು ಕೊಟ್ಟ ಮಾತಿನಂತೆ ನಡೆದುಕೊಲ್ಳುತ್ತಾರೆ. ಅವರನ್ನು ಬೆಂಬಲಿಸಿದರೆ ರಾಜ್ಯದ ಅಭಿವೃದ್ಧಿ ಸಾಧ್ಯವಾಗುತ್ತದೆ. ಅದೇ ರೀತಿ ಕೊಟ್ಟ ಮಾತನ್ನು ಉಳಿಸಿಕೊಳ್ಳುವವರ ಪರವಾಗಿ ನಡೆದುಕೊಳ್ಳುವುದೂ ನಿಮ್ಮ ಜವಾಬ್ದಾರಿ ಎಂದು ಸಲಹೆ ನೀಡಿದರು.
ಅಧಿಕಾರಕ್ಕೆ ಬಂದ ತಕ್ಷಣ ಐದೂ ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದ್ದೇವೆ. ಜೂ. 11ರಂದು ಶಕ್ತಿ ಯೋಜನೆಗೆ ಚಾಲನೆ ಕೊಟ್ಟೆವು. ಕರ್ನಾಟಕದಲ್ಲಿ 3.5 ಕೋಟಿ ಮಹಿಳೆಯರು ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ ಮಾಡಿದ್ದಾರೆ. ಇಡೀ ರಾಜ್ಯದಲ್ಲಿ ಪ್ರತಿ ದಿನ 50 ರಿಂದ 60 ಲಕ್ಷ ಮಹಿಳೆಯರು ಉಚಿತವಾಗಿ ಬಸ್‌ಗಳಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಮಂಡ್ಯದಲ್ಲಿ ಇಲ್ಲಿಯವರೆಗೆ 4.60 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. 170 ಕೋಟಿ ಮಹಿಳೆಯರು ರಾಜ್ಯದಲ್ಲಿ ಪ್ರಯಾಣ ಮಾಡಿದ್ದಾರೆ ಎಂದರು.
ಜುಲೈನಲ್ಲಿ ಅನ್ನಭಾಗ್ಯ ಕಾರ್ಯಕ್ರಮ ಕೊಟ್ಟಿದೇವೆ. ಹಿಂದೆ ನಾವು 7 ಕೆ.ಜಿ ಅಕ್ಕಿ ಕೊಡುತ್ತಿದ್ದೆವು. ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದ ಬಿಜೆಪಿಯವರು ಜನರ ಆಶೀರ್ವಾದ ಪಡೆಯದೇ ಇದ್ದವರು, ಕೇವಲ ಇನ್ನೊಬ್ಬರ ಹೆಗಲ ಮೇಲೆ ಕುಳಿತುಕೊಂಡು ಬಂದಿರುವುದು ಹೆಚ್ಚು. ಮನೆಗೆ ಹೋಗಿ ಮುಖ್ಯಮಂತ್ರಿ ಮಾಡಿದ್ದೆವು. ಏಕೆಂದರೆ ಕೋಮುವಾದಿ ಸರ್ಕಾರ ಬರಬಾರದು ಎನ್ನುವ ಕಾರಣಕ್ಕೆ. ಕುಮಾರಸ್ವಾಮಿ ವೆಸ್ಟೆಂಡ್ ಹೊಟೇಲ್‌ನಲ್ಲಿ ಉಳಿದು ಅಧಿಕಾರ ಕಳೆದುಕೊಂಡರು. ಯಡಿಯೂರಪ್ಪ 17 ಜನರನ್ನು ಜೊತೆಯಲ್ಲಿಟ್ಟುಕೊಂಡು ಅಧಿಕಾರದಿಂದ ಕೆಳಗಿಳಿಸಿದರು. ಇಂದು ಅವರೊಂದಿಗೇ ಇದ್ದಾರೆ ಎಂದು ಜೆಡಿಎಸ್-ಬಿಜೆಪಿ ವಿರುದ್ಧ ಕಿಡಿ ಕಾರಿದರು.
ಕೇಂದ್ರ ಸರ್ಕಾರ ಬಡವರಿಗೆ ಅಕ್ಕಿ ಕೊಡುವುದನ್ನು ನಿಲ್ಲಿಸಿತು ಬಡವರ ವಿರೋಧಿ ಬಿಜೆಪಿ ಸರ್ಕಾರವನ್ನು ಬೆಂಬಲಿಸಿಬೇಕಾ ಎಂದು ಪ್ರಶ್ನಿಸಿದ ಅವರು, ಪ್ರತಿಯೊಬ್ಬರಿಗೂ 170 ರೂ. ಕೊಡುತ್ತಿದ್ದೇವೆ. ಇದಕ್ಕಾಗಿ 166 ಕೋಟಿ ಖರ್ಚು ಮಾಡಿದ್ದೇವೆ. ಗೃಹಜ್ಯೋತಿಯಲ್ಲಿ 4.66 ಲಕ್ಷ ಜನರು ನೋಂದಣಿ ಮಾಡಿಕೊಂಡಿದ್ದು, ಗೃಹಲಕ್ಷ್ಮಿ 4 ಲಕ್ಷಕ್ಕೂ ಹೆಚ್ಚು ನೋಂದಣಿ ಮಾಡಿದ್ದಾರೆ. ಯುವನಿಧಿಗೆ 3115 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಬೆಲೆ ಏರಿಕೆಯಿಂದ ಪೆಟ್ರೋಲ್, ಡೀಸೆಲ್, ಗೊಬ್ಬರ ಬೆಲೆ ಏರಿಕೆಯ ಕಷ್ಟದ ದಿನಗಳಲ್ಲೂ ಬಡವರಿಗೆ ಸಹಾಯ ಮಾಡುತ್ತಿದ್ದೇವೆ ಎಂದು ಹೇಳಿದರು.
ಬಿಜೆಪಿಯವರ ಮೇಲೆ ಈಗ ಜೆಡಿಎಸ್‌ಗೆ ಪ್ರೀತಿ ಬಂದಿದೆ. ಅವರ ತಾಳಕ್ಕೆ ತಕ್ಕೆಂತೆ ಕುಣಿಯುತ್ತಾರೆ. ಗ್ಯಾರಂಟಿಗಳನ್ನು ಟೀಕೆ ಮಾಡುತ್ತಿದ್ದಾರೆ. ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಎಚ್ಚರವಾಗಿದ್ದು, ನಿಮ್ಮ ಪರವಾಗಿ ಕೆಲಸ ಮಾಡುವ ನಮ್ಮ ಅಭ್ಯರ್ಥಿ ವೆಂಕಟರಮಣೇಗೌಡ ಅವರನ್ನು ಲೋಕಸಭೆಗೆ ಕಳುಹಿಸಿಕೊಡಬೇಕು ಎಂದು ಮನವಿ ಮಾಡಿದರು.












Click it and Unblock the Notifications